ರಾಮನಗರ: ಬೊಂಬೆನಾಡು ಚನ್ನಪಟ್ಟಣದ (Channapatna) ಬಮೂಲ್ ಉತ್ಸವದಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹೌದು, ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ, ಬಿಜೆಪಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwar) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೇ ವೇಳೆ 2023ರ ವಿಧಾನಸಭಾ ಚುನಾವಣೆ (Karnataka Election) ನನ್ನ ಕೊನೆಯ ವಿಧಾನಸಭಾ ಚುನಾವಣೆ. 2028ರ ಚುನಾವಣೆಗೆ ನಿಮ್ಮಲ್ಲೇ ಅಭ್ಯರ್ಥಿ ಆಗಬೇಕು ಎಂದು ಹೇಳಿದ್ದಾರೆ. ಆ ಮೂಲಕ ಮುಂದಿನ ಸಾರ್ವತ್ರೀಕ ಚುನಾವಣೆಯಲ್ಲಿ ಜೆಡಿಎಸ್ (JDS) ಪಕ್ಷದಿಂದ ಸಾಮಾನ್ಯ ಅಭ್ಯರ್ಥಿಗೆ ಚನ್ನಪಟ್ಟಣದಲ್ಲಿ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ. ಮಂಡ್ಯದ (Mandya) ಕಾರ್ಯಕರ್ತರು ಕೆ.ಆರ್ ಪೇಟೆಯಲ್ಲಿ ಬಂದು ನಿಲ್ಲಿ ಎಂದು ಒತ್ತಾಯ ಮಾಡಿದ್ದರು. ಮಂಡ್ಯ ಜಿಲ್ಲೆಯ ಕಾರ್ಯಕರ್ತರೂ ಮನವಿ ಮಾಡಿದ್ದರು. ಚನ್ನಪಟ್ಟಣದಲ್ಲಿ ನಿಮ್ಮನ್ನು ಸೋಲಿಸಲು ಮಸಲತ್ತು ಮಾಡುತ್ತಿದ್ದಾರೆ. ಆದರೆ ನಾನು ಹೆದರಲ್ಲ ಎಂದು ಟಾಂಗ್ ನೀಡಿದ್ದಾರೆ.
ನಾನು ಹೆದರುವುದು ಜನತೆಗೆ ಮಾತ್ರ!
ಚನ್ನಪಟ್ಟಣದ ದೊಡ್ಡಮಳೂರು ಗ್ರಾಮದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಇದು ಬೆಂಗಳೂರು ಹಾಲು ಒಕ್ಕೂಟ ಸಹಕಾರ ಸಂಘದ ಕಾರ್ಯಕ್ರಮ ಅಲ್ಲ. ಇದು ಜಯಮುತ್ತು ಸಹಕಾರ ಸಂಘದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲು ಬಮೂಲ್ ನಿರಾಕರಿಸಿದೆ. ಎಲ್ಲಾ ಅಧಿಕಾರಿಗಳು ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೊದು ಗೊತ್ತಿದೆ.
ಕೇವಲ ಇನ್ನೆರಡು ತಿಂಗಳು ಇದೆ ಅಷ್ಟೇ. ಚನ್ನಪಟ್ಟಣ ತಾಲೂಕಿನ ಹಾಲು ಉತ್ಪಾದಕರ ಸಂಘದ ಎಆರ್, ಡಿಆರ್ ಗಳ ಆಟ ನೋಡಿದ್ದೇನೆ. ಪ್ರತಿನಿತ್ಯ ಲೂಟಿ ಮಾಡುತ್ತಿರುವವ ಬಗ್ಗೆ ಮಾಹಿತಿ ಇದೆ. ಸಹಕಾರ ಕ್ಷೇತ್ರದಲ್ಲಿ ಕಾನೂನೇ ಇಲ್ಲದಂತಾಗಿದೆ. ಸಹಕಾರಿ ಕ್ಷೇತ್ರದ ಅಧಿಕಾರಿಗಳ ಈ ಕಳ್ಳಾಟ ಇನ್ನೆರಡು ತಿಂಗಳು ಅಷ್ಟೇ. ದೈವ ಕೃಪೆಯಿಂದ ಹಿಂದೆ ಸಿಎಂ ಆಗಿದ್ದೆ. ನಾನು ಯಾರಿಗೂ ಕಿರುಕುಳ ನೀಡುವ ಕೆಲಸ ಮಾಡಿಲ್ಲ. ಎಲ್ಲವನ್ನೂ ಗಮನಿಸುತ್ತಿದ್ದೇನೆ. ನಾನು ಜನತೆಗೆ ಗೌರವಕೊಟ್ಟು ಬದುಕಿದ್ದೇನೆ. ನಾನು ಹೆದರುವುದು ಜನತೆಗೆ ಮಾತ್ರ ಎಂದರು.
ಇದನ್ನೂ ಓದಿ: Parameshwara: ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಜಿ ಡಿಸಿಎಂ ಜಿ ಪರಮೇಶ್ವರ್ ಆಪ್ತ; ಕಾರಣವೇನು?
ನಾನು ಅಧಿಕಾದಲ್ಲಿದ್ದಾಗ ಎಂದೂ ನಾನು ದರ್ಪ ತೋರಿಲ್ಲ. ಕಾನೂನು ಬಾಹಿರ ಚಟುವಟಿಕೆಯನ್ನ ನಾವು ಮಾಡಿಲ್ಲ. ಆದರೆ ಯಾರೋ ನಮ್ಮಲ್ಲೇ ಇದ್ದವನು ಈಗ ಬಿಜೆಪಿಗೆ ಹೋಗಿದ್ದಾನೆ. ಈ ತಾಲೂಕಿನವರು ಸ್ವಾಭಿಮಾನಿ ನಡಿಗೆ ಮಾಡುತ್ತಿದ್ದಾನೆ. ಆವತ್ತು ಕಾಲುಬಾಯಿ ಜ್ವರ ಬಂದು ಹಸುಗಳು ಸತ್ತಾಗ ಎಲ್ಲಿದ್ದರು ಇವರು. ಈ ನಾಮನಿರ್ದೇಶಿತ ಸದಸ್ಯ ಲಿಂಗೇಶ್ ಕುಮಾರ್ ಎಲ್ಲಿದ್ದ. ಈ ಮಹಾನುಭಾವ ಯೋಗೇಶ್ವರ್ ಈಗ ಸ್ವಾಭಿಮಾನಿ ನಡಿಗೆ ಅಂತ ಮಾಡುತ್ತಿದ್ದಾನೆ. ಏನೋ ಉದುರಿಸಿಬಿಡ್ತಿನಿ ಅಂತ, ಇಂಥ ಪೋಳ್ಳು ಮಾತುಗಳನ್ನ ಜನ ನಂಬಲ್ಲ ಎಂದು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದೇ ರಾಜಕಾರಣಿ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ನಿಲ್ಲುವ ಎದೆಗಾರಿಕೆ ಮಾಡಲಿಲ್ಲ
ಈ ಹಿಂದೆ ಅನಿತಾ ಕುಮಾರಸ್ವಾಮಿ ಅವರನ್ನು ಮಧುಗಿರಿಯಲ್ಲಿ ನಿಲ್ಲಿಸಿದ್ದೆ. ಆಗ ಅಭ್ಯರ್ಥಿ ಕೊರತೆ ಇತ್ತು. ಅಲ್ಲಿಯ ಜನ ನನ್ನ ಹೆಂಡತಿಯನ್ನು ಗೆಲ್ಲಿಸಿದ್ದರು. ನಂತರ 2013ರಲ್ಲಿ ನೀವು ಒತ್ತಡ ಹಾಕಿದರೂ ಅಂತ ಅನಿತಾ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣಕ್ಕೆ ಕಳುಹಿಸಿದ್ದೆ. ಬಳಿಕ 2018ರ ಚುನಾವಣೆಯಲ್ಲಿ ನೀವೆಲ್ಲಾ ಬಂದು ಗಲಾಟೆ ಮಾಡಿದ್ರಿ. ನಾನು ಸ್ಥಳೀಯ ಕಾರ್ಯಕರ್ತರನ್ನು ನಿಲ್ಲಿಸಿ ಅಂದೆ. ಆದರೆ ನೀವು ಹಠ ಹಿಡಿದು ಎರಡೂ ಕ್ಷೇತ್ರದಲ್ಲಿ ನಿಲ್ಲುವ ಹಾಗೆ ಮಾಡಿದ್ರಿ. ಬಹುಶಃ ಯಾವುದೇ ರಾಜಕಾರಣಿ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ನಿಲ್ಲುವ ಎದೆಗಾರಿಕೆ ಮಾಡಲಿಲ್ಲ. ಆ ಧೈರ್ಯ ಮಾಡಿದ್ದು ನೀವು.
ರಾಮನಗರ ಕ್ಷೇತ್ರದ ಜನ ನಾನಿಲ್ಲದಿದ್ದರೂ ಗೆಲ್ಲಿಸಿಕೊಂಡು ಬರುತ್ತಾರೆ. ನನ್ನನ್ನು ಬೆಳೆಸಿದ್ದೆ ರಾಮನಗರ ಜಿಲ್ಲೆಯ ಜನ. ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿರಬಹುದು. ಆದರೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ. ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಕುಮಾರಸ್ವಾಮಿ ಸಿಎಂ ಆದರೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡುತ್ತಾರೆ ಅಂತ ಹೇಳಿದರು. ಆದರೆ ಈಗ ಮಾಡಲಿಲ್ಲ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ದೇವರ ಸಾಕ್ಷಿಯಾಗಿ ಈ ಹಿಂದೆ ಎಂದೂ ಹೀಗೆ ಹೇಳಿರಲಿಲ್ಲ ಎಂದರು.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಹೊಸ ಬಾಂಬ್!
ಇಲ್ಲೊಬ್ಬ ಮಹಾನುಭಾವ ಸುಳ್ಳು ಹೇಳಿಕೊಂಡು ತಿರುಗ್ತಿದ್ದಾನೆ. ಪಾಪ ಈಗೇನೋ ಸಿಎಂ ಆಗ್ತಾನಂತೆ. ಚನ್ನಪಟ್ಟಣದ ಹಳ್ಳಿ ಹಳ್ಳಿಗಳಲ್ಲಿ ನಾನು ಮುಖ್ಯಮಂತ್ರಿ ಆಗುತ್ತೀನಿ ಅಂತ ಹೇಳಿಕೊಂಡು ಓಡಾಡುತ್ತಿದ್ದಾನೆ. ಚನ್ನಪಟ್ಟಣದ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಸ್ಥಗಿತ ಯೋಗೇಶ್ವರ್ ಕೊಡುಗೆ. ಅದು ಅವನ ಕರ್ಮದ ಫಲದಿಂದ ಇವತ್ತೂ ಆಗಿಯೇ ಇದೆ. ಇನ್ನೂ ಆರು ತಿಂಗಳು ನನ್ನ ಸರ್ಕಾರ ಇದ್ದಿದ್ದರೆ ಅದು ಮುಗಿಯುತ್ತಿತ್ತು. ನನ್ನ ಸರ್ಕಾರ ತೆಗೆದು ಅದಕ್ಕೆ ಅಡ್ಡಗಾಲು ಹಾಕಿದ್ದೆ ಅವನು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಹೊಸ ಬಾಂಬ್ ಸಿಡಿಸಿದರು.
ಕ್ಷೇತ್ರ ಬದಲಾಯಿಸಲು ಟೂರಿಂಗ್ ಟಾಕೀಸ್ ಅಲ್ಲ?
ಇದೇ ವೇಳೆ 2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ವಿಧಾನಸಭಾ ಚುನಾವಣೆ ಎಂದ ಕುಮಾರಸ್ವಾಮಿ, 2028ರ ಚುನಾವಣೆಗೆ ನಿಮ್ಮಲ್ಲೇ ಅಭ್ಯರ್ಥಿ ಆಗಬೇಕು ಎಂದು ಹೇಳಿದರು. ಅಲ್ಲದೆ, ನಾನು ಹೆದರಲ್ಲ. ಈ ಕ್ಷೇತ್ರದ ಜನರು ಯಾವತ್ತೂ ನನ್ನನ್ನು ಕೈಬಿಟ್ಟಿಲ್ಲ. ನಾನು ಬೇರೆಯವರ ತರ ಕ್ಷೇತ್ರ ಬದಲಾಯಿಸಲು ಟೂರಿಂಗ್ ಟಾಕೀಸ್ ಅಲ್ಲ.
ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗುವ ಪ್ರಶ್ನೆಯೇ ಇಲ್ಲ. ಹಾಗಾಗಿ ಕಾರ್ಯಕರ್ತರು ಒಗ್ಗಟ್ಟಾಗಿ, ನಿಮ್ಮಲ್ಲೊಬ್ಬ ಲೀಡರ್ ಹುಟ್ಟಿಕೊಳ್ಳಬೇಕು. ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿರಿ. 2028ಕ್ಕೆ ಓರ್ವ ಅಭ್ಯರ್ಥಿಯನ್ನ ರೆಡಿ ಮಾಡಿ. ರಾಮನಗರದಲ್ಲೂ ಕಣ್ಣೀರಾಕಿ ಒಬ್ಬನನ್ನು ಬೆಳೆಸಿದೆ. ಆದರೆ ಅವರು ಬೆನ್ನಲ್ಲೇ ಚೂರಿ ಹಾಕಿದರು ಎಂದು ಆರೋಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ