ರಾಮನಗರ: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಿರುದ್ಧ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ. ರಾಮನಗರದಲ್ಲಿ (Ramanagara) ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾಜಿದ್ದಿ ಹೋರಾಟ ನಡೆಯಲಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ರಾಮನಗರದಲ್ಲಿ ಡಿಕೆ ಸುರೇಶ್ (DK Suresh) ಸ್ಪರ್ಧೆ ಮಾಡಲಿದ್ದಾರೆ ಎಂಬ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸುಳಿವು ಕೂಡ ಕೊಟ್ಟಿದ್ದಾರೆ. ರಾಮನಗರದಿಂದ ಡಿಕೆ ಸುರೇಶ್ ಸ್ಪರ್ಧೆ ಮಾಡಲಿ ಎಂಬ ಒತ್ತಾಯ ಇದೆ. ಈ ಬಗ್ಗೆ ಅವರೊಂದಿಗೆ ಮಾತನಾಡಿ ಒಂದು ನಿರ್ಧಾರಕ್ಕೆ ಬರುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ರಾಮನಗರ ಕ್ಷೇತ್ರ ಈ ಬಾರಿ ಎಲ್ಲರ ಗಮನ ಸೆಳೆಯುತ್ತಿದೆ.
ನನಗೆ ಸುಖಾಸುಮ್ಮನೆ ಉಪಚುನಾವಣೆ ಮಾಡುವುದು ಇಷ್ಟವಿಲ್ಲ
ರಾಮನಗರದಿಂದ ಡಿಕೆ ಸುರೇಶ್ ಸ್ಪರ್ಧೆ ಮಾಡಲಿ ಎಂಬ ಪ್ರಸ್ತಾಪ ನಮ್ಮ ಎದುರಿದೆ. ಇದನ್ನು ನಾನು ತಳ್ಳಿ ಹಾಕುವುದಿಲ್ಲ. ಆದರೆ ಈ ಬಗ್ಗೆ ನಾನು ಕುಳಿತುಕೊಂಡು ಇದುವರೆಗೂ ಮಾತನಾಡಿಲ್ಲ. ಎಲ್ಲರೊಂದಿಗೂ ಕೂತು ಮಾತನಾಡುತ್ತೇನೆ. ಸುರೇಶ್ ಅವರ ಸ್ಪರ್ಧೆ ಮಾಡಲಿ ಎಂಬ ಸಂದೇಶ ಬಂದಿದೆ. ಆದರೆ ಈ ಬಗ್ಗೆ ಸುರೇಶ್ ಅವರ ಬಳಿಯೂ ಮಾತನಾಡಿಲ್ಲ, ಕಾರ್ಯಕರ್ತರ ಬಳಿಯೂ ಮಾತನಾಡಿಲ್ಲ.
ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರು ನನಗೆ ಬಹಳ ದಿನಗಳಿಂದ ಒತ್ತಾಯ ಮಾಡುತ್ತಾ ಬಂದಿದ್ದಾರೆ. ನನಗೆ ಸುಖಾಸುಮ್ಮನೆ ಉಪಚುನಾವಣೆ ಮಾಡುವುದು ಇಷ್ಟವಿಲ್ಲ, ಆದರೂ ಪಕ್ಷ ಹೇಳುತ್ತಿದೆ. ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪರ್ಧೆ ಮಾಡಿದ್ದಾರೆ.
ಇದನ್ನೂ ಓದಿ: Bengaluru: ಶೌಚಾಲಯಕ್ಕೆ ಹೋಗಿದ್ದಾಗ ಬ್ಯಾಗ್ನಲ್ಲಿತ್ತು ₹1 ಕೋಟಿ ಚಿನ್ನ; ಸಿನಿಮೀಯ ಶೈಲಿಯಲ್ಲಿ ಚಿನ್ನದ ಗಟ್ಟಿ ಕಳವು
ಅವರು ಇಲ್ಲಿ ಯಾಕೆ ಬರುತ್ತಾರೆ? ಇಲ್ಲಿ ಯಾಕೆ ನಿಲ್ಲುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳಿದರೆ ಬಾಲಿಶ ಹೇಳಿಕೆ ಆಗುತ್ತದೆ. ಆದ್ದರಿಂದ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಅವರು ನಿಲ್ಲುತ್ತಾರಾ ಇಲ್ಲವೇ ಎಂಬ ಪ್ರಶ್ನೆ ಅವರ ಪಕ್ಷಕ್ಕೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಕನಿಷ್ಠ 3 ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆ
2023ರ ಸಾರ್ವತ್ರಿಕ ಚುನಾವಣೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ನಿರ್ಣಾಯಕವಾಗಿದೆ. ಏಕೆಂದರೆ ಡಿಕೆ ಶಿವಕುಮಾರ್ ಅವರು ರಾಜ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಮ್ಯಾಜಿಕ್ ನಂಬರ್ ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದು, ಇದರ ಭಾಗವಾಗಿ ಡಿಕೆ ಶಿವಕುಮಾರ್ ಅವರ ರಾಮನಗರ ಜಿಲ್ಲೆಯಲ್ಲಿ ಕನಿಷ್ಠ ಮೂರು ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಆದರೆ ಸದ್ಯ ಡಿಕೆ ಶಿವಕುಮಾರ್ ಅವರ ಕನಕಪುರ ಕ್ಷೇತ್ರ ಹೊರತುಪಡಿಸಿ ಉಳಿದ ಮೂರರಿಂದ ನಾಲ್ಕು ಸ್ಥಾನ ಅಂದರೆ ಚನ್ನಪಟ್ಟಣ, ರಾಮನಗರ ಹಾಗೂ ಮಾಗಡಿ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಶಾಸಕರಿದ್ದಾರೆ. ಆದ್ದರಿಂದ ಡಿಕೆ ಸುರೇಶ್ ಅವರನ್ನು ರಾಮನಗರದಿಂದ ಕಣಕ್ಕೆ ಇಳಿಸಲು ಒತ್ತಾಯ ಕೇಳಿ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜೆಡಿಎಸ್ ಭದ್ರಕೋಟೆಯಲ್ಲಿ ಕುಗ್ಗಿದ ಪ್ರಾಬಲ್ಯ?
ಡಿಕೆ ಶಿವಕುಮಾರ್ ತಮ್ಮ ರಾಜಕೀಯ ಇಮೇಜ್ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮೀಣ ಕ್ಷೇತ್ರದ, ರಾಜ್ಯ ಏಕೈಕ ಕಾಂಗ್ರೆಸ್ ಸಂಸದ ಎನಿಸಿಕೊಂಡಿರುವ ಡಿಕೆ ಸುರೇಶ್ ಅವರನ್ನು ರಾಜ್ಯಕಾರಣಕ್ಕೆ ಕರೆತರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ರಾಮನಗರ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದ್ದರೂ ಸಹ ಮಾಜಿ ಸಿಎಂ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ಹೋದ ಬಳಿಕ ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗಿದೆ ಎಂಬ ಮಾತು ಕೇಳಿ ಬಂದಿದೆ.
ಆದ್ದರಿಂದ ರಾಮನಗರದಲ್ಲಿ ಸುರೇಶ್ ಅವರು ಸ್ಪರ್ಧೆ ಮಾಡಿದರೆ ಗೆಲುವು ಖಚಿತ. ಕಾಂಗ್ರೆಸ್ ಕ್ಷೇತ್ರದಲ್ಲಿ ತಕ್ಕ ಫೈಟ್ ನೀಡಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಡಿಕೆ ಸುರೇಶ್ ಸ್ಪರ್ಧೆ ನೆರವು ನೀಡಲಿದೆ ಎಂಬ ಮಾತು ಕೇಳಿ ಬಂದಿದೆ. ಆದರೆ ಈಗಾಗಲೇ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯ ರಾಜಕಾರಣದಲ್ಲಿರುವ ಕಾರಣ ಡಿಕೆ ಸುರೇಶ್ ಅವರು ರಾಜ್ಯರಾಜಕಾರಣಕ್ಕೆ ಎಂಟ್ರಿ ಕೊಡುತ್ತಾರಾ ಅಂತ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ