ಮೈಸೂರು: ವರುಣಾ (Varuna) ಕ್ಷೇತ್ರದಲ್ಲಿ ವಿಜಯೇಂದ್ರ (BY Vijayendra) ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಇಂದು ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ಆದರೆ ಇಂದು ಮೈಸೂರಿಗೆ (Mysuru) ಭೇಟಿ ನೀಡಿರುವ ಬಿ.ವೈ.ವಿಜಯೇಂದ್ರ ಎದುರೇ ಕಾರ್ಯಕರ್ತರು ವರುಣಾದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯ ಹಾಕಿದ್ದಾರೆ. ನೀವಲ್ಲದೆ ಬೇರೆ ಯಾರೇ ಬಂದರೂ ಕ್ಷೇತ್ರದಲ್ಲಿ ಗೆಲ್ಲಲ್ಲ. ಹುಲಿ (Tiger) ಜೊತೆಯಲ್ಲಿ ಹುಲಿಯೇ ಫೈಟ್ ಮಾಡಬೇಕು. ಆಡು ಕಟ್ಟಿದರೆ ತಿಂದುಕೊಂಡು ಹೋಗುತ್ತೆ ಎಂದು ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.
ಕಾರ್ಯಕರ್ತರನ್ನು ಕೈ ಬಿಡಬಾರದು
ವಿಜಯೇಂದ್ರ ಬಂದರೆ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ತಂದೆ- ಮಕ್ಕಳ ಪ್ರಶ್ನೆ ನಡುವೆ ಕಾರ್ಯಕರ್ತರನ್ನು ಕೈ ಬಿಡಬಾರದು. ಹಳೇ ಮೈಸೂರು ಭಾಗದ ಇತರೆ ಕ್ಷೇತ್ರಗಳಿಗೂ ಶಕ್ತಿ ಬರುತ್ತೆ. ನೀವು ಬಂದು ಸ್ಪರ್ಧೆ ಮಾಡಲೇಬೇಕು. ನೀವು ಬನ್ನಿ, ಇಲ್ಲವಾದರೆ ಊಟಕ್ಕೆ ವಿಷ ಹಾಕಿ ಕೊಡಿ ಎಂದು ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರ ಮನವಿ ಮಾಡಿದರು.
ಇದನ್ನೂ ಓದಿ: Karnataka ELection 2023: ಶೋಭಾ ಕರಂದ್ಲಾಜೆ ಮೂಲಕ ಬಿಎಸ್ವೈ ಮೇಲೆ ಒತ್ತಡ; 'ಕೈ' ಮುಖಂಡ ರಮೇಶ್ ಬಾಬು ಹೊಸ ಬಾಂಬ್!
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ಹೊಡೆತ ತಡೆಯಲು ಆಗುತ್ತಿಲ್ಲ. 15 ವರ್ಷದಿಂದ ಕಾರ್ಯಕರ್ತರು ತಬ್ಬಲಿ ಆಗಿದ್ದೇವೆ. ನೀವು ರಾಜ್ಯ ನಾಯಕರು. ಶಿಕಾರಿಪುರ, ವರುಣಾ ಎರಡೂ ಕಡೆ ನಿಲ್ಲಿ. ಆದರೆ ವರುಣಾ ಮಾತ್ರ ಕೈಬಿಡಬೇಡಿ. ಯಾರಿಗೂ ಗೊಂದಲ ಆಗಬಾರದು. ನೀವು ಮನಸ್ಸು ಮಾಡಿದರೆ ವರುಣಾದಿಂದ ಎಂಎಲ್‌ಎ ಮಾಡಬಹುದು ಎಂದು ಹೇಳಿದ್ದಾರೆ.
ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ಕಾಂಗ್ರೆಸ್ ದಲಿತ, ಹಿಂದುಳಿದ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ. ಬಡವರು ಬಡವರಾಗಿಯೇ ಉಳಿಯಬೇಕು ಎಂಬುದು ಕಾಂಗ್ರೆಸ್ ಉದ್ದೇಶ. ಶಿರಾ ಉಪಚುನಾವಣೆಯಲ್ಲಿ ಗೆದ್ದ 24 ದಿನದಲ್ಲಿ ಯಡಿಯೂರಪ್ಪ ಮಗದೂರು ಕೆರೆಗೆ ನೀರು ಹರಿಸಿದರು.
ಇದು ಯಡಿಯೂರಪ್ಪ ನಡೆದುಕೊಳ್ಳುವ ರೀತಿ. ವರುಣಾ ಕ್ಷೇತ್ರಕ್ಕೆ ವೀರಶೈವ- ಲಿಂಗಾಯತ ಸಮುದಾಯದ ಮತ ಇವೆ ಅಂತ ಬಂದಿಲ್ಲ. ಒಂದು ಸಮುದಾಯ ನಂಬಿಕೊಂಡು ಚುನಾವಣೆ ಮಾಡಲು ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ರಾಜಕಾರಣಿ ಯಶಸ್ಸುಗಳಿಸಲು ಸಾಧ್ಯ. ಇದು ಯಡಿಯೂರಪ್ಪ ಅವರ ನಂಬಿಕೆ. ನಾನೂ ಇದನ್ನು ನಂಬಿದ್ದೇನೆ ಎಂದರು.
ಹಿಂದೆ ಆಗಿರುವ ಕಹಿ ಘಟನೆ ಪುನರಾವರ್ತನೆ ಆಗಬಾರದು
ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷ ಆಗಿದ್ದೇನೆ. ಇದೆಲ್ಲವೂ ವರುಣಾ ಕಾರಣಕ್ಕಾಗಿಯೇ ಆಗಿದೆ. ವರುಣಾ ಬೇರೆ ಶಿಕಾರಿಪುರ ಬೇರೆ ಅಲ್ಲ. ಶಿಕಾರಿಪುರ ತಂದೆಯವರಿಗೆ ರಾಜಕೀಯ ಜನ್ಮ ನೀಡಿದೆ. ವರುಣಾ ರಾಜಕೀಯವಾಗಿ ನನಗೆ ಪರಿಚಯ ಮಾಡಿಕೊಟ್ಟಿದೆ. ಪಕ್ಷ ಅಭ್ಯರ್ಥಿ ವಿಚಾರದಲ್ಲಿ ತೀರ್ಮಾನ ಮಾಡಿಲ್ಲ. ಹಿಂದೆ ಆಗಿರುವ ಕಹಿ ಘಟನೆ ಪುನರಾವರ್ತನೆ ಆಗಬಾರದು.
ನನ್ನ ವ್ಯಕ್ತಿತ್ವ, ತಂದೆ-ಪಕ್ಷಕ್ಕೆ ತೊಂದರೆ ಆಗಬಾರದು. ಎಲ್ಲವನ್ನೂ ಆಲೋಚನೆ ಮಾಡಿಯೇ ಬಂದಿದ್ದೇನೆ. ಬಿಜೆಪಿ ಗೆಲ್ಲುವುದಕ್ಕೆ ತೊಂದರೆ ಇಲ್ಲ. ನಮ್ಮ ಪಕ್ಷದ ಮುಖಂಡರು ಪ್ರತಿಯೊಬ್ಬರೂ ಬಿಜೆಪಿ ಗೆಲ್ಲಬೇಕು ಅಂತ ಕೆಲಸ ಮಾಡಬೇಕು. ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾನೂ ಬರುತ್ತೇನೆ. ಯಡಿಯೂರಪ್ಪ ಹೇಳಿಕೆಗಳನ್ನೂ ಗಮನಿಸಿ. ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ