ಬೆಂಗಳೂರು: ನಾಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಧಾನಿ ಬೆಂಗಳೂರಿನಲ್ಲಿ (Bengaluru) ಭರ್ಜರಿ ರೋಡ್ ಶೋ ನಡೆಸಲಿದ್ದು, ಇಂದಿನಿಂದಲೇ ರೋಡ್ ಶೋಗೆ (Roadshow) ಅಗತ್ಯವಿರುವ ಸಿದ್ಧರೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಧಾನಿ ಮೋದಿ ಅವರು ಸಾಗುವ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಿ, ಪ್ರತಿಯೊಂದು ಜಂಕ್ಷನ್ ಗಳಲ್ಲಿಯೂ ವಾಹನಗಳನ್ನು ತಡೆಯೋಕೆ ಹೆಚ್ಚುವರಿ ಬ್ಯಾರಿಕೇಡ್ (Barricade) ಅಳವಡಿಕೆ ಮಾಡಲಾಗುತ್ತಿದೆ. ಅಲ್ಲದೆ, ಮೋದಿ ರೋಡ್ ಶೋ ಹಿನ್ನಲೆಯಲ್ಲಿ ರಸ್ತೆ ಬದಿಯ ವ್ಯಾಪಾರಕ್ಕೆ ಬ್ರೇಕ್ ಹಾಕಲಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿರುವ ಅಂಗಡಿ (Shop) ಮುಂಗಟ್ಟು ಬಂದ್ ಆಗಲಿದೆ. ಇನ್ನು, ನೀಟ್ ಪರೀಕ್ಷೆಯ (NET Exam) ಹಿನ್ನೆಲೆಯಲ್ಲಿ ಮೋದಿ ರೋಡ್ ಶೋನಲ್ಲಿ ಮಹತ್ವ ಬದಲಾವಣೆ ಮಾಡಲಾಗಿದ್ದು, ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಶನಿವಾರಕ್ಕೆ, ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರಕ್ಕೆ ನಿಗದಿ ಮಾಡಲಾಗಿದೆ.
ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ನಿರ್ದೇಶನದಂತೆ ರೋಡ್ ಶೋ
ನಾಳೆ ಅಂದರೆ ಶನಿವಾರ ಬೆಳಗ್ಗೆ 10 ಗಂಟೆಯಿಂದ 12:30 ರವರೆಗೆ ರೋಡ್ ನಡೆಯಲಿದ್ದು, ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸರ್ಕಲ್ ಮಾರಮ್ಮ ಟೆಂಪಲ್ ವರೆಗೂ ಮೆಗಾ ರ್ಯಾಲಿ ಸಾಗಲಿದೆ. ಉಳಿದಂತೆ ಭಾನುವಾರ ಬೆಳಗ್ಗೆ 10 ಗಂಟೆಯಿಂದ 11:30 ರವರೆಗೆ, ಸುರಂಜನ್ ದಾಸ್ ಸರ್ಕಲ್ ನಿಂದ ಟ್ರಿನಿಟಿ ಸರ್ಕಲ್ ವರೆಗೆ ರೋಡ್ ಶೋ ನಡೆಯಲಿದೆ. ಭಾನುವಾರ ನಡೆಯುವ ರೋಡ್ ಶೋದಲ್ಲಿ 4 ಕಿ.ಮೀ ಕಡಿತ ಮಾಡಲಾಗಿದೆ. ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ನಿರ್ದೇಶನದಂತೆ ರೋಡ್ ಶೋ ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಳಿದಂತೆ, ನಗರದಲ್ಲಿ ಮೋದಿ ರೋಡ್ ಶೋ ಹಿನ್ನಲೆ ವಾಹನ ಸವಾರರು ಪರ್ಯಾಯ ರಸ್ತೆಗಳನ್ನ ಬಳಸಲು ಸೂಚನೆ ನೀಡಿ ಟ್ರಾಫಿಕ್ ಪೊಲೀಸರು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬದಲಿ ಮಾರ್ಗ ಉಪಯೋಗಿಸಲು ಸೂಚನೆ ನೀಡಿದ್ದಾರೆ. ಸುಮಾರು 35 ರಸ್ತೆಗಳ ಬದಲಿಗೆ ಪರ್ಯಾಯ ರಸ್ತೆ ಬಳಸಲು ಸೂಚನೆ ನೀಡಲಾಗಿದೆ.
ರೋಡ್ ಶೋ ಉದ್ದಕ್ಕೂ ಗಿಡ, ಮರಗಳ ಕೊಂಬೆ ಕಡಿಯಲಾಗಿದೆ
ಈ ಬಗ್ಗೆ ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ಕೇಳಿದ್ದರು, ನಿಯಮದ ಪ್ರಕಾರ ಕೊಟ್ಟಿದ್ದೇವೆ. ಮೊದಲ ದಿನ 26 ಕಿಲೋ ಮೀಟರ್, ಅಂದರೆ 9 ಗಂಟೆಯಿಂದ ಒಂದೂವರೆ ಗಂಟೆಯ ವರೆಗೆ ನಡೆಯುತ್ತೆ. ಭಾನುವಾರ 9 ಗಂಟೆಯಿಂದ 11:30 ವರಗೆ 6.1 ಕಿಮೀ ಮೋದಿ ರ್ಯಾಲಿ ಇರುತ್ತೆ. ಮೋದಿ ಹೋಗುವಂತ ರೋಡಲ್ಲಿ ಆಯೋಗದ ಕಡೆಯಿಂದ ಬೇಕಾದ ಪರಿಶೀಲನೆ ಮಾಡಿದ್ದೇವೆ. ರೋಡ್ ಶೋ ಉದ್ದಕ್ಕೂ ಗಿಡ, ಮರಗಳ ಕೊಂಬೆ ಕಡಿಯಲಾಗಿದೆ. ಜನಸಾಮಾನ್ಯರಿಗೆ ತೊಂದರೆ ಆಗದಂತೆ ಬಿಬಿಎಂಪಿ ಕಡೆಯಿಂದ ಮುಂಜಾಗ್ರತಾ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಉಳಿದಂತೆ ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಗೆ ಹೋಗಲು ತೊಂದರೆ ಆಗದಂತೆ ಸೂಚಿಸಲಾಗಿದೆ. ನಾವು ಪ್ರತ್ಯೇಕ ಆ್ಯಂಬುಲೆನ್ಸ್ಗಳಿಗೆ ವ್ಯವಸ್ಥೆ ಮಾಡಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅದೇ ರೀತಿ ವ್ಯವಸ್ಥೆ ಆಗುತ್ತಿದೆ. 108 ನಾವು ಟ್ರ್ಯಾಕ್ ಮಾಡಿ ದಾರಿಯನ್ನು ಸುಗಮವಾಗಿ ಕೊಡ್ತೇವೆ. ಆ್ಯಂಬುಲೆನ್ಸ್ ಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು. ನೀಟ್ ಪರೀಕ್ಷೆ ಆರಂಭ ಮುನ್ನವೇ ರ್ಯಾಲಿ ಮುಗಿಯಲಿದೆ. ಇದರಿಂದ ನೀಟ್ ಪರಿಕ್ಷಾರ್ಥಿಗಳಿಗೆ ತೊಂದರೆ ಆಗೋದಿಲ್ಲ ಎಂದರು.
ಪರ್ಯಾಯ ಮಾರ್ಗ ಬಳಸಲು ಪೊಲೀಸರ ಸೂಚನೆ
ಜೆ.ಪಿ ನಗರ ಆರ್ಬಿಐ ಲೇಔಟ್, ರೋಸ್ ಗಾರ್ಡನ್ ಜೆ ಪಿ ನಗರ, ಶಿರ್ಸಿ ಸರ್ಕಲ್, ಜೆಜೆ ನಗರ, ಬಿನ್ನಿ ಮಿಲ್, ಶಾಲಿನಿ ಮೈದಾನ, ಸೌತ್ ಎಂಡ್ ಸರ್ಕಲ್, ಆರ್ಮುಗಂ ವೃತ್ತ, ಬುಲ್ ಟೆಂಪಲ್, ರಾಮಕೃಷ್ಣ ಆಶ್ರಮ, ಉಮಾ ಟಾಕೀಸ್, ಟಿ ಆರ್ ಮೀಲ್, ಚಾಮರಾಜಪೇಟೆ ಮುಖ್ಯರಸ್ತೆ, ಬಾಳೆಕಾಯಿ ಮಂಡಿ, ಕೆ ಪಿ ಅಗ್ರಹಾರ, ಮಾಗಡಿ ರಸ್ತೆ, ಚೋಳರಪಾಳ್ಯ, ಎಂ ಸಿ ವೃತ್ತ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎಂಸಿ ಲೇಔಟ್, ಬಿಜಿಎಸ್ ಮೈದಾನ, ಹಾವನೂರು ವೃತ್ತ, ಬಸವೇಶ್ವರ ನಗರ, ಶಂಕರಮಠ, ಮೋದಿ ಅಸ್ಪತ್ರೆ, ನವರಂಗ್, ಎಂಕೆಕೆ ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರೋಡ್ ಸೇರಿದಂತೆ ಸ್ಯಾಂಕಿ ರಸ್ತೆ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಪೊಲೀಸರ ಸೂಚನೆ ನೀಡಿದ್ದಾರೆ.
ಜನರಿಗೆ ತೊಂದರೆ ನೀಡುವ ರೋಡ್ ಶೋ ಏನಕ್ಕೆ ಬೇಕು?
ಇನ್ನು, ಪ್ರಧಾನಿ ಮೋದಿ ರೋಡ್ ಹಿನ್ನೆಲೆಯಲ್ಲಿ ರೋಡ್ ಶೋ ಆರಂಭಕ್ಕೂ ಒಂದು ಗಂಟೆ ಮೊದಲೇ ರಸ್ತೆಗಳು ಕ್ಲೋಸ್ ಆಗಲಿದೆ. ಮೋದಿ ರೋಡ್ ಶೋ ಮುಂದೆ ಹೋಗುತ್ತಿದ್ದಂತೆ ಎರಡು ಕಿಮೀ ಅಂತರದಲ್ಲಿ ರಸ್ತೆ ಕ್ಲೀಯರ್ ಮಾಡಲು ಪೊಲೀಸರ ಯೋಜನೆ ರೂಪಿಸಿದ್ದಾರೆ. ಆದರೆ ಮೋದಿ ರೋಡ್ ಶೋ ಹಿನ್ನೆಲೆ ನಗರದಲ್ಲಿ ಟ್ರಾಫಿಕ್ ಬಿಸಿ ಹೆಚ್ಚಾಗಲಿದ್ದು, ಜನರಿಗೆ ತೊಂದರೆ ನೀಡುವ ರೋಡ್ ಶೋ ಏನಕ್ಕೆ ಬೇಕು? ರೋಡ್ ಶೋನಿಂದ ಸವಾರರಿಗೆ ಎಲ್ಲರಿಗೂ ತೊಂದರೆ ಅಂತ ಸವಾರರು ಆಕ್ರೋಶ ಹೊರಹಾಕಿದ್ದಾರೆ.
ಉಳಿದಂತೆ ನಾಳೆಯ ಮೋದಿ ರೋಡ್ ಶೋ ಹಿನ್ನಲೆಯಲ್ಲಿ ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಹಾಗೂ ಜೊತೆಗೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗಿಯಾಗಿದ್ದರು. ನಾಳೆಯ ಪೊಲೀಸ್ ಭದ್ರತೆ, ಸಂಚಾರದ ವ್ಯವಸ್ಥೆ, ಎಲ್ಲೆಲ್ಲಿ ಯಾರು ಯಾರು ನಿಯೋಜನೆ ಮಾಡಬೇಕು, ಬ್ಯಾರಿಕೇಟ್ ಗಳಲ್ಲಿ ಎಲ್ಲೆಲ್ಲಿ ಹೆಚ್ಚು ಹಾಕಬೇಕು ಅನ್ನೋ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ