ಮರಾಠಿ ವಿದ್ಯಾರ್ಥಿಗಳ ಜೊತೆ ನಾಡಗೀತೆ ಹಾಡಿದ ಸಚಿವ ಸುರೇಶ್ ಕುಮಾರ್

ಮರಾಠಿ ವಿದ್ಯಾರ್ಥಿಗಳೊಂದಿಗೆ ನಾಡಗೀತೆ ಹಾಡಿದ ಸಚಿವ ಸುರೇಶ್ ಕುಮಾರ್ ಗಡಿಭಾಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಮರಾಠಿ ಶಾಲೆಗಳಲ್ಲಿ ನಾಡಗೀತೆ ಹಾಡಿಸುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿದ ಹಿನ್ನೆಲೆಯಲ್ಲಿ ಖುದ್ದು ಮರಾಠಿ ಮಾಧ್ಯಮ ವಿದ್ಯಾರ್ಥಿಗಳಿಂದ ನಾಡಗೀತೆ ಹಾಡಿಸಿದರು. 

ಸುರೇಶ್ ಕುಮಾರ್

ಸುರೇಶ್ ಕುಮಾರ್

  • Share this:
ಬೆಳಗಾವಿ (ಫೆ. 9):  ಬೆಳಗಾವಿಯ ಗಡಿಯಲ್ಲಿರುವ, ಮರಾಠಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿನ್ನೆ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದರು. ಮೂರು ಸರ್ಕಾರಿ ಮರಾಠಿ ಶಾಲೆಗಳಿಗೆ ಭೇಟಿ ನೀಡಿದ ಮಿನಿಸ್ಟರ್ ಸುರೇಶ್ ಕುಮಾರ್ ,ಇದೇ ಮೊದಲ ಬಾರಿಗೆ ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಜಾಂಬೋಟಿ, ನಂದಗಡ, ಮಂಗೇನಕೊಪ್ಪ ಗ್ರಾಮದಲ್ಲಿರುವ ಮರಾಠಿ ಶಾಲೆಗಳಿಗೆ ಸಚಿವರು ಭೇಟಿ ನೀಡಿದರು. 

ಜಾಂಬೋಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್, ಮರಾಠಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಇದೇ ವೇಳೆ ಮರಾಠಿ ವಿದ್ಯಾರ್ಥಿಗಳೊಂದಿಗೆ ನಾಡಗೀತೆ ಹಾಡಿದ ಸಚಿವ ಸುರೇಶ್ ಕುಮಾರ್ ಗಡಿಭಾಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಮರಾಠಿ ಶಾಲೆಗಳಲ್ಲಿ ನಾಡಗೀತೆ ಹಾಡಿಸುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಖುದ್ದು ಮರಾಠಿ ಮಾಧ್ಯಮ ವಿದ್ಯಾರ್ಥಿಗಳಿಂದ ನಾಡಗೀತೆ ಹಾಡಿಸಿದರು.

ಮಹಾರಾಷ್ಟ್ರದ ನಾಯಕರು ಪ್ರಬುದ್ಧರಾಗೋದು ಒಳ್ಳೆಯದು. ಅವರು ಪ್ರಬುದ್ಧರಾಗೋದು ಅವರ ರಾಜ್ಯ, ಸಮಾಜದ ದೃಷ್ಟಿಯಿಂದ  ಒಳ್ಳೆಯದು  ಎಂದು ಜಾಂಬೋಟಿ ಗ್ರಾಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಹಳೆಯ ವಿಷಯ ಮತ್ತೆ ಮತ್ತೆ ಕೆಣಕುವುದು ಯೋಗ್ಯ ಲಕ್ಷಣವಲ್ಲ, ಸರ್ಕಾರಗಳು ಹೆಚ್ಚು ಪ್ರಬುದ್ಧರಾಗಿ ನಡೆದುಕೊಳ್ಳಬೇಕು. ಗಡಿ ಸಮಸ್ಯೆ, ಭಾಷಾ ಸಮಸ್ಯೆ ಸಮಾಜದ ಅಭಿವೃದ್ಧಿಗೆ ಅಡ್ಡಿ ಬರಬಾರದು. ಹಳೇ ವಿಷಯವಿಟ್ಟುಕೊಂಡು ಚರ್ಚಿಸೋದು ಬಿಡಿ, ಅಭಿವೃದ್ಧಿ ಕಡೆ ಗಮನ ಕೊಡಿ ಎಂದು ಪ್ರಧಾನಿ ಮೋದಿ ಪದೇಪದೇ ಹೇಳುತ್ತಿರುತ್ತಾರೆ. ಒಳ್ಳೆಯ ಆಡಳಿತ ಮಾಡಲಾಗದವರು ಆಗಾಗ ವಿಷಯಗಳನ್ನು ಬೇರೆಡೆ ತಿರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಅರಳಿ ನಿಂತ ಕಾಫಿ ಹೂವು; ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ ಕಾಫಿ ತೋಟಗಳು

ಯಾವುದೇ ಭಾಷೆ ಇರಲಿ ಮಕ್ಕಳು ಮಕ್ಕಳೇ. ಯಾವುದೇ ಭಾಷೆಯಲ್ಲಿ ಮಕ್ಕಳು ಕಲಿತಿದ್ದರೂ ಕನ್ನಡ ಒಂದು ಭಾಷೆಯನ್ನಾಗಿ ಕಲಿಯಲೇಬೇಕು. ಇದು ರಾಜ್ಯದ ಎಲ್ಲಾ ಶಾಲೆಗೆ ಅನ್ವಯವಾಗುತ್ತದೆ. ಅದಕ್ಕಾಗಿ ಕಾಯ್ದೆ ಸಹ ತಂದಿದ್ದೀವಿ. ಅವಕಾಶ ಸಿಕ್ಕಾಗ ಗಡಿಭಾಗದ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಮೊನ್ನೆ ಆಂಧ್ರದ ಗಡಿಭಾಗ, ನಿನ್ನೆ ತಮಿಳುನಾಡಿನ ಗಡಿಭಾಗಕ್ಕೆ ಭೇಟಿ ನೀಡಿದ್ದೆ. ಈಗ ಕರ್ನಾಟಕ ಮಹಾರಾಷ್ಟ್ರ ಗಡಿಭಾಗಕ್ಕೆ ಭೇಟಿ ನೀಡಿದ್ದೇನೆ. ವಿಶೇಷವಾಗಿ ಈ ಭಾಗದ ಶಿಕ್ಷಕರಲ್ಲಿ ಚೈತನ್ಯ ತುಂಬಬೇಕು. ಮುಂದಿನವಾರ ಯಾದಗಿರಿ ಬಳಿಯ ಮಹಾರಾಷ್ಟ್ರ ಗಡಿ ಭಾಗಕ್ಕೆ ಭೇಟಿ ನೀಡುವೆ ಎಂದು ಶಿಕ್ಷಣ ಸಚಿವರು ತಿಳಿಸಿದರು.

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಅನೇಕ ಸಮಸ್ಯೆಗಳಿವೆ. 50 ವರ್ಷದ ಹಳೆಯದಾದ ಕಟ್ಟಡಗಳಿವೆ. ಸರ್ಕಾರಿ ಶಾಲೆಗಳಿಗೆ ಶಕ್ತಿ ಕೊಡಲು ಯೋಚಿಸುತ್ತಿದ್ದೇವೆ. ಐದನೇ ತರಗತಿ ಅಥವಾ ಒಂದನೇ ತರಗತಿಯಿಂದ ಶಾಲೆಗಳ ಆರಂಭಕ್ಕೆ ಬಹಳಷ್ಟು ಬೇಡಿಕೆ ಇದೆ. ಮಕ್ಕಳು ಶಾಲೆಗೆ ಹೋಗದೇ ತೊಂದರೆಯಾಗ್ತಿದೆ ಎಂದು ಪೋಷಕರಿಗನಿಸಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಕಾಡಂಚಿನ ಗ್ರಾಮಗಳಲ್ಲಿ ನಡೆದುಕೊಂಡು ವಿದ್ಯಾರ್ಥಿಗಳು ಶಾಲೆಗೆ ಬರುವ ವಿಚಾರವಾಗಿ ಪಂಚಾಯತಿ ಮಟ್ಟಗಳಲ್ಲಿ ಒಳ್ಳೆಯ ಶಾಲೆ ಸ್ಥಾಪನೆಗೆ ಯೋಚನೆ ಮಾಡ್ತಿದೇವೆ. ಒಂದನೇ ತರಗತಿಯಿಂದ ಪಿಯುಸಿವರೆಗೆ ಶಾಲೆ ತೆರೆಯುವ ಕಲ್ಪನೆ ಇದೆ. ಚಾಮರಾಜನಗರದಲ್ಲಿಯೂ ಕಾಡಂಚಿನ ಗ್ರಾಮಗಳ ಶಾಲೆ ವಿದ್ಯಾರ್ಥಿಗಳಿಗೆ ಸಮಸ್ಯೆ ಇತ್ತು. ಅಲ್ಲಿ ಅರಣ್ಯ ಇಲಾಖೆ ವತಿಯಿಂದ ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದೇನೆ. ಖಾನಾಪುರದಲ್ಲೂ ಯಾವ ರೀತಿ ಸಮಸ್ಯೆ ಇದೆ ತಿಳಿದು ಸೂಕ್ತ ವ್ಯವಸ್ಥೆ ಮಾಡುತ್ತೇನೆ ಎಂದು ಜಾಂಬೋಟಿಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
Published by:Sushma Chakre
First published: