ಮೈಸೂರು (ಸೆ. 10): ಸ್ಯಾಂಡಲ್ವುಡ್ ನಟ-ನಟಿಯರ ಮೇಲೆ ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲ ಕರ್ನಾಟಕದ ಹೈಸ್ಕೂಲ್, ಕಾಲೇಜುಗಳಲ್ಲಿಯೂ ಡ್ರಗ್ಸ್ ಸೇವನೆ ಹೆಚ್ಚಾಗಿದೆ. ಈ ಬಗ್ಗೆ ಶಾಲಾ- ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು. ಕೆಲವು ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ. ಅವರ ಮಕ್ಕಳೇ ಇದರಲ್ಲಿ ಶಾಮೀಲಾಗಿದ್ದಾರೆ. ರಾಜಕಾರಣಿಗಳೇ ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ಜನಸೇವೆಯ ಹೆಸರಿನಲ್ಲಿ ರಾಜಕಾರಣಿಗಳು ಸಾವಿರಾರು ಕೋಟಿ ರೂ.ಗಳ ದಂಧೆ ಮಾಡುತ್ತಿದ್ದಾರೆ. ಈ ಪ್ರಕರಣ ಹೊರ ಬಂದಾಗ ಜಾಮೀನು ಪಡೆದು ಹೊರಗೆ ಬರುತ್ತಾರೆ. ಬಳಿಕ ಇದೇ ರೀತಿ ಡ್ರಗ್ಸ್ ದಂಧೆ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿಮಾತನಾಡಿರುವ ಪ್ರಮೋದ್ ಮುತಾಲಿಕ್, ಇವತ್ತಿನಿಂದ ನಾವು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಮೈಸೂರಿನ ಹಲವು ಕಾಲೇಜಿನಲ್ಲಿ ಡ್ರಗ್ಸ್ ಜಾಲ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಜನಾಂದೋಲನ ಶುರು ಮಾಡುತ್ತೇವೆ. ಲವ್ ಜಿಹಾದ್ ಮಾದರಿಯಲ್ಲಿಯೇ ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಇದು ದೇಶಾದ್ಯಂತ ವ್ಯಾಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದರ ಮೂಲ ರೂವಾರಿ ಎಂದು ಮುತಾಲಿಕ್ ಆರೋಪಿಸಿದ್ದಾರೆ.
ಪಂಜಾಬ್, ಗುಜರಾತ್, ಗೋವಾ ಮೂಲಕ ಡ್ರಗ್ಸ್ ಕರ್ನಾಟಕಕ್ಕೆ ಪ್ರವೇಶಿಸುತ್ತಿದೆ. ಇದರಲ್ಲಿ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದವರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಹೊಂದಾಣಿಕೆ ರಾಜಕಾರಣದ ಮೂಲಕ ಎಲ್ಲವನ್ನೂ ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ಗಮನ ಸೆಳೆದಿದ್ದ ನನ್ನನ್ನೇ ಟಾರ್ಗೆಟ್ ಮಾಡಿದರು. ಆಗಲೇ ಇದನ್ನು ಮಟ್ಟ ಹಾಕಿದ್ದರೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದು ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಕೇಸ್: ಸಿಕ್ಕಿ ಬೀಳುವ ಭಯದಿಂದ ಸಾಕ್ಷಿ ನಾಶ ಮಾಡಿದ್ರಾ ನಟಿ ಸಂಜನಾ?
ದೆಹಲಿ ಪೊಲೀಸರು ಬಂದು ದಾಳಿ ಮಾಡುವವರೆಗೂ ರಾಜ್ಯ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಗುಪ್ತಚರ ಇಲಾಖೆಯವರು ಕತ್ತೆ ಕಾಯುತ್ತಿದ್ದರಾ? ಎಂದು ಪ್ರಮೋದ್ ಮುತಾಲಿಕ್ ಪ್ರಶ್ನೆ ಕೇಳಿದ್ದಾರೆ. ಮೈಸೂರಿನ ಕಾಲೇಜುಗಳಲ್ಲೂ ಡ್ರಗ್ಸ್ ದಂಧೆ ನಿರಂತರವಾಗಿ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಶಾಲೆ, ಕಾಲೇಜುಗಳ ಆವರಣದಲ್ಲಿ ಡ್ರಗ್ ಸಿಗುತ್ತದೆ. ಮೈಸೂರಿನ ಮಹಾಜನ ಕಾಲೇಜು, ಜೆಎಸ್‌ಎಸ್ ದಂತ ಕಾಲೇಜು, ಜೆಎಸ್‌ಎಸ್ ವೈದ್ಯಕೀಯ, ಸಂತ ಫಿಲೋಮಿನಾ ಕಾಲೇಜುಗಳಲ್ಲಿ ಡ್ರಗ್ ಸಿಗುತ್ತದೆ. ಇದು ಪೋಷಕರು, ಪಾಲಕರು, ಶಿಕ್ಷಕರಿಗೂ ಗೊತ್ತಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ