2-3 ದಿನಗಳಲ್ಲಿ ಸಾರಿಗೆ ನೌಕರರ ವೇತನ ನೀಡುತ್ತೇವೆ; ಡಿಸಿಎಂ ಲಕ್ಷ್ಮಣ ಸವದಿ ಭರವಸೆ

ಸಾರಿಗೆ ನೌಕರರ ಸಂಬಳ ಕಡಿತ ಮಾಡಿಲ್ಲ. ಡಿಸೆಂಬರ್ ತಿಂಗಳ ಅರ್ಧ ಸಂಬಳ ಕೊಟ್ಟಿದ್ದೇವೆ. ಉಳಿದ 15 ದಿನದ ಸಂಬಳವನ್ನು 2ರಿಂದ 3 ದಿನಗಳಲ್ಲಿ ನೀಡಲಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.

ಲಕ್ಷ್ಮಣ ಸವದಿ

ಲಕ್ಷ್ಮಣ ಸವದಿ

  • Share this:
ಬೆಂಗಳೂರು (ಫೆ. 2): ತಮಗೆ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮತ್ತೆ ಮುಷ್ಕರ ನಡೆಸಲಿದ್ದಾರೆ ಎನ್ನಲಾಗಿತ್ತು. ಫೆಬ್ರವರಿ ತಿಂಗಳು ಬಂದರೂ ಡಿಸೆಂಬರ್ ತಿಂಗಳ ವೇತನವನ್ನೇ ಪೂರ್ತಿಯಾಗಿ ನೀಡಿಲ್ಲ. ಕೇವಲ ಅರ್ಧ ವೇತನ ನೀಡಲಾಗಿದೆ ಎಂದು ಸಾರಿಗೆ ನೌಕರರು ಆರೋಪಿಸಿದ್ದರು. ಇದಕ್ಕೆ ಇಂದು ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿರುವ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಸಾರಿಗೆ ನೌಕರರ ಸಂಬಳ ಕಡಿತ ಮಾಡಿಲ್ಲ. ಡಿಸೆಂಬರ್ ತಿಂಗಳ ಅರ್ಧ ಸಂಬಳ ಕೊಟ್ಟಿದ್ದೇವೆ. ಉಳಿದ 15 ದಿನದ ಸಂಬಳವನ್ನು 2ರಿಂದ 3 ದಿನಗಳಲ್ಲಿ ನೀಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಸಾರಿಗೆ ನೌಕರರು ಸರ್ಕಾರದ ಮುಂದೆ 10 ಬೇಡಿಕೆ ಇಟ್ಟಿದ್ದರು. ಅವುಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ್ದೇವೆ. ಅದಕ್ಕಾಗಿ ಒಂದು ಸಮಿತಿ ರಚಿಸಿ, ಮೂರ್ನಾಲ್ಕು ಬಾರಿ ಸಭೆ ಮಾಡಿದ್ದೇವೆ. ತರಬೇತಿ ಸಮಯವನ್ನು ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಸುವ, ಬಾಟಾ ವ್ಯವಸ್ಥೆಯನ್ನು ಮತ್ತೆ ತರಲು ನಿರ್ಧಾರ ಮಾಡಲಾಗಿದೆ. ನೌಕರ ವರ್ಗಕ್ಕೆ ಸರ್ಕಾರದ ಮೇಲೆ ಹಾಗೂ ಸರ್ಕಾರಕ್ಕೆ ನೌಕರ ವರ್ಗದ ಮೇಲೆ ಭರವಸೆ ಇದೆ. ಎಲ್ಲರೂ ಒಂದು ಕುಟುಂಬದಂತೆ ಇದ್ದಾರೆ. ಇಂತಹ ಸಂದರ್ಭದಲ್ಲಿ ಮಧ್ಯದಲ್ಲಿ ಯಾರೋ ಬಂದು ಕಡ್ಡಿ ಅಲ್ಲಾಡಿಸೋದು ಬೇಡ ಎಂದಿದ್ದಾರೆ.

ಇದನ್ನೂ ಓದಿ: ಬಿಡಿಎ ಸಿಬ್ಬಂದಿಗೆ ವರ್ಗಾವಣೆ ಬಿಸಿ; ಬಿಡಿಎ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ

ಸಾರಿಗೆ ನೌಕರರನ್ನು ಅಮಾನತು ಮಾಡಿಲ್ಲ. ಯಾರು ಅಪರಾಧ ಎಸಗಿದ್ದರೋ ಅವರನ್ನು ಮಾತ್ರ ಅಮಾನತು ಮಾಡಿದ್ದೇವೆ. ಸಾರಿಗೆ ನೌಕರರು ಹಿಂದೆ ಪ್ರತಿಭಟನೆ ನಡೆಸಿದ್ದರು. ಅವರ 10 ಬೇಡಿಕೆಗಳ ಪೈಕಿ ಒಂಭತ್ತಕ್ಕೆ ಸಹಮತ ಕೊಟ್ಟಿದ್ದೆವು. ಮೂರು ತೀರ್ಮಾನ ಘೋಷಿಸಿದ್ದೆವು. ತರಬೇತಿ ಅವಧಿಯನ್ನು ಎರಡರಿಂದ ಒಂದು ವರ್ಷಕ್ಕೆ ಇಳಿಸಲು ಒಪ್ಪಿದ್ದೇವೆ. ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ಒಪ್ಪಿದ್ದೇವೆ. ಬಾಟಾ ಮುಂದುವರೆಸಲು ಒಪ್ಪಿದ್ದೇವೆ. ಇನ್ನೂ ಹದಿನೈದು ದಿನಗಳಲ್ಲಿ ಈ‌ ಮೂರೂ ಬೇಡಿಕೆ ಈಡೇರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಾರಿಗೆ ನೌಕರರ ವೇತನವನ್ನು ಶೀಘ್ರದಲ್ಲೇ ನೀಡುತ್ತೇವೆ. ಅರ್ಧ ವೇತನವನ್ನು ಈಗಾಗಲೇ ಕೊಟ್ಟಿದ್ದೇವೆ. ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಡಿಸೆಂಬರ್, ಜನವರಿ ಎರಡೂ ತಿಂಗಳ ವೇತನವನ್ನು ನೀಡುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರಿಂದ 4 ದಿನ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಬಿಎಂಟಿಸಿ ಸೇರಿದಂತೆ ರಾಜ್ಯಾದ್ಯಂತ ಕೆಎಸ್​ಆರ್​ಟಿಸಿ, ವಾಯುವ್ಯ ರಸ್ತೆ ಸಾರಿಗೆ, ನೈಋತ್ಯ ರಸ್ತೆ ಸಾರಿಗೆ ಬಸ್​ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಜನರು ಪರದಾಡುವಂತಾಗಿತ್ತು. ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ವಾಪಾಸ್ ಪಡೆಯಲಾಗಿತ್ತು.
Published by:Sushma Chakre
First published: