ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವೇ ಇಲ್ಲ; ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ

Laxman Savadi: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಅನ್ನೋ ಬೇಡಿಕೆ ಈಡೇರಿಕೆ ಸಾಧ್ಯವೇ ಇಲ್ಲ. ಒಂದು ನಿಗಮಕ್ಕೆ ಆ ರೀತಿ ಮಾಡಿದರೆ ಬೇರೆ ನಿಗಮಗಳು ಬೇಡಿಕೆ ಇಡುತ್ತವೆ. ಉಳಿದ ಎಲ್ಲ ಬೇಡಿಕೆಗಳನ್ನು ಆರ್ಥಿಕ ಇತಿಮಿತಿಗಳಲ್ಲಿ ಈಡೇರಿಸುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

  • Share this:
ಬೆಂಗಳೂರು (ಡಿ. 13): ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಘೋಷಸಬೇಕೆಂಬ ಬೇಡಿಕೆ ಸೇರಿದಂತೆ ಕೆಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂರು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ಬಸ್​ಗಳ ಸಂಚಾರ ಸ್ಥಗಿತಗೊಂಡಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಈಗಾಗಲೇ ಈ ಬಗ್ಗೆ ಸಭೆ ನಡೆಸಿರುವ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು ಬೆಳಗ್ಗೆ 10 ಗಂಟೆಗೆ ಮತ್ತೊಂದು ಸಭೆ ಕರೆದಿದ್ದಾರೆ. ಇದೇವೇಳೆ ಪ್ರತಿಕ್ರಿಯೆ ನೀಡಿರುವ ಅವರು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಈಡೇರಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ಸಾರಿಗೆ ನೌಕರರ ಮನವೊಲಿಕೆಯಾಗುತ್ತದಾ? ಎಂಬುದನ್ನು ಕಾದು ನೋಡಬೇಕಾಗಿದೆ.

ಇಂದಿನ ಸಭೆಗೆ ಎಲ್ಲರನ್ನೂ ಆಹ್ವಾನ ಮಾಡಿದ್ದೇನೆ. ಇಂದು ಮಧ್ಯಾಹ್ನ 12 ಗಂಟೆಯೊಳಗೆ ಎಲ್ಲವೂ ಮುಗಿಯುತ್ತದೆ ಎಂಬ ಭರವಸೆ ಇದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಅನ್ನೋ ಬೇಡಿಕೆ ಈಡೇರಿಕೆ ಸಾಧ್ಯವೇ ಇಲ್ಲ. ಒಂದು ನಿಗಮಕ್ಕೆ ಆ ರೀತಿ ಮಾಡಿದರೆ ಬೇರೆ ನಿಗಮಗಳು ಬೇಡಿಕೆ ಇಡುತ್ತಾರೆ. ಹೀಗಾಗಿ ಆ ಬೇಡಿಕೆ ಈಡೇರಿಕೆ ಅಸಾಧ್ಯ. ಉಳಿದ ಎಲ್ಲ ಬೇಡಿಕೆಗಳನ್ನು ಆರ್ಥಿಕ ಇತಿಮಿತಿಗಳಲ್ಲಿ ಈಡೇರಿಸುತ್ತೇವೆ. ಇಂದಿನ ಸಭೆ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇಂದಿನ ಸಭೆಯಲ್ಲಿ ಅವರು ಏನು ಬೇಡಿಕೆ ಮಂಡಿಸುತ್ತಾರೋ ಆ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲಾಗುವುದು. ಹಣಕಾಸಿನ ಇತಿಮಿತಿ ಒಳಗೆ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು. ಅವರು ಬೇಡಿಕೆ ಮಂಡನೆ ಬಳಿಕ ಸಿಎಂ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಿ, ಆ ನಂತರ ಆ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಎಸ್ಕಾರ್ಟ್​ ಭದ್ರತೆಯಲ್ಲಿ BMTC ಬಸ್​ ಸಂಚಾರ ಆರಂಭ; ರಾಜ್ಯದ ಹಲವೆಡೆ ರಸ್ತೆಗಿಳಿದ KSRTC ಬಸ್​ಗಳು

ಎಸ್ಮಾ ಅನ್ನೋದು ಬ್ರಹ್ಮಾಸ್ತ್ರ. ಅದನ್ನು ಸದ್ಯಕ್ಕೆ ಜಾರಿ ಮಾಡುವುದಿಲ್ಲ. ಸಾರಿಗೆ ನೌಕರರೆಲ್ಲರೂ ನಮ್ಮ ಕುಟುಂಬವರು. ಕಷ್ಟದ ಪರಿಸ್ಥಿತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ. ಇವತ್ತಿನ ಸಭೆಗೆ ಕೋಡಿಹಳ್ಳಿ ಚಂದ್ರಶೇಖರ್​ ಅವರಿಗೆ ಆಹ್ವಾನ ನೀಡಿಲ್ಲ. ಕೋಡಿಹಳ್ಳಿ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಮುಂದಿನ 2-3 ದಿನಗಳಲ್ಲಿ ಅದನ್ನು ಬಿಚ್ಚಿಡುತ್ತೇನೆ ಎಂದು ಸಚಿವ ಸವದಿ ಹೇಳಿದ್ದಾರೆ.

ಪ್ರತಿಭಟನೆ ಹಿಂದೆ ಕಾಂಗ್ರೆಸ್ ಇದೆಯಾ ಅನ್ನೋ ಪ್ರಶ್ನೆಗೆ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲ ಇದೆ ಎಂದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ನಿನ್ನೆ ಕೆಪಿಸಿಸಿ ಅಧ್ಯಕ್ಷರು ಪ್ರತಿಭಟನೆ ಜಾಗಕ್ಕೆ ಹೋಗಿ ಬೆಂಬಲ ಕೊಟ್ಟಿದ್ದಾರೆ. ಕಾಂಗ್ರೆಸ್ ಬೆಂಬಲ ಇದೆ ಅನ್ನೋ ಮಾತನ್ನು ನಾನು ತಳ್ಳಿ ಹಾಕುವುದಿಲ್ಲ. ಕಾಂಗ್ರೆಸ್ ನಾಯಕರ ಜೊತೆ ಕೋಡಿಹಳ್ಳಿ ಮಾತನಾಡಿರೋ ಆಡಿಯೋ ನನಗೆ ಸಿಕ್ಕಿಲ್ಲ. ನನಗೆ ಸಿಕ್ಕಿದ ಕೂಡಲೇ ಅದನ್ನ ರಿಲೀಸ್ ಮಾಡುತ್ತೇನೆ ಎಂದಿದ್ದಾರೆ.

ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸಂಚಾರ ಸ್ಥಗಿತಗೊಂಡಿರುವುದರಿಂದ ಜನರ ಅನುಕೂಲಕ್ಕೆ ಖಾಸಗಿ ಬಸ್​ಗಳನ್ನು ಓಡಿಸುವಂತೆ ನಾವು ಮನವಿ ಮಾಡಿದ್ದೇವೆ. ಅವರಿಗೆ ಅಗತ್ಯವಾದ ಪರ್ಮಿಟ್ ವಿನಾಯಿತಿ ಕೂಡ ಕೊಡುತ್ತೇವೆ. ಈಗಾಗಲೇ ಆಯುಕ್ತರಿಗೂ ಈ ಬಗ್ಗೆ ಸೂಚನೆ ನೀಡಿದ್ದೇನೆ. ಈ ಪ್ರಕರಣ ಮುಗಿಯೋವರೆಗೂ ಬಸ್ ಓಡಿಸುವಂತೆ ಮನವಿ ಮಾಡಲಾಗಿದೆ ಎಂದು ಡಿಸಿಎಂ ಸವದಿ ತಿಳಿಸಿದ್ದಾರೆ.
Published by:Sushma Chakre
First published: