ಅಕ್ರಮವಾಗಿ ಕರ್ನಾಟಕದ ಗಡಿ ಪ್ರವೇಶ; ಮಹಾರಾಷ್ಟ್ರ ಮೂಲದ ಐವರ ವಿರುದ್ದ ಕೇಸ್ ದಾಖಲು

ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಂತರರಾಜ್ಯ ಸಂಚಾರವನ್ನು ಬಂದ್ ಮಾಡಿ ಗಡಿಯಲ್ಲಿನ ತಾಲೂಕುಗಳನ್ನು ಲಾಕ್​ಡೌನ್ ಮಾಡಿ ಆದೇಶ ಹೊರಡಿಸಿದೆ. ಲಾಕ್​ಡೌನ್ ಇದ್ದರೂ ಅದಾಗ್ಯೂ ಮಹಾರಾಷ್ಟ್ರದ ಗಡಿ ಗ್ರಾಮದ ಜನ ಮಾತ್ರ ಬುದ್ದಿ ಕಲಿಯುತ್ತಿಲ್ಲ. ಪದೇಪದೆ ಅಕ್ರಮವಾಗಿ ರಾಜ್ಯಕ್ಕೆ ಬಂದು ಹೋಗುತ್ತಲೇ ಇದ್ದಾರೆ.

ಸದಲಗ ಪೊಲೀಸ್ ಠಾಣೆ

ಸದಲಗ ಪೊಲೀಸ್ ಠಾಣೆ

  • Share this:
ಬೆಳಗಾವಿ (ಜು. 17): ಕೊರೋನಾ ಹಿನ್ನೆಲೆಯಲ್ಲಿ ಅಂತರರಾಜ್ಯ ಸಂಚಾರ ಬಂದ್ ಇದ್ದರೂ ಅಕ್ರಮವಾಗಿ ರಾಜ್ಯ ಪ್ರವೇಶಗಳು ನಡೆಯುತ್ತಲೇ ಇವೆ. ಎಷ್ಟೋ ಜನ ಪೊಲೀಸರ ಕಣ್ಣು ತಪ್ಪಿಸಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕಳ್ಳಮಾರ್ಗದ ಮೂಲಕ ಆಗಮಿಸುತ್ತಿದ್ದಾರೆ. ಹೀಗೆ ಬೈಕ್ ಮೇಲೆ ಅಕ್ರಮವಾಗಿ ರಾಜ್ಯ ಪ್ರವೇಶ ಮಾಡಿದ್ದ ಐವರ ಮೇಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪೊಲೀಸರು ಪ್ರಕರಣ ದಾಖಲಿದ್ದಾರೆ. 

ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೋನಾ ಸ್ಫೋಟಗೊಂಡಿದೆ. ಕೊರೋನಾ ಹೊಡೆತಕ್ಕೆ ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿಯಲ್ಲಿನ ಗ್ರಾಮಗಳು ತತ್ತರಿಸಿ ಹೋಗಿವೆ. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಂತರರಾಜ್ಯ ಸಂಚಾರವನ್ನು ಬಂದ್ ಮಾಡಿ ಗಡಿಯಲ್ಲಿನ ತಾಲೂಕುಗಳನ್ನು ಲಾಕ್​ಡೌನ್ ಮಾಡಿ ಆದೇಶ ಹೊರಡಿಸಿದೆ. ಲಾಕ್​ಡೌನ್ ಇದ್ದರೂ ಅದಾಗ್ಯೂ ಮಹಾರಾಷ್ಟ್ರದ ಗಡಿ ಗ್ರಾಮದ ಜನ ಮಾತ್ರ ಬುದ್ದಿ ಕಲಿಯುತ್ತಿಲ್ಲ. ಪದೇಪದೆ ಅಕ್ರಮವಾಗಿ ರಾಜ್ಯಕ್ಕೆ ಬಂದು ಹೋಗುತ್ತಲೇ ಇದ್ದಾರೆ. ಮಹಾರಾಷ್ಟ್ರದ ಹಳ್ಳಿಗಳಿಂದ ರಾಜ್ಯಕ್ಕೆ ಬಂದು ಇಲ್ಲಿ ವ್ಯಾಪಾರ ನಡೆಸುವುದು ಹಾಗೂ ಆಸ್ಪತ್ರೆಗಳಿಗೆ ಬರುವುದು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ ಸಂಕಷ್ಟದಿಂದ ಸ್ಥಗಿತಗೊಂಡ ರೈತರ ಸಾಲಮನ್ನಾ ಯೋಜನೆ

ಇದರ ಪರಿಣಾಮ ಈಗಾಗಲೇ ಕಾಗವಾಡ ಹಾಗೂ ಅಥಣಿ ತಾಲೂಕಿನ ಕೊರೊನಾ ಪ್ರಕರಣ ಜಿಲ್ಲೆಯಲ್ಲಿ ಅತಿಯಾಗಿ ಕಾಣಿಸಿಕೊಂಡಿವೆ. ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದರೂ ಕಳ್ಳ ಮಾರ್ಗಗಳ ಮ‌ೂಲಕ ಜನ ಆಗಮಿಸುತ್ತಲೇ ಇದ್ದರು. ಇದಕ್ಕೆ ಬೇಸತ್ತ ಗ್ರಾಮಸ್ಥರೇ ಕಳ್ಳ ಮಾರ್ಗಗಳನ್ನು ಬಂದ್ ಮಾಡಿದ್ದರು. ಅದಾಗ್ಯೂ ಇಂದು ಐದು ಜನ ತಮ್ಮ ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಮಹಾರಾಷ್ಟ್ರದ ಶಿವನೂರು ಗ್ರಾಮದಿಂದ ರಾಜ್ಯ ಪ್ರವೇಶಿಸಿ ಜಿಲ್ಲೆಯ ಸದಲಗಾ ಗ್ರಾಮಕ್ಕೆ ಆಗಮಿಸಿದ್ದರು. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಐದು ಜನರ ಪತ್ತೆ ಹಚ್ಚಿ ಐವರನ್ನು ಬಂಧಿಸಿದ್ದಾರೆ.

ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಆರೋಪಿಗಳು ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ಶಿವನಾಯಿಕವಾಡಿ ಗ್ರಾಮದ ದತ್ತಾತ್ರೇಯ ದೊಂಡಿರಾಮ ಖೋತ (29) ಹಾಗೂ ಅಣ್ಣಾಸೋ ದತ್ತು ಖೋತ (38), ಹಾತಕಣಗಲೆ ತಾಲೂಕಿನ ಇಂಚಲಕರಂಜಿಯ ಮಹೇಶ ಮಲಗೊಂಡಾ ಬರಬರೆ‌ (22) ಹಾಗೂ ಮಹೇಶ ಜೀತನಾರಾಯಣ ಮೊರಯಾ (33), ಶಿರೋಳ ತಾಲೂಕಿನ ಯಡ್ರಾಂವ ಗ್ರಾಮದ ವಿಜಯಕುಮಾರ ದೇವಗೊಂಡಾ ಪಾಟೀಲ (32) ಈ ಐವರ ಮೇಲೆ ಐಪಿಸಿ 188 ಮತ್ತು 51 ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಅಲ್ಲದೆ ಐದು ಜನರ ಐದು ಬೈಕಗಳನ್ನ ಸೀಜ್ ಮಾಡಿದ್ದಾರೆ.

ಸಂಬಂಧಿಕರ ಭೇಟಿಗೆ ಆಗಮಿಸಿದ್ದ ಐವರು ಕೊರೊನಾ ನಡುವೆಯೂ ಅಕ್ರಮವಾಗಿ ರಾಜ್ಯ ಪ್ರವೇಶ ಮಾಡಿ ಸದಲಗಾದಲ್ಲಿರುವ ತಮ್ಮ ಸಂಬಂಧಿಕರ ಭೇಟಿಗೆ ಆಗಮಿಸಿದ್ದರು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಕೊರೊನಾ ಸಂದರ್ಭದಲ್ಲಿ ಹೀಗೆ ಅಕ್ರಮವಾಗಿ ಅಂತರರಾಜ್ಯದ ಜನರನ್ನ ಕರೆಸಿಕೊಳ್ಳುವ ಮುನ್ನ ನಮ್ಮ ರಾಜ್ಯದ ಜನ ಕೂಡ ಯೋಚನೆ ಮಾಡಬೇಕು.
Published by:Sushma Chakre
First published: