ಸಿಎಂ ಮನೆಗೆ ಮುತ್ತಿಗೆ ಹಾಕುವ ಕಾಂಗ್ರೆಸ್​ ನಾಯಕರ ಪ್ರಯತ್ನ ವಿಫಲ; ಸಿದ್ದರಾಮಯ್ಯ ಸೇರಿ ಹಲವರು ಪೊಲೀಸ್​ ವಶಕ್ಕೆ

ಪ್ರತಿಭಟನಾಕಾರರಿಂದ ಸಿಎಂ ನಿವಾಸ ಧವಳಗಿರಿಗೆ ಮುತ್ತಿಗೆ ಎಚ್ಚರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿತ್ತು. ಇಬ್ಬರು ಎಸ್​ಪಿಗಳ ನೇತೃತ್ವದಲ್ಲಿ ಸುಮಾರು 100 ಮಂದಿ ಪೊಲೀಸರು ಸಿಎಂ ಮನೆ ಸುತ್ತ ಕಾವಲು ಕಾಯ್ದಿದ್ದರು. 

news18-kannada
Updated:February 17, 2020, 3:38 PM IST
ಸಿಎಂ ಮನೆಗೆ ಮುತ್ತಿಗೆ ಹಾಕುವ ಕಾಂಗ್ರೆಸ್​ ನಾಯಕರ ಪ್ರಯತ್ನ ವಿಫಲ; ಸಿದ್ದರಾಮಯ್ಯ ಸೇರಿ ಹಲವರು ಪೊಲೀಸ್​ ವಶಕ್ಕೆ
ಸಿದ್ದರಾಮಯ್ಯ
  • Share this:
ಬೆಂಗಳೂರು (ಫೆ.15): ಬೀದರ್​ನ ಶಾಹೀನ್ ಶಾಲೆಯ ವಿರುದ್ಧ ದೇಶದ್ರೋಹ ಪ್ರಕರಣದಲ್ಲಿ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್​ ನಾಯಕರು ಇಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಕ್ಕೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದರು. ಈ ವೇಳೆ ಸಿಎಂ ಮನೆಗೆ ಮುತ್ತಿಗೆ ಹಾಕುವ ಕಾಂಗ್ರೆಸ್​ ನಾಯಕರ ಪ್ರಯತ್ನ ವಿಫಲವಾಯಿತು. ಈ ವೇಳೆ  ಸಿದ್ದರಾಮಯ್ಯ, ಮಾಜಿ ಸಚಿವ ರಾಮಲಿಂಗ ರೆಡ್ಡಿ ಸೇರಿ ಹಲವು ಕಾಂಗ್ರೆಸ್​​ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. 

ಕಾಂಗ್ರೆಸ್​ ನಾಯಕ ದಿನೇಶ್​ ಗುಂಡೂರಾವ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.  ಸಂಸದ ಡಿಕೆ ಸುರೇಶ, ಮಾಜಿ ಸಂಸದ ಉಗ್ರಪ್ಪ, ಶಾಸಕಿ ಸೌಮ್ಯ ರೆಡ್ಡಿ,  ಪುಷ್ಪಾ ಅಮರನಾಥ ಸೇರಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮೌರ್ಯ ವೃತ್ತದ ಗಾಂಧಿ ಪ್ರತಿಮೆಯಿಂದ ಮಧ್ಯಾಹ್ನ 11 ಗಂಟೆಗೆ ಪಾದಯಾತ್ರೆ ಆರಂಭಗೊಂಡಿತು. ನಂತರ ಪಾದಯಾತ್ರೆ ಮೂಲಕ ಸಿಎಂ ಗೃಹ ಕಚೇರಿ ಕೃಷ್ಣಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಕಾಂಗ್ರೆಸ್​ ನಾಯಕರನ್ನು ತಡೆದಿದ್ದಾರೆ.

ಪ್ರತಿಭಟನಾಕಾರರಿಂದ ಸಿಎಂ ನಿವಾಸ ಧವಳಗಿರಿಗೆ ಮುತ್ತಿಗೆ ಎಚ್ಚರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿತ್ತು. ಇಬ್ಬರು ಎಸ್​ಪಿಗಳ ನೇತೃತ್ವದಲ್ಲಿ ಸುಮಾರು 100 ಮಂದಿ ಪೊಲೀಸರು ಸಿಎಂ ಮನೆ ಸುತ್ತ ಕಾವಲು ಕಾಯ್ದಿದ್ದರು.

ಕಿಡಿಕಾರಿದ ಸಿದ್ದರಾಮಯ್ಯ:

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದರು. "ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸುವುದು ಕಾಂಗ್ರೆಸ್ ಜವಾಬ್ದಾರಿ. ನರೇಂದ್ರ ಮೋದಿ, ಅಮಿತ್ ಶಾ ಜೋಡಿ ದೇಶವನ್ನು ನಾಶ ಮಾಡುತ್ತಿದೆ. ಇವರು ಭಾವನಾತ್ಮಕ ವಿಚಾರವನ್ನ ಜನರ ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾನೂನು ದುರುಪಯೋಗ ಪಡಿಸಿಕೊಳ್ತಿದ್ದಾರೆ," ಎಂದು ಅವರು ಆರೋಪಿಸಿದರು.

"ಖಾದರ್ ಮಾತಾಡಿದರೆ ದೇಶದ್ರೋಹದ ಕೇಸ್ ಹಾಕುತ್ತಾರೆ. ಮೈಸೂರಿನಲ್ಲಿ ಯುವತಿ ಫ್ರೀ ಕಾಶ್ಮೀರ ಎಂದರೆ ಕೇಸ್ ಬೀಳುತ್ತದೆ. ಬೀದರನ ಶಾಹೀನ ಶಾಲೆಯಲ್ಲಿ ಸಿಎಎ ಬಗ್ಗೆ ಮಕ್ಕಳು ನಾಟಕ ಮಾಡಿದ್ದರು. ನಾಟಕ ಮಾಡುವಾಗ "ಹಿರಿಯರ ಮಾಹಿತಿ ಕೇಳಿದರೆ ಅವರು ಎಲ್ಲಿಂದ ತರುತ್ತಾರೆ? ಸಮಾಧಿಯಿಂದ ಬಗೆದು ತರಬೇಕಾ ? ಮಾಹಿತಿ ಕೇಳಲು ಬರೋರಿಗೆ ಚಪ್ಲಿ ತಗೊಂಡು ಹೊಡಿತೀನಿ," ಎಂದು 11 ವರ್ಷದ ಮಗು ಡೈಲಾಗ್ ಹೇಳುತ್ತದೆ. ಅದು ಮೋದಿ ವಿರುದ್ಧ ಹೇಳಿದ ಮಾತಲ್ಲ. ಮಾಹಿತಿ ಕೇಳಲು ಬರುವವರಿಗೆ ಹೇಳಿದ್ದು ಎಂದರು ಸಿದ್ದರಾಮಯ್ಯ.

ದೆಹಲಿ ಜೆಎನ್​ಯು ಘಟನೆ ನೆನೆದ ಸಿದ್ದರಾಮಯ್ಯ, "ದೆಹಲಿ ಜೆಎನ್​ಯು ವಿವಿಯಲ್ಲಿ ಗೂಂಡಾಗಳು ದಾಳಿ ಮಾಡಿದ್ದರು. ಇಂತಹವರ ಮೇಲೆ ಕೇಸ್ ಹಾಕಿಲ್ಲ. ಇದಕ್ಕಿಂತ ಕ್ರೂರವಾದ ಸರ್ಕಾರ ಮತ್ತೊಂದಿಲ್ಲ. ಯಡಿಯೂರಪ್ಪ, ಬೊಮ್ಮಾಯಿಗೆ ಗೊತ್ತಿಲ್ಲದೆ ಪೊಲೀಸರು ಕೇಸ್ ಹಾಕುವುದಿಲ್ಲ. ಪೊಲೀಸವರಿಗೆ ನಾನು ಹೇಳೋದು ಒಂದೇ, ಯಡಿಯೂರಪ್ಪ ಶಾಶ್ವತವಾಗಿ ಗೂಟ ಹೊಡ್ಕೊಂಡು ಕೂತಿರಲ್ಲ.  ಬಿಜೆಪಿಯ ನಾಯಕರ ಮಾತನ್ನು ಕೇಳಿ ಕಾನೂನು ವಿರುದ್ಧವಾಗಿ ನಡೆದುಕೊಂಡರೆ ಮುಂದಿನ ದಿನದಲ್ಲಿ ತಕ್ಕ ಪಾಠ ಕಲಿಯಬೇಕಾಗುತ್ತೆ," ಎಂದು ಎಚ್ಚರಿಸಿದರು.ಬಳ್ಳಾರಿ ಕಾರು ಅಪಘಾತದಲ್ಲಿ ಸಚಿವ ಆರ್​. ಅಶೋಕ್​ ಮಗನ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, "ಆರ್ ಅಶೋಕ ಮಗನ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಹ್ಯಾರಿಸ್ ಮಗನನ್ನ ಗೂಂಡಾ ಎಂದು ಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ತೊಲಗಿಸುವವರೆಗೂ ಹೋರಾಟ ನಿಲ್ಲಲ್ಲ,"ಎಂದು ಶಪಥ ಮಾಡಿದರು.

ಬಿಜೆಪಿ ವಿರುದ್ಧ ಹರಿಹಾಯ್ದ ಗುಂಡೂರಾವ್​:

ಶಾಹೀನ್ ಶಾಲೆಯ ಶಿಕ್ಷಕರ ಮತ್ತು ಮಕ್ಕಳ ವಿರುದ್ಧ ಕೇಸ್ ಹಾಕಿರುವುದಕ್ಕೆ ಗುಂಡೂರಾವ್​ ಕಿಡಿಕಾರಿದರು. "ಕಲ್ಲಡಕ ಪ್ರಭಾಕರ್ ಭಟ್, ರೇಣುಕಾಚಾರ್ಯ, ಸಿಟಿ ರವಿ, ಅನಂತಕುಮಾರ್ ಹೆಗಡೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ, ಅವರ ವಿರುದ್ಧ ಯಾವುದೇ ಕೇಸ್ ಇಲ್ಲ. ಆದರೆ ಯು ಟಿ ಖಾದರ್ ಮಾತಾಡಿದರೆ ದೇಶದ್ರೋಹದ ಕೇಸ್ ಹಾಕುತ್ತಾರೆ. ಹೀಗೇಕೆ? ಅದಕ್ಕಾಗಿಯೇ ಸಿಎಂ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದೇವೆ," ಎಂದು ಗುಂಡೂರಾವ್​ ಹೇಳಿದ್ದಾರೆ.

ಏನಿದು ಪ್ರಕರಣ?:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೇಂದ್ರ ಪೌರತ್ವ ಕಾಯ್ದೆಯನ್ನು ಟೀಕಿಸಿ ನಾಟಕ ಮಾಡಿದ್ದಕ್ಕೆ ಬೀದರ್​ನ ಶಾಲೆಯ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಾಗಿತ್ತು. ಬೀದರ್​ನ ಶಾಹೀನ್​ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ನಾಟಕವೊಂದನ್ನು ಪ್ರದರ್ಶಿಸಿದ್ದರು. ಸಿಎಎ ಟೀಕಿಸಿ ಈ ನಾಟಕ ಬರೆಯಲಾಗಿತ್ತು. ಜ.26ರಂದು ಈ ನಾಟಕದ ವಿಡಿಯೋ ವೈರಲ್​ ಆಗಿತ್ತು. ಈ ವೇಳೆ ನೀಲೇಶ್​ ರಾಖ್ಯಾಲ್​ ಎಂಬುವವರು ಈ ಬಗ್ಗೆ ದೂರು ದಾಖಲು ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹಾಗೂ ವಿದ್ಯಾರ್ಥಿಯ ತಾಯಿಯನ್ನು ಬಂಧಿಸಲಾಗಿತ್ತು.
First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ