ಬೀದರ್​ ಶಾಹೀನ್​ ಶಾಲೆ ಪ್ರಕರಣ; ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್​ ನಾಯಕರು

ಪ್ರತಿಭಟನಾಕಾರರಿಂದ ಸಿಎಂ ನಿವಾಸ ಧವಳಗಿರಿಗೆ ಮುತ್ತಿಗೆ ಎಚ್ಚರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಇಬ್ಬರು ಎಸ್​ಪಿಗಳ ನೇತೃತ್ವದಲ್ಲಿ ಸುಮಾರು 100 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.  

news18-kannada
Updated:February 15, 2020, 10:38 AM IST
ಬೀದರ್​ ಶಾಹೀನ್​ ಶಾಲೆ ಪ್ರಕರಣ; ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್​ ನಾಯಕರು
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು (ಫೆ.15): ಬೀದರ್​ನ ಶಾಹೀನ್ ಶಾಲೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವ ವಿಚಾರಕ್ಕೆ ಸಂಬಂಧಿಸಿ  ಕಾಂಗ್ರೆಸ್​ ನಾಯಕರು ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.  

ಕಾಂಗ್ರೆಸ್​ ನಾಯಕ ದಿನೇಶ್​ ಗುಂಡೂರಾವ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಮೌರ್ಯ ವೃತ್ತದ ಗಾಂಧಿ ಪ್ರತಿಮೆಯಿಂದ ಮಧ್ಯಾಹ್ನ 11 ಗಂಟೆಗೆ ಪಾದಯಾತ್ರೆ ಆರಂಭಗೊಳ್ಳಲಿದೆ. ನಂತರ ಸಿಎಂ ಗೃಹ ಕಚೇರಿ ಕೃಷ್ಣಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಜಮೀರ್ ಅಹಮ್ಮದ್, ರಿಜ್ವಾನ್ ಅರ್ಷದ್, ರಾಮಲಿಂಗಾರೆಡ್ಡಿ, ವಿ ಎಸ್ ಉಗ್ತಪ್ಪ ಸೇರಿ ಇತರೆ ಮುಖಂಡರು ಭಾಗಿಯಾಗುವ ಸಾಧ್ಯತೆ ಇದೆ.

ಪ್ರತಿಭಟನಾಕಾರರಿಂದ ಸಿಎಂ ನಿವಾಸ ಧವಳಗಿರಿಗೆ ಮುತ್ತಿಗೆ ಎಚ್ಚರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಇಬ್ಬರು ಎಸ್​ಪಿಗಳ ನೇತೃತ್ವದಲ್ಲಿ ಸುಮಾರು 100 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಏನಿದು ಪ್ರಕರಣ?:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೇಂದ್ರ ಪೌರತ್ವ ಕಾಯ್ದೆಯನ್ನು ಟೀಕಿಸಿ ನಾಟಕ ಮಾಡಿದ್ದಕ್ಕೆ ಬೀದರ್​ನ ಶಾಲೆಯ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಾಗಿತ್ತು. ಬೀದರ್​ನ ಶಾಹೀನ್​ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ನಾಟಕವೊಂದನ್ನು ಪ್ರದರ್ಶಿಸಿದ್ದರು. ಸಿಎಎ ಟೀಕಿಸಿ ಈ ನಾಟಕ ಬರೆಯಲಾಗಿತ್ತು. ಜ.26ರಂದು ಈ ನಾಟಕದ ವಿಡಿಯೋ ವೈರಲ್​ ಆಗಿತ್ತು. ಈ ವೇಳೆ ನೀಲೇಶ್​ ರಾಖ್ಯಾಲ್​ ಎಂಬುವವರು ಈ ಬಗ್ಗೆ ದೂರು ದಾಖಲು ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹಾಗೂ ವಿದ್ಯಾರ್ಥಿಯ ತಾಯಿಯನ್ನು ಬಂಧಿಸಲಾಗಿತ್ತು.
First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ