ರಾಜ್ಯ ಕಾಂಗ್ರೆಸ್ ಬಿಕ್ಕಟ್ಟು: ಇನ್ನಷ್ಟು ಗೊಂದಲ ಸೃಷ್ಟಿಸುತ್ತಿರುವ ತಟಸ್ಥ ಬಣದ ನಾಯಕರು

'ತಟಸ್ಥ' ಬಣ ಎಂದು ಹೇಳಿಕೊಳ್ಳುವವರು ಹೈಕಮಾಂಡ್ ನಾಯಕರ ಭೇಟಿಗಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಭೇಟಿ ಮಾಡುತ್ತಾರೋ, ಬಿಡುತ್ತಾರೋ ಗೊಂದಲವನ್ನಂತೂ ಸೃಷ್ಟಿಸುತ್ತಿದ್ದಾರೆ.

ಕೆ.ಹೆಚ್​.ಮುನಿಯಪ್ಪ

ಕೆ.ಹೆಚ್​.ಮುನಿಯಪ್ಪ

  • Share this:
ನವದೆಹಲಿ (‌ಜೂ. 28): 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂಬ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿರುವುದು ರಾಜ್ಯ ಕಾಂಗ್ರೆಸಿನಲ್ಲಿ ಸಂಚಲನ ಮೂಡಿಸಿದೆ. ಇದೇ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿಗೆ ಧಾವಿಸಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರಿಗೆ ದೂರು ನೀಡಿದ್ದಾಯಿತು. ಈಗ 'ತಟಸ್ಥ' ಬಣ ಎಂದು ಹೇಳಿಕೊಳ್ಳುವವರು ಹೈಕಮಾಂಡ್ ನಾಯಕರ ಭೇಟಿಗಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅವರು ಭೇಟಿ ಮಾಡುತ್ತಾರೋ, ಬಿಡುತ್ತಾರೋ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. 'ಗೊಂದಲ ಸೃಷ್ಟಿಸುವುದೇ ಇವರ ಅಜೆಂಡಾವಾ?' ಎಂಬ ಅನುಮಾನಗಳು ಕಂಡುಬರುತ್ತಿವೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಿಗರು 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂದು ಒಬ್ಬರಾದ ಮೇಲೆ ಒಬ್ಬರು ಹೇಳುತ್ತಿದ್ದಂತೆ ದಿಢೀರನೇ ಸಕ್ರೀಯರಾಗಿರುವ 'ತಟಸ್ಥ' ಬಣದ ನಾಯಕರಾದ ಮಾಜಿ ಕೆಪಿಸಿಸಿ‌ ಅಧ್ಯಕ್ಷ ಡಾ. ಜಿ. ಪರಮೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಶನಿವಾರ ಬೆಂಗಳೂರಿನಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದ್ದರು. ಈ ಭೇಟಿಯ ಬಳಿಕ ಅತ್ತ ಭಾನುವಾರ ಡಾ. ಜಿ. ಪರಮೇಶ್ವರ ಇನ್ನೊಬ್ಬ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಗೆ ಚರ್ಚೆ ನಡೆಸಿದ್ದರೆ, ಬಿ.ಕೆ. ಹರಿಪ್ರಸಾದ್ ಮತ್ತು ಕೆ.ಎಚ್. ಮುನಿಯಪ್ಪ ದೆಹಲಿ ವಿಮಾನ ಹತ್ತಿದ್ದರು. ಆದರೆ ಸೋಮವಾರ ಸಂಜೆವರೆಗೂ ಯಾವೊಬ್ಬ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿಲ್ಲ. ಇದರಿಂದಾಗಿ ಅವರ 'ಉದ್ದೇಶವಾದರೂ ಏನು?' ಎಂಬ ಶಂಕೆ ಶುರುವಾಗಿದೆ.

ಹರಿಪ್ರಸಾದ್-ಮುನಿಯಪ್ಪ ದೆಹಲಿ ಭೆಟಿಯ ಹಿಂದೆ ಜಿ. ಪರಮೇಶ್ವರ ಅವರ ಕೈವಾಡ ಇರಬಹುದು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ಕಚ್ಚಾಟದಲ್ಲಿ ತಾವು ಮತ್ತೆ ಮುನ್ನೆಲೆಗೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಪರಮೇಶ್ವರ 'ತಟಸ್ಥ' ಬಣದ ಹೆಸರಿನಲ್ಲಿ ದಾಳ ಉರುಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ‌. ಸ್ವತಃ ಡಾ.‌ ಜಿ. ಪರಮೇಶ್ವರ ಕೂಡ ಹೈಕಮಾಂಡ್ ನಾಯಕರ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ. ದೆಹಲಿ ನಾಯಕರಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆ ಅವರು ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದರ ಪೂರ್ವಭಾವಿಯಾಗಿ ಹರಿಪ್ರಸಾದ್-ಮುನಿಯಪ್ಪ ದೆಹಲಿಯಲ್ಲಿ ವೇದಿಕೆ ಸಿದ್ದಪಡಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನಕ್ಷೆಯಲ್ಲಿ ಕಾಶ್ಮೀರ, ಲಡಾಖ್ ಪ್ರತ್ಯೇಕ ದೇಶ; ಟ್ವಿಟ್ಟರ್ ಮೇಲೆ ಸರ್ಕಾರ ಕೆಂಗಣ್ಣು

'ನದಿ ದಡಕ್ಕೆ ಹೋದಾಗ ದಾಟುವುದು ಹೇಗೆ ಅಂತಾ ಯೋಚಿಸೋಣ. ಸಿಎಂ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ.‌ನಮ್ಮದು ನಾಗಪುರ ಯೂನಿವರ್ಸಿಟಿ ನಿರ್ದೇಶನದಲ್ಲಿ ನಡೆಯುವ ಪಕ್ಷವಲ್ಲ. ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಎಲ್ಲರಿಗೂ ತಮ್ಮ ತಮ್ಮ ಅನಿಸಿಕೆ ಹೇಳುವ ಹಕ್ಕಿದೆ. ಅದರಲ್ಲಿ ತಪ್ಪೇನೂ ಇಲ್ಲ' ಎಂದು ದೆಹಲಿಯಲ್ಲಿ ಹರಿಪ್ರಸಾದ್ ಮಾರ್ವಿಕವಾಗಿ ಮಾತನಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪ ಪರ ಹೇಳಿಕೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, 'ಅದು ಅವರು ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಹೇಳಿದ್ದು' ಎಂದರು.

ಕೆ.ಎಚ್. ಮುನಿಯಪ್ಪ ಮಾತನಾಡಿ, 'ಹೈಕಮಾಂಡ್ ಭೇಟಿ ಆಗುವ ಅಗತ್ಯ ಇಲ್ಲ. ಯಾರನ್ನೂ ಭೇಟಿ ಆಗಿಲ್ಲ. ನಮಗೆ ಬೇರೆ ಕೆಲಸ ಇದೆ, ಅದಕ್ಕಾಗಿ ಬಂದಿದ್ದೇವೆ. ಸಿಎಂ ವಿಚಾರ ಸರ್ಕಾರ ಬಂದಾಗ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಲ್ಲಿವರೆಗೆ ನಾವು ಒಗ್ಗಟ್ಟಾಗಿ ಇರಬೇಕು ಮತ್ತು ಸರ್ಕಾರ ತರಲು ಹೋರಾಟ ಮಾಡಬೇಕು. ಸಿಎಂ ವಿಚಾರದ ಬಗೆಗಿನ ಹೇಳಿಕೆಗಳು ನಿಲ್ಲಲೇಬೇಕು, ನಿಲ್ಲುತ್ತವೆ. ಸಿಎಂ ವಿಚಾರ ಇವತ್ತಿನ ಕಾಲಘಟ್ಟದಲ್ಲಿ ಅಪ್ರಸ್ತುತ ಎಂದರು. ದಲಿತ ಸಿಎಂ ಬಗ್ಗೆ ಕೇಳಿದ ಪ್ರಶ್ನೆಗೆ 'ಸಿಎಂ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ' ಎಂದಷ್ಟೇ ಹೇಳಿದರು.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: