ಬೆಂಗಳೂರು: ಕೊರೋನಾ ಫ್ರೆಂಟ್ಲೈನ್ ವಾರಿಯರ್ಸ್ನೊಂದಿಗೆ ಸಂವಾದ ನಡೆಸಿದ್ದ ಪ್ರಧಾನಿ ಮೋದಿ ಕೊರೋನಾಗೆ ಬಲಿಯಾದವರನ್ನು ನೆನೆದು ಭಾವುಕರಾಗಿದ್ದರು. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ಕ್ಯಾಮರಾ, ಟೆಲಿಪ್ರಾಂಪ್ಟರ್ ನೋಡಿಕೊಂಡು ಅಳುವುದು ಅದ್ಭುತ ನಟನಾ ಕೌಶಲ್ಯ ಎಂದು ಕಾಲೆಳೆದಿದೆ. ಪ್ರಧಾನಿ ಮೋದಿ ಅವರೇ ಜನಕ್ಕೆ ಬೇಕಿರುವುದು ನಿಮ್ಮ ಕಣ್ಣೀರಲ್ಲ. ಆಕ್ಸಿಜನ್ ವ್ಯವಸ್ಥೆ, ಆಸ್ಪತ್ರೆಗಳಲ್ಲಿ ಬೆಡ್, ಸಕಾಲದಲ್ಲಿ ಔಷಧ ಬೇಕಾಗಿದೆ. ಹೀಗೆ ಕಣ್ಣೀರು ಸುರಿಸುವ ನಾಟಕದಿಂದ ಜನರಿಗೆ ಯಾವ ಲಾಭವೂ ಇಲ್ಲ. ಹೇಡಿಯ ಪ್ರಮುಖ ಅಸ್ತ್ರ ಕಣ್ಣೀರು ಎಂದು ಕಾಂಗ್ರೆಸ್ ಖಾರಾವಾಗಿ ಕುಟುಕಿದೆ.
ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಖಾತೆ ಮೂಲಕ ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿದೆ. ಕೊರೋನಾ 2ನೇ ಅಲೆಯಲ್ಲಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಅದನ್ನು ಕಣ್ಣೀರಿನ ಮೂಲಕ ತಣ್ಣಗಾಗಿಸುವ ಪ್ರಯತ್ನ ಮಾಡಬೇಡಿ ಎಂದು ಟಾಂಗ್ ಕೊಟ್ಟಿದೆ. ನಿನ್ನೆ ಮೋದಿ ತಮ್ಮ ಕ್ಷೇತ್ರ ವಾರಾಣಾಸಿಯ ವೈದ್ಯರು, ನರ್ಸ್ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ್ದರು.
ಎದುರಿಗಿದ್ದ ಕ್ಯಾಮೆರಾ ಹಾಗೂ ಟೆಲಿಪ್ರಾಂಪ್ಟರ್ ನೋಡಿಕೊಂಡು ಕಣ್ಣೀರು ಸುರಿಸುವುದು ಅದ್ಬುತ ನಟನಾ ಕೌಶಲ್ಯ!@narendramodi ಅವರೇ, ಜನತೆಗೆ ಬೇಕಿರುವುದು ನಿಮ್ಮ ಕಣ್ಣೀರಲ್ಲ.
ಆಕ್ಸಿಜನ್, ಲಸಿಕೆ, ವೈದ್ಯಕೀಯ ವ್ಯವಸ್ಥೆ, ಚಿಕಿತ್ಸೆ, ಆರ್ಥಿಕ ನೆರವು.
ಇದ್ಯಾವುದನ್ನೂ ನೀಡದೆ ಎರಡು ಹನಿ ಕಣ್ಣೀರ ನಾಟಕದಿಂದ ಜನಾಕ್ರೋಶ ತಣಿಸುವ ತಂತ್ರ ಬಿಡಿ.
— Karnataka Congress (@INCKarnataka) May 21, 2021
PM @narendramodi gets emotional, remembers those who lost their lives during #COVID19@PMOIndia pic.twitter.com/PVYolSG9oO
— DD News (@DDNewslive) May 21, 2021
ಇದನ್ನೂ ಓದಿ: ಆಂಧ್ರದ ಆಯುರ್ವೇದ ಔಷಧಿಯಿಂದ ಕೊರೋನಾ ಗುಣಮುಖ!? ಹೊರ ರಾಜ್ಯಗಳಿಂದಲೂ ಹರಿದು ಬಂದ ಜನ
ಇನ್ನು ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 2,57,299 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,62,89,290ಕ್ಕೆ ಏರಿಕೆ ಆಗಿದೆ. ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಒಂದೇ ದಿನ 4,194 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,95,525ಕ್ಕೆ ಏರಿಕೆ ಆಗಿದೆ. ಈವರೆಗೆ 2,30,70,365 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 29,23,400 ಸಕ್ರಿಯ ಪ್ರಕರಣಗಳಿವೆ. ಸಾರ್ವಜನಿಕರು ಕೋವಿಡ್ ನಿಯಮವಾದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವು ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಜೊತೆ ಲಸಿಕೆ ಪಡೆಯುವ ಮೂಲಕ ಕೊರೋನಾ ವಿರುದ್ಧದ ಯುದ್ಧದಲ್ಲಿ ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ