ನಾಳೆ ಮುಖ್ಯಮಂತ್ರಿ ಪದವಿ ಬಿಟ್ಟು ಅಪ್ಪಟ ರೈತರಾಗಲಿದ್ದಾರೆ ಎಚ್.ಡಿ.ಕುಮಾರಸ್ವಾಮಿ!

news18
Updated:August 10, 2018, 1:44 PM IST
ನಾಳೆ ಮುಖ್ಯಮಂತ್ರಿ ಪದವಿ ಬಿಟ್ಟು ಅಪ್ಪಟ ರೈತರಾಗಲಿದ್ದಾರೆ ಎಚ್.ಡಿ.ಕುಮಾರಸ್ವಾಮಿ!
ಸಾಂದರ್ಭಿಕ ಚಿತ್ರ
news18
Updated: August 10, 2018, 1:44 PM IST
- ರಮೇಶ್​ ಆರ್​ ಹಂಡ್ರಂಗಿ, ನ್ಯೂಸ್ 18 ಕನ್ನಡ

ಬೆಂಗಳೂರು (ಆ.10): ಮೈತ್ರಿ ಸರ್ಕಾರದ ಮುಸುಕಿನ ಗುದ್ದಾಟ, ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿರೋಧ ಪಕ್ಷಗಳ ವಾಗ್ದಾಳಿ, ಸಾಲ ಮನ್ನಾ ಗೊಂದಲ, ರಾಜ್ಯದ ಆಡಳಿತ ಇವುಗಳನ್ನೆಲ್ಲಾ ಸಂಬಾಳಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನಾಳೆ ಆ ಪದವಿ ಬಿಟ್ಟು ಅಪ್ಪಟ ರೈತರಾಗಿ, ಭತ್ತದ ನಾಟಿ ಮಾಡಲಿದ್ದಾರೆ.

ಹೌದು, ಸತತ ಬರದಿಂದ ತತ್ತರಿಸಿದ್ದ ಮಂಡ್ಯ ಜಿಲ್ಲೆಯ ಜನತೆ ಕಳೆದ ನಾಲ್ಕು ವರ್ಷಗಳಿಂದ ಭತ್ತದ ನಾಟಿ ಮಾಡಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿ, ಕೆಆರ್​ಎಸ್​ ಭರ್ತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಹೀಗಾಗಿ ಸ್ವತಃ ಮುಖ್ಯಮಂತ್ರಿ ಅವರೇ ನಾಳೆ ಗದ್ದೆಗೆ ಇಳಿದು, ಭತ್ತದ ಪೈರು ನಾಟಿ ಮಾಡುವ ಮೂಲಕ ನಾಟಿ ಕೆಲಸಕ್ಕೆ ಚಾಲನೆ ನೀಡಲಿದ್ದಾರೆ.

ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಹೊರವಲಯದ ಮಹಾದೇವಮ್ಮ ಅವರಿಗೆ ಸೇರಿದ ಐದು ಎಕರೆ ಜಮೀನಿನಲ್ಲಿ ನಾಟಿ ಮಾಡಲಿದ್ದಾರೆ. ಮುಖ್ಯಮಂತ್ರಿ ಜೊತೆಗೆ 100 ಮಂದಿ ಮಹಿಳೆಯರು ಹಾಗೂ 50 ಜೋಡಿ ಎತ್ತುಗಳೊಂದಿಗೆ ಪುರುಷರು ನಾಟಿ ಕಾರ್ಯದಲ್ಲಿ ಸಾಥ್ ನೀಡಲಿದ್ದಾರೆ.

ಮುಖ್ಯಮಂತ್ರಿಗಳ ನಾಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ನಾಳೆ 11 ಗಂಟೆಗೆ ಕುಮಾರಸ್ವಾಮಿ ಅವರು ಸೀತಾಪುರ ಗ್ರಾಮಕ್ಕೆ ಆಗಮಿಸಿ, ರೈತರು ಮತ್ತು ಮಹಿಳೆಯರೊಂದಿಗೆ ಮಧ್ಯಾಹ್ನ 2 ಗಂಟೆಗಳವರೆಗೆ ನಾಟಿ ಕಾರ್ಯ ಮಾಡಲಿದ್ದಾರೆ. ಗದ್ದೆಯ ಮಧ್ಯ ಭಾಗದಲ್ಲಿ ಮೂರು ಜನ ನಿಲ್ಲುವಂತಹ ಪುಟ್ಟ ವೇದಿಕೆ ನಿರ್ಮಿಸಲಾಗಿದ್ದು, ಇಲ್ಲಿಂದ ಮುಖ್ಯಮಂತ್ರಿಗಳು ರೈತರಿಗೆ ಆತ್ಮವಿಶ್ವಾಸ ತುಂಬುವ ಮಾತುಗಳನ್ನು ಆಡಲಿದ್ದಾರೆ. ಸಿಡಿಎಸ್ ನಾಲೆ ಮೇಲೆ ಜನರು ಸೇರಲು ಅವಕಾಶ ಮಾಡಿಕೊಡಲಾಗಿದೆ. ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಂತರ ರೈತರೊಂದಿಗೆ ಸೇರಿ ಮಧ್ಯಾಹ್ನ ಊಟ ಸೇವಿಸಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಕೆಆರ್​ಎಸ್​ ಹೋಟೆಲ್​ನಲ್ಲಿ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಸಭೆ ನಡೆಸಲಿದ್ದಾರೆ ಎಂದು ಸಚಿವ ಸಿ.ಎಸ್. ಪುಟ್ಟರಾಜು ಮಾಹಿತಿ ನೀಡಿದ್ದಾರೆ.
Loading...

ಒಟ್ಟಿನಲ್ಲಿ ದೈನಂದಿನ ಜಂಜಾಟಗಳಾಚೆಗೆ ಮುಖ್ಯಮಂತ್ರಿ ಒಂದು ದಿನದ ಮಟ್ಟಿಗೆ ಅಪ್ಪಟ ರೈತರಾಗಲಿದ್ದಾರೆ. ಈ ಮೂಲಕ ರಾಜ್ಯದ ರೈತರಿಗೆ ಕುಮಾರಸ್ವಾಮಿ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಯಿದೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...