ಬೆಂಗಳೂರು: ಇಂದು ಕರ್ನಾಟಕ (Karnataka) ಕಾಂಗ್ರೆಸ್ (Congress) ಪಾಲಿನ ಐತಿಹಾಸಿಕ ದಿನ. 135 ಕ್ಷೇತ್ರ ಗೆಲ್ಲುವ ಮೂಲಕ ಸಾಧಿಸಿದ್ದು, ಬರೋಬ್ಬರಿ 34 ವರ್ಷಗಳಲ್ಲೇ ಸಾಧಿಸಿರದ ದಿಗ್ವಿಜಯ. ಫಲಿತಾಂಶ ಬಂದು 7 ದಿನದ ಬಳಿಕ ಸರ್ಕಾರ (Govt) ರಚನೆಯಾಗುತ್ತಿದೆ. ಸಿಎಂ ಆಗಿ ಸಿದ್ದರಾಮಯ್ಯ (Siddaramaiah), ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ (DK Shivakumar) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಹಬ್ಬದ ಸಡಗರ ಮನೆ ಮಾಡಿದ್ದು, ಪದಗ್ರಹಣ ಸಮಾರಂಭಕ್ಕೆ ಜೆಡಿಎಸ್ (JDS), ಬಿಜೆಪಿ (BJP) ನಾಯಕರಿಗೂ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಇದರ ಜೊತೆಗೆ ಎಷ್ಟು ಜನ ಕಾರ್ಯಕರ್ತರು ಬೇಕಾದರೂ ಕಾರ್ಯಕ್ರಮಕ್ಕೆ ಬನ್ನಿ ಅಂತ ಡಿಕೆ ಶಿವಕುಮಾರ್ ಮುಕ್ತ ಆಹ್ವಾನ ನೀಡಿದ್ದಾರೆ.
ರಾಜಧಾನಿಯ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. ಇನ್ನು ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ.
ಕಂಠೀರವದಲ್ಲಿ ಬಿಗಿ ಭದ್ರತೆ
ಕ್ರೀಡಾಂಗಣದ ಎರಡು ಗೇಟ್ಗಳಲ್ಲಿ ವಿವಿಐಪಿಗಳಿಗೆ ಮಾತ್ರ ಪ್ರವೇಶ ಸಿಗಲಿದ್ದು, ಭದ್ರತೆಗೆ 1500 ಪೊಲೀಸರ ನಿಯೋಜನೆ ಮಾಡಲಾಗಿದೆ. ಪೊಲೀಸ್ ಕಮಿಷನರ್, ಟ್ರಾಫಿಕ್ ಸ್ಪೆಷಲ್ ಕಮಿಷನರ್, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 8 ಮಂದಿ ಡಿಸಿಪಿ, 10 ಮಂದಿ ಎಸಿಪಿ ಅಧಿಕಾರಿಗಳು ಸೇರಿದಂತೆ 28 ಮಂದಿ ಪೊಲೀಸ್ ಇನ್ಸ್ಪೆಕ್ಟರ್ಗಳು ಹಾಗೂ 500 ಸಂಚಾರಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಉಳಿದಂತೆ ರಾಜ್ಯ ಕಾಂಗ್ರೆಸ್ ಪಾಳಯದ ಇಂದಿನ ಕಾರ್ಯಕ್ರಮವನ್ನು ಭೂತೋ ನ ಭವಿಷ್ಯತಿ ಅನ್ನೋ ಹಾಗೆ ಮಾಡಬೇಕು ಎಂದು ಸಿದ್ಧತೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ದೇಶದ ಉದ್ದಗಲ ಗಣ್ಯಾತಿ ಗಣ್ಯರಿಗೆ ಆಹ್ವಾನಿಸಲಾಗಿದೆ. ವಿಐಪಿಗಳ ದಂಡೇ ಹರಿದು ಬರುತ್ತಿದ್ದು, ಇವರೆಲ್ಲರಿಗೂ Z+ ಭದ್ರತೆಯನ್ನೂ ಒದಗಿಸಲಾಗುತ್ತೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಘಡ ಸಿಎಂ ಭೂಪೇಶ್ ಬಘೇಲಾ, ಬಿಹಾರ ಸಿಎಂ ನಿತೀಶ್ ಕುಮಾರ್, ಹಿಮಾಚಲ ಪ್ರದೇಶ ಸಿಎಂ ಸುಕ್ವಿಂದರ್ ಸಿಂಗ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಪಾಂಡಿಚೇರಿ ಸಿಎಂ ಎನ್.ರಂಗಸ್ವಾಮಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಭಾಗಿಯಾಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ