ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ; ಗೋಪೂಜೆ ಮಾಡಿ ಸಂಭ್ರಮಿಸಿದ ಸಿಎಂ ಬಿಎಸ್​ ಯಡಿಯೂರಪ್ಪ

BS Yediyurappa: ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಇಂದು ಕಾವೇರಿ ನಿವಾಸದಲ್ಲಿ ಗೋವಿಗೆ ಪೂಜೆ ಮಾಡಿ ಸಿಎಂ ಬಿಎಸ್​ ಯಡಿಯೂರಪ್ಪ ಸಂಭ್ರಮಿಸಿದರು.

ಸಿಎಂ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ

 • Share this:
  ಬೆಂಗಳೂರು (ಡಿ. 11): ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ವಿಧೇಯಕ ಗೋಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ 2020ನೇ ಸಾಲಿನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಮಂಡನೆ ಮಾಡಲಾಗಿದ್ದು, ರಾಜ್ಯ ವಿಧಾನಸಭೆ ಅಂಗೀಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಮ್ಮ ಕಾವೇರಿ ನಿವಾಸದಲ್ಲಿ ಗೋವಿಗೆ ಪೂಜೆ ಮಾಡಿ, ಸಂಭ್ರಮಿಸಿದರು.

  ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಇಂದು ಕಾವೇರಿ ನಿವಾಸದಲ್ಲಿ ಗೋವಿಗೆ ಪೂಜೆ ಮಾಡಿ ಸಿಎಂ ಬಿಎಸ್​ ಯಡಿಯೂರಪ್ಪ ಸಂಭ್ರಮಿಸಿದರು. ಪೂಜೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಎಸ್ ಆರ್ ವಿಶ್ವನಾಥ್ ಕೂಡ ಭಾಗಿಯಾಗಿದ್ದರು. ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಗೋಪೂಜೆ ನೆರವೇರಿಸಿದ್ದರು. ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾದ ಬಳಿಕ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲೂ ಗೋಪೂಜೆ ಮಾಡಲಾಗಿತ್ತು.  ಎರಡು ದಿನಗಳ ಹಿಂದೆ ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ವಿಧೇಯಕ ಮಂಡನೆಗೆ ಆರಂಭಿಸುತಿದ್ದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಸದನ ಸಲಹಾ ಸಮಿತಿಯಲ್ಲಿ ಹೊಸ ವಿಧೇಯಕವನ್ನು ಮಂಡನೆ ಮಾಡುವಂತಿಲ್ಲ. ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿರುವ ವಿಧೇಯಕಗಳನ್ನು ಮಾತ್ರ ಮಂಡಿಸಬೇಕು ಎಂದು ತೀರ್ಮಾನಿಸಲಾಗಿದೆ. ಇದ್ದಕ್ಕಿದ್ದಂತೆ ಹೊಸ ಮಸೂದೆಯನ್ನು ಮಂಡಿಸಲು ನಾವು ಒಪ್ಪುವುದಿಲ್ಲ ಎಂದು ಸದನದ ಬಾವಿಗಿಳಿದು ಕಾಂಗ್ರೆಸ್ ಶಾಸಕರ ಜೊತೆ ಪ್ರತಿಭಟನೆ ನಡೆಸಿದರು.

  ಇದನ್ನೂ ಓದಿ: ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಂದಾದ ಸಿಎಂ ಯಡಿಯೂರಪ್ಪ ಸರ್ಕಾರ

  ಆದರೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ಮಸೂದೆ ಮಂಡನೆಗೆ ಅವಕಾಶ ನೀಡಿದರು. ಮಹತ್ವದ ಬಿಲ್ ಮಂಡನೆ ಮಾಡಬಹುದು ಎಂದು ಚರ್ಚೆಯಾಗಿತ್ತು. ಹೀಗಾಗಿ ಇದನ್ನು ಮಂಡನೆಗೆ ಅವಕಾಶ ಕೊಟ್ಟಿರುವುದಾಗಿ ಹೇಳಿದರು. ಹೀಗಾಗಿ, ಕಾಂಗ್ರೆಸ್, ಜೆಡಿಎಸ್ ಶಾಸಕರ ವಿರೋಧದ ನಡುವೆಯೇ ಗೋ ಹತ್ಯೆ ನಿಷೇಧ ಮಸೂದೆಯನ್ನು ಮಂಡನೆ ಮಾಡಲಾಯಿತು. ಆ ಮಸೂದೆಯನ್ನು ಸದನದಲ್ಲಿ ಅಂಗೀಕರಿಸಲಾಯಿತು.

  ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಗೋಹತ್ಯೆ ನಿಷೇಧ ಕಾಯ್ದೆ ಇನ್ನೂ ವಿಧಾನ ಪರಿಷತ್​ನಲ್ಲಿ ಮಂಡನೆಯಾಗಿಲ್ಲ. ಈ ಮೂಲಕ ವಿಧಾನಸಭೆಯಲ್ಲಿ ದಿಢೀರ್ ಎಂದು ಗೋಹತ್ಯೆ ನಿಷೇಧ ವಿಧೇಯಕವನ್ನು ಮಂಡನೆ ಮಾಡಿದ್ದ ರಾಜ್ಯ ಸರ್ಕಾರದ ಲೆಕ್ಕಾಚಾರ ವಿಧಾನ ಪರಿಷತ್​ನಲ್ಲಿ ತಲೆ ಕೆಳಗಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ವಿಧಾನ ಪರಿಷತ್ ಸಭಾಪತಿ ಪ್ರತಾಪ್​ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮೂಲಕ ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸಿಎಂ ಯಡಿಯೂರಪ್ಪನವರ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಮಂಗಳವಾರ ಒಂದು ದಿನದ ಅಧಿವೇಶನ ಕರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದಾರೆ.
  Published by:Sushma Chakre
  First published: