ಬೆಂಗಳೂರು (ಜನವರಿ 30); ರಾಜ್ಯ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರಾದ ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ಜೊತೆಗೆ ಚರ್ಚಿಸುವ ಸಲುವಾಗಿ ಬಿ.ಎಸ್. ಯಡಿಯೂರಪ್ಪ ಇಂದು ದೆಹಲಿಗೆ ತೆರಳುವವರಿದ್ದಾರೆ. ಪರಿಣಾಮ ಸಿಎಂ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಅಲ್ಲದೆ, ಸಚಿವ ಸ್ಥಾನ ಆಕಾಂಕ್ಷಿಗಳು ಡಾಲರ್ಸ್ ಕಾಲೋನಿ ಕಡೆಗೆ ಎಡತಾಕುತ್ತಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ಮುಂದುವರೆಸಿದ್ದಾರೆ.
ಬುಧವಾರ ಶಿವಮೊಗ್ಗಕ್ಕೆ ತೆರಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಬೆಂಗಳೂರಿನ ತಮ್ಮ ನಿವಾಸಕ್ಕೆ ಮರಳಿದ್ದಾರೆ. ಆದರೆ, ಸಿಎಂ ತಮ್ಮ ಮನೆಗೆ ಬರುವುದಕ್ಕೂ ಮುನ್ನವೇ ಸಚಿವ ಸ್ಥಾನ ಆಕಾಂಕ್ಷಿಗಳಾದ ಶಾಸಕ ಡಾ. ಸುಧಾಕರ್, ಮುರುಗೇಶ್ ನಿರಾಣಿ ಹಾಗೂ ಮುನಿರತ್ನ ಸಿಎಂ ಮನೆಗೆ ತೆರಳಿ ಅವರಿಗಾಗಿ ಕಾದು ಕುಳಿತಿದ್ದರು.
ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೂಲಕ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಮುರುಗೇಶ್ ನಿರಾಣಿ, ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಶ್ರೀ ಅವರಿಂದಲೂ ಬಹಿರಂಗ ಹೇಳಿಕೆ ನೀಡಿಸಿದ್ದರು. ಇದರ ವಿರುದ್ಧ ಬಿಎಸ್ವೈ ಅಸಮಾಧನಗೊಂಡಿರುವ ಹಿನ್ನೆಲೆಯಲ್ಲಿ ಇಂದು ಅವರ ಮನೆಗೆ ಆಗಮಿಸಿರುವ ನಿರಾಣಿ,
"ಕ್ಷಮಿಸಿ ಸರ್, ವಚನಾನಂದ ಸ್ವಾಮೀಜಿ ಹೇಳಿಕೆಗೆ ನಾನು ಕ್ಷಮೆ ಕೇಳುತ್ತೇನೆ. ದಯಮಾಡಿ ಅದನ್ನು ಮನಸ್ಸಿನಲ್ಲಿ ಇಟ್ಕೊಂಡು ನನ್ನನ್ನು ಮರೆಯಬೇಡಿ. ನಾನು ಪಕ್ಷಕ್ಕಾಗಿ ಬಹಳ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ನಾನು ಕೂಡ ಹಿರಿಯ ನಾಯಕನಿದ್ದೇನೆ, ಹೀಗಾಗಿ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ. ಈ ಬಾರಿ ನನಗೆ ಮಂತ್ರಿ ಸ್ಥಾನ ಕೊಡಿ. ಸಮುದಾಯದಲ್ಲೂ ಕೂಡ ನಾನು ಹಿರಿಯ ನಾಯಕನಾಗಿದ್ದೇನೆ. ದಯಮಾಡಿ ನನ್ನನ್ನು ಪರಿಗಣಿಸಿ” ಎಂದು ದುಂಬಾಲು ಬೀಳುವ ಮೂಲಕ ಸಚಿವ ಸ್ಥಾನಕ್ಕೆ ಕೊನೆಯ ಪ್ರಯತ್ನ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರದ ಮಾಜಿ ಹಾಗೂ ಅನರ್ಹ ಶಾಸಕ ಮುನಿರತ್ನ ಸಹ ಸಿಎಂ ಮನೆಗೆ ಆಗಮಿಸಿದ್ದರು. ಅಲ್ಲದೆ, ತಮ್ಮ ಸ್ನೇಹಿತರಾದ ಎಸ್.ಟಿ. ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಈ ನಡುವೆ ತಮ್ಮ ವಿರುದ್ಧ ಬಿಜೆಪಿ ನಾಯಕರು ದಾಖಲು ಮಾಡಿರುವ ‘ನಕಲಿ ಐಡಿ ವೋಟರ್’ ಪ್ರಕರಣದ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾದ ಡಾ. ಸುಧಾಕರ್ ಸಿಎಂ ಭೇಟಿಗಾಗಿ ಅವರ ಮನೆಗೆ ಆಗಮಿಸಿದ್ದರಾದರೂ, ಯಡಿಯೂರಪ್ಪ ಬರುವುದು ತಡವಾದ ಕಾರಣ ಸುಧಾಕರ್ ವಾಪಸ್ ತೆರಳಿದ್ದಾರೆ. ಈ ನಡುವೆ ಇಂದು ಮಧ್ಯಾಹ್ನ ದೆಹಲಿಗೆ ಹೊರಡಲಿರುವ ಬಿಎಎಸ್ವೈ ಸಂಜೆ ವೇಳೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ