Karnataka Unlock: ನಾಳೆಯೊಳಗೆ ಕರ್ನಾಟಕದಲ್ಲಿ ಎರಡನೇ ಹಂತದ ಅನ್ಲಾಕ್ ಬಗ್ಗೆ ನಿರ್ಧಾರ; ಸಿಎಂ ಯಡಿಯೂರಪ್ಪ
ಇವತ್ತು, ನಾಳೆ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೊರೋನಾ ಕೇಸುಗಳು ಕಡಿಮೆಯಾಗುತ್ತಿರುವುದರಿಂದ ಯೋಚನೆ ಮಾಡಿ, ಎರಡನೇ ಹಂತದ ಅನ್ ಲಾಕ್ ಬಗ್ಗೆ ನಿರ್ಧಾರ ಮಾಡ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು (ಜೂನ್ 15): ಕರ್ನಾಟಕದಲ್ಲಿ ಭುಗಿಲೆದ್ದಿರುವ ನಾಯಕತ್ವ ವಿವಾದ ಸೇರಿದಂತೆ ಬಿಜೆಪಿ ಶಾಸಕರ ಅಸಮಾಧಾನ ಸರಿಪಡಿಸಲು ನಾಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ನಾಯಕತ್ವ ಬದಲಾವಣೆಯ ಬಗ್ಗೆ ನಮಗೆ ಯಾವುದೇ ಗೊಂದಲವಿಲ್ಲ. ಅಂತಹ ಚರ್ಚೆ ಸದ್ಯಕ್ಕಿಲ್ಲ. ಅರುಣ್ ಸಿಂಗ್ ರಾಜ್ಯದ ಉಸ್ತುವಾರಿಯಾದ್ದರಿಂದ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ ಮೊದಲ ಹಂತದ ಅನ್ಲಾಕ್ ಘೋಷಣೆಯಾಗಿದೆ. ಎರಡನೇ ಹಂತದಲ್ಲಿ ಅನ್ ಲಾಕ್ ಮಾಡುವ ವಿಚಾರವಾಗಿ ಮಾತನಾಡಿರುವ ಸಿಎಂ ಯಡಿಯೂರಪ್ಪ, ಇವತ್ತು, ನಾಳೆ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೊರೋನಾ ಕೇಸುಗಳು ಕಡಿಮೆಯಾಗುತ್ತಿರುವುದರಿಂದ ಯೋಚನೆ ಮಾಡಿ, ಎರಡನೇ ಹಂತದ ಅನ್ ಲಾಕ್ ಬಗ್ಗೆ ನಿರ್ಧಾರ ಮಾಡ್ತೇವೆ ಎಂದಿದ್ದಾರೆ.
ಎರಡನೇ ಹಂತದಲ್ಲಿ ಯಾವುದಕ್ಕೆಲ್ಲ ವಿನಾಯಿತಿ ಕೊಡಬಹುದು ಎಂಬುದರ ಬಗ್ಗೆ ಯೋಚನೆ ಮಾಡುತ್ತೇವೆ. ಸದ್ಯಕ್ಕೆ ಕೊರೋನಾ ಕೇಸುಗಳನ್ನು ನಿಯಂತ್ರಣಕ್ಕೆ ತರುವುದೊಂದೇ ನಮ್ಮ ಸರ್ಕಾರದ ಮುಂದಿರುವ ಗುರಿ. ಕೊವೀಡ್ ಸುಧಾರಣೆ ನೋಡಿಕೊಂಡು ಉಳಿದ ಕ್ಷೇತ್ರ ಗಳಿಗೆ ವಿನಾಯಿತಿ ನೀಡುವ ಬಗ್ಗೆ ನಿರ್ಧಾರ ಮಾಡ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಅರುಣ್ ಸಿಂಗ್ ಜೊತೆಗೆ ಮತ್ತೊಬ್ಬ ವೀಕ್ಷಕ ಬರಬೇಕು ಎಂಬ ಆಗ್ರಹದ ವಿಚಾರವಾಗಿ ಈ ವೇಳೆ ಪ್ರತಿಕ್ರಿಯೆ ನೀಡಿರುವ ಸಿಎಂ ಯಡಿಯೂರಪ್ಪ, ಅರುಣ್ ಸಿಂಗ್ ನಮ್ಮ ರಾಜ್ಯದ ಉಸ್ತುವಾರಿಗಳು. ನಾಳೆ ಕರ್ನಾಟಕಕ್ಕೆ ಬರಲಿರುವ ಅವರು ಎಲ್ಲಾ ಶಾಸಕರು, ಸಂಸದರ ಜೊತೆ ಚರ್ಚೆ ಮಾಡ್ತಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಯಾರು ಬೇಕಾದರೂ ಅವರನ್ನು ಭೇಟಿ ಮಾಡಬಹುದು. ಅವರು ಗೆಸ್ಟ್ ಹೌಸ್ನಲ್ಲಿದ್ದು ಎಲ್ಲಾ ವಿಷಯಗಳ ಬಗ್ಗೆ ಸುದೀರ್ಘವಾಗಿ ತಿಳಿದುಕೊಳ್ಳುತ್ತಾರೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಗೊಂದಲ ಇಲ್ಲ. ನಾನು ಕೂಡ ಅವರ ಜೊತೆ ಅವರಿಗೆ ಎಲ್ಲಾ ರೀತಿಯ ಸಹಕಾರ ಕೊಡ್ತೇನೆ ಎಂದಿದ್ದಾರೆ.
ನಾಯಕತ್ವದ ಬಗ್ಗೆ ಯಾರೋ ಒಂದಿಬ್ಬರಿಗೆ ಬೇಸರ ಇರಬಹುದು. ಆದರೆ ಅವರನ್ನು ಕರೆದು ಅರುಣ್ ಸಿಂಗ್ ಮಾತಾಡ್ತಾರೆ. ನಾಯಕತ್ವದ ಬಗ್ಗೆಯಾಗಲಿ, ಬೇರೆ ವಿಷಯದ ಬಗ್ಗೆಯಾಗಲಿ ಯಾವುದೇ ಗೊಂದಲ ಇಲ್ಲ. ನಾವು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎನ್ನುವ ಮೂಲಕ ತಾವು ಪೂರ್ಣಾವಧಿಗೆ ಸಿಎಂ ಆಗಿ ಮುಂದುವರೆಯುವ ಸುಳಿವು ನೀಡಿದ್ದಾರೆ ಬಿ.ಎಸ್. ಯಡಿಯೂರಪ್ಪ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ