ಬೆಂಗಳೂರು (ಸೆ.23): ತಿರುಪತಿಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆಗಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಸಂಜೆ ತಿರುಮಲಕ್ಕೆ ಪ್ರಯಾಣ ಬೆಳಸಿದರು. ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಅವರು ಪ್ರಯಾಣ ಬೆಳಸಿದ್ದಾರೆ. ಇಂದು ರಾತ್ರಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಜೊತೆ ಅವರು ಭೋಜನ ಕೂಟದಲ್ಲಿ ಭಾಗಿಯಾಗಲಿದ್ದಾರೆ. ತಿರುಮಲದ ಪದ್ಮಾವತಿ ಗೆಸ್ಟ್ ಹೌಸ್ ನಲ್ಲಿ ಈ ವಿಶೇಷ ಭೋಜನ ಕೂಟಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ ಅವರು, ಕರ್ನಾಟಕ ಭವನ ನಿರ್ಮಾಣ ಶಂಕು ಸ್ಥಾಪನೆ ಮಾಡಿ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಮರಳಲಿದ್ದಾರೆ. ಈ ಭೇಟಿ ವೇಳೆ ಅವರು ತಿಮ್ಮಪ್ಪನ ದರ್ಶನವನ್ನು ಪಡೆಯಲಿದ್ದಾರೆ.
ತಿರುಪತಿಯಲ್ಲಿ ಕರ್ನಾಟಕದ ಭಕ್ತರಿಗೆ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದಾಗಿ ಕರ್ನಾಟಕ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ತಿರುಪತಿಯಲ್ಲಿ ಹಾಲಿ ಇರುವ ಕರ್ನಾಟಕ ಭವನ ಜೊತೆ ವಸತಿ ನಿರ್ಮಾಣ ಮಾಡಲು ಮುಂದಾಗಿದೆ. 7.5ಎಕರೆ ಜಾಗದಲ್ಲಿ ಈ ವಸತಿ ಗೃಹ ನಿರ್ಮಾಣ ವಾಗುತ್ತಿದೆ. ತಿರುಮಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದಿಂದ ಭಕ್ತರು ತೆರಳುತ್ತಾರೆ. ಇವರಲ್ಲಿ ಅನೇಕರು ಕರ್ನಾಟಕ ಭವನದ ಸೌಲಭ್ಯ ಸಿಗದೆ ವಂಚಿತರಾಗಿದ್ದಾರೆ. ಈ ಕಾಮಗಾರಿಯಿಂದ ಅವರಿಗೆ ಲಾಭಾ ಸಿಗಲಿದೆ.
![Andra cm ys jagan mohan reddy offered pattu vastram to lord venkateshwara in tirumala]()
ವೆಂಕಟೇಶ್ವರನಿಗೆ ಪಟ್ಟು ವಸ್ತ್ರ ಕಾಣಿಕೆ ನೀಡಿದ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ
ಇಂದು ತಿರುಪತಿಯಲ್ಲಿ ಶ್ರೀವಾರಿ ಬ್ರಹ್ಮೋತ್ಸವ ಕಾರ್ಯಕ್ರಮ ಕೂಡ ಜರುಗುತ್ತಿದೆ. ಬ್ರಹ್ಮೋತ್ಸವದಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಭಾಗಿಯಾಗಿದ್ದಾರೆ. ರೇಷ್ಮೆ ಪಂಚೆ, ಶಲ್ಯ ಉಟ್ಟ ಅವರು ತಿಮ್ಮಪ್ಪನಿಗೆ ಪಟ್ಟು ವಸ್ತ್ರ( ದೇವರಿಗೆ ನೀಡುವ ರೇಷ್ಮೆ ಬಟ್ಟೆ) ಕಾಣಿಕೆ ನೀಡಿದ್ದಾರೆ. ಮಂಗಳವಾದ್ಯಗಳೊಂದಿಗೆ ನಡೆದ ಗರುಡಾ ಸೇವೆಯಲ್ಲಿ ಕೂಡ ಅವರು ಭಾಗಿಯಾಗಿದ್ದಾರೆ. ಇದೇ ವೇಳೆ ತಿರುಮಲ ತಿರುಪತಿಯ ಕ್ಯಾಲೆಂಡರ್, ಡೈರಿ ಬಿಡುಗಡೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ