ಬೆಂಗಳೂರು (ಜ. 27): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಸಿಎಂ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಸುಪ್ರೀಂ ಕೋರ್ಟ್ನ ಸಿಜೆಐ ಈ ವಿಚಾರಣೆ ನಡೆಸಲಿದ್ದು, ಇಂದು ಸಿಎಂ ಯಡಿಯೂರಪ್ಪನವರಿಗೆ ನಿರ್ಣಾಯಕ ದಿನವಾಗಿದೆ.
ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಸತಿ ಯೋಜನೆಗೆ 26 ಎಕರೆ ಭೂಮಿ ಮಂಜೂರು ಮಾಡಿದ ಬಗ್ಗೆ ಹಾಗೂ ನಕಲಿ ದಾಖಲೆ, ನಕಲಿ ಸಹಿ ಬಳಸಿ ಭೂಮಿಯನ್ನು ವಾಪಾಸ್ ಪಡೆದ ಬಗ್ಗೆ ತನಿಖೆ ನಡೆಸಬೇಕೆಂದು ಆದೇಶಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ದೊಡ್ಡ ಕಾರು, ಸಾಹುಕಾರರೇ ಓಡಾಡಬೇಕಾ? ರೈತರ ಪ್ರತಿಭಟನೆ ತಡೆದಿದ್ದಕ್ಕೆ ಡಿಕೆ ಶಿವಕುಮಾರ್ ಆಕ್ರೋಶ
ನಕಲಿ ಸಹಿ ಬಳಸಿ 2010-11ರಲ್ಲಿ ಯಡಿಯೂರಪ್ಪ ಹಾಗೂ ಆಗಿನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಮ್ಮಿಂದ ಭೂಮಿಯನ್ನು ವಾಪಾಸ್ ಪಡೆದಿದ್ದರು ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ಉದ್ಯಮಿ ಎ. ಅಲಂ ಪಾಷಾ ದೂರು ದಾಖಲಿಸಿದ್ದರು. ತಮ್ಮ ವಿರುದ್ಧದ ವಿಚಾರಣೆ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಜ. 5ರಂದು ಹೈಕೋರ್ಟ್ ವಜಾಗೊಳಿಸಿತ್ತು. ಹಾಗೇ, ಅರ್ಜಿ ವಜಾ ಜೊತೆಗೆ ಹೈಕೋರ್ಟ್ ಯಡಿಯೂರಪ್ಪ ಹಾಗೂ ಮುರುಗೇಶ್ ನಿರಾಣಿ ಅವರ ವಿಚಾರಣೆಗೆ ಆದೇಶಿಸಿತ್ತು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ, ನ್ಯಾಯಮೂರ್ತಿ ಎಎಸ್ ಬೋಪಣ್ಣ, ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣ್ಯಂ ಅವರ ನ್ಯಾಯಪೀಠ ಇಂದು ಯಡಿಯೂರಪ್ಪ ಹಾಗೂ ಮುರುಗೇಶ್ ನಿರಾಣಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.
(ವರದಿ: ಧರಣೀಶ್ ಬೂಕನಕೆರೆ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ