news18-kannada Updated:December 11, 2020, 10:07 AM IST
ಸಿಎಂ ಬಿಎಸ್ ಯಡಿಯೂರಪ್ಪ
ಬೆಂಗಳೂರು (ಡಿ. 11): ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಗೋಹತ್ಯೆ ನಿಷೇಧ ಕಾಯ್ದೆ ಇನ್ನೂ ವಿಧಾನ ಪರಿಷತ್ನಲ್ಲಿ ಮಂಡನೆಯಾಗಿಲ್ಲ. ಈ ಮೂಲಕ ವಿಧಾನಸಭೆಯಲ್ಲಿ ದಿಢೀರ್ ಎಂದು ಗೋಹತ್ಯೆ ನಿಷೇಧ ವಿಧೇಯಕವನ್ನು ಮಂಡನೆ ಮಾಡಿದ್ದ ರಾಜ್ಯ ಸರ್ಕಾರದ ಲೆಕ್ಕಾಚಾರ ವಿಧಾನ ಪರಿಷತ್ನಲ್ಲಿ ತಲೆ ಕೆಳಗಾಗಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ವಿಧಾನ ಪರಿಷತ್ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮೂಲಕ ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸಿಎಂ ಯಡಿಯೂರಪ್ಪನವರ ಸರ್ಕಾರ ನಿರ್ಧರಿಸಿದೆ.
ಮೇಲ್ಮನೆಯಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಮಂಡನೆಯಾಗದ ಕಾರಣದಿಂದ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಂಗಳವಾರ ಒಂದು ದಿನದ ಅಧಿವೇಶನ ಕರೆಯಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ರಾಜ್ಯಪಾಲರ ಜೊತೆಯೂ ಚರ್ಚೆ ಮಾಡಿದ್ದೇವೆ. ಅಧಿವೇಶನವನ್ನು ಮುಂದೂಡುವ ಅಧಿಕಾರ ವಿಧಾನ ಪರಿಷತ್ ಸಭಾಪತಿಗಳಿಗೆ ಇಲ್ಲ ಎಂದು ನಿನ್ನೆ ಅಧಿವೇಶನ ಬೇಗ ಮುಕ್ತಾಯಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೋದಿ, ಅಮಿತ್ ಶಾ, ಯಡಿಯೂರಪ್ಪಗೆ ತಾಕತ್ತಿದ್ದರೆ ಗೋಮಾಂಸ ರಪ್ತು ಬ್ಯಾನ್ ಮಾಡಲಿ; ವಿಎಸ್ ಉಗ್ರಪ್ಪ ಸವಾಲು
ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಲು ವಿಧಾನ ಪರಿಷತ್ ಸಭಾಪತಿ ಸಹಕಾರ ಕೊಡುತ್ತಿರಲಿಲ್ಲ. ಅದಕ್ಕಾಗಿ ಸುಗ್ರೀವಾಜ್ಣೆ ಮೂಲಕ ಕಾಯ್ದೆ ಜಾರಿ ಮಾಡಲು ಕ್ರಮ ವಹಿಸಲಾಗಿದೆ. ಮಂಗಳವಾರ ಮತ್ತೊಮ್ಮೆ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಪತ್ರ ಕಳುಹಿಸಿಲಾಗಿದೆ. ಯಾವುದೇ ಕಾರಣಕ್ಕೂ ಅಧಿವೇಶನವನ್ನು ಮುಂದೂಡುವ ಅಧಿಕಾರ ಸಭಾಪತಿಗಿಲ್ಲ. ಹಿಂದೆ ಬಿಎಸಿ ಸಭೆಯಲ್ಲಿ ಮಂಗಳವಾರದವರೆಗೂ ಸದನ ನಡೆಸಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಭಾಪತಿಗಳೇ ಇದ್ದರು. ಆದರೂ ಕೂಡ ದಿಢೀರನೆ ಮುಂದೆ ಹಾಕಿದ್ದಾರೆ. ಹೀಗಾಗಿ, ಮಂಗಳವಾರ ಅಧಿವೇಶನ ನಡೆಸಲು ನಿರ್ಧಾರ ಮಾಡಿದ್ದೇವೆ. ರಾಜ್ಯಪಾಲರಿಗೂ ಈ ಬಗ್ಗೆ ಪತ್ರ ಕಳುಹಿಸಿದ್ದೇವೆ ಎಂದಿದ್ದಾರೆ.
ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಇಂದು ಕಾವೇರಿ ನಿವಾಸದಲ್ಲಿ ಗೋವಿಗೆ ಪೂಜೆ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಸಂಭ್ರಮಿಸಿದರು. ಪೂಜೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಎಸ್ ಆರ್ ವಿಶ್ವನಾಥ್ ಕೂಡ ಭಾಗಿಯಾಗಿದ್ದರು.
ಇದೇ ವೇಳೆ ಸಾರಿಗೆ ನೌಕರರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಸಾರಿಗೆ ನೌಕರರು ಪ್ರತಿಭಟನೆಯನ್ನು ಕೈ ಬಿಡಬೇಕು. ಕೋವಿಡ್ ಹಾಗೂ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಅವರ ಬೇಡಿಕೆಯನ್ನು ಸದ್ಯಕ್ಕೆ ಈಡೇರಿಸೋದು ಕಷ್ಟ. ಈ ಕುರಿತು ಈಗಾಗಲೇ ಸಂಬಂಧಪಟ್ಟ ಸಚಿವರು ಅವರೊಂದಿಗೆ ಚರ್ಚೆ ಮಾಡಿದ್ದಾರೆ ಎಂದರು.
Published by:
Sushma Chakre
First published:
December 11, 2020, 10:00 AM IST