BS Yediyurappa: ಶ್ರಮಿಕ ವರ್ಗಕ್ಕೆ 1,250 ಕೋಟಿ ಗಾತ್ರದ ವಿಶೇಷ ಪ್ಯಾಕೇಜ್; ಸಿಎಂ ಯಡಿಯೂರಪ್ಪ ಘೋಷಣೆ

BS Yediyurappa Press Conference: ಇಂದು ಸುದ್ದಿಗೋಷ್ಠಿ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಬಹುತೇಕ ಎಲ್ಲ ಶ್ರಮಿಕ ವರ್ಗದವರಿಗೆ 1,250 ಕೋಟಿ ರೂ. ಗಾತ್ರದ ಸಹಾಯಧನ ಘೋಷಿಸಿದ್ದಾರೆ. ಲಾಕ್​ಡೌನ್ ಮುಂದುವರೆಸುವ ಬಗ್ಗೆ ಮೇ 23ರಂದು ಘೋಷಿಸುವುದಾಗಿ ತಿಳಿಸಿದ್ದಾರೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

 • Share this:
  ಬೆಂಗಳೂರು (ಮೇ 19): ಕರ್ನಾಟಕದಲ್ಲಿ ಕಳೆದೊಂದು ತಿಂಗಳಿಂದ ಜನತಾ ಕರ್ಫ್ಯೂ ಮತ್ತು ಲಾಕ್​ಡೌನ್​ನಿಂದಾಗಿ ವ್ಯಾಪಾರ-ವಹಿವಾಟುಗಳು ಸ್ಥಗಿತಗೊಂಡಿರುವುದರಿಂದ ಅನೇಕ ಜನರು ಪರದಾಡುತ್ತಿದ್ದಾರೆ. ಹೀಗಾಗಿ, ಸರ್ಕಾರ ಆದಷ್ಟು ಬೇಗ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಇಂದು ಸುದ್ದಿಗೋಷ್ಠಿ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಬಹುತೇಕ ಎಲ್ಲ ಶ್ರಮಿಕ ವರ್ಗದವರಿಗೆ ಸಹಾಯಧನ ಘೋಷಿಸಿದ್ದಾರೆ. 1,250 ಕೋಟಿ ರೂ. ಗಾತ್ರದ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಲಾಕ್​ಡೌನ್ ಮುಂದುವರೆಸುವ ಬಗ್ಗೆ ಮೇ 23ರಂದು ನಿರ್ಧಾರ ಮಾಡಿ, ಘೋಷಿಸುವುದಾಗಿ ತಿಳಿಸಿದ್ದಾರೆ.

  ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್​ಗೆ 10 ಸಾವಿರ ರೂ. ಪರಿಹಾರ ನೀಡಲಾಗುವುದು. ಕಟ್ಟಡ ಕಾರ್ಮಿಕರಿಗೆ - 490 ಕೋಟಿ ರೂ. ಮೀಸಲಿಡಲಾಗಿದೆ. ಅಸಂಘಟಿತ ಕಾರ್ಮಿಕರಿಗೆ- 61 ಕೋಟಿ ರೂ, ರಸ್ತೆ ಬದಿ ವ್ಯಾಪಾರಸ್ಥರಿಗೆ 2 ಸಾವಿರ ರೂಪಾಯಿಯಂತೆ ಒಟ್ಟು 45 ಕೋಟಿ ಖರ್ಚು ಮಾಡಲಾಗಿದೆ. ಕಲಾವಿದರಿಗೆ, ಕಲಾತಂಡಗಳಿಗೆ 2,000 ರೂ., ಹಣ್ಣು, ತರಕಾರಿ ಬೆಳೆಗಾರರಿಗೆ 10 ಸಾವಿರ ರೂ. ಸಹಾಯ ಧನ, ಬಿಬಿಎಂಪಿ, ನಗರಾಭಿವೃದ್ಧಿ ಅಡಿಯಲ್ಲಿ ಇಂದಿರಾ ಕ್ಯಾಂಟೀನ್​ನಲ್ಲಿ 6 ಲಕ್ಷ ಜನರಿಗೆ ಊಟ ನೀಡಲಾಗುತ್ತಿದೆ. ಇದಕ್ಕೆ 25 ಕೋಟಿ ಖರ್ಚು ಆಗುತ್ತಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

  ಲೈನ್ ಮ್ಯಾನ್, ಗ್ಯಾಸ್ ಸಿಲಿಂಡರ್ ಸಪ್ಲೆ ಮಾಡುವವರನ್ನು ಪ್ರಂಟ್​ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿ, ಉಚಿತ ಲಸಿಕೆ ನೀಡಲಾಗುವುದು. ಆಟೋ ಚಾಲಕರಿಗೆ 3 ಸಾವಿರ ರೂ. ಸಹಾಯಧನ ನೀಡಲು ನಿರ್ಧರಿಸಲಾಗಿದೆ. 16,100 ಜನರಿಗೆ ಸಹಾಯಧನಕ್ಕೆ 4 ಕೋಟಿ ರೂ. ಖರ್ಚಾಗಲಿದೆ. ಬೀದಿ ಬದಿಯ ವ್ಯಾಪಾರಿಗಳಿಗೆ 2 ಸಾವಿರ ರೂ, ಹೂ-ಹಣ್ಣು ವರ್ತಕರಿಗೆ 3 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ವರ್ಷ ಲಾಕ್​ಡೌನ್ ವೇಳೆ ತಲಾ 5 ಸಾವಿರ ರೂ. ಸಹಾಯಧನ ನೀಡಲಾಗಿತ್ತು.

  ಕೊರೊನಾ ಪರಿಸ್ಥಿತಿ ನಿರ್ವಹಿಸುವ ಸಲುವಾಗಿ 3 ದಿನಗಳಲ್ಲಿ 2500 ವೈದ್ಯರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ರೈತರು, ಸ್ವಸಹಾಯ ಸಂಘ, ಸೊಸೈಟಿ ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

  ಕೊರೋನಾ ನಿಯಂತ್ರಣ ಸಲುವಾಗಿ ರಾಜ್ಯದಲ್ಲಿ ಮೇ 24ರವರೆಗೆ ಲಾಕ್​ಡೌನ್ ಜಾರಿ ಮಾಡಲಾಗಿದೆ. ಕೊರೋನಾ ಸಂಪೂರ್ಣ ಹತೋಟಿಗೆ ಮತ್ತಷ್ಟು ದಿನ ಲಾಕ್​ಡೌನ್​ ವಿಸ್ತರಣೆ ಅನಿವಾರ್ಯ ಎಂದು ತಜ್ಞರು, ಜಿಲ್ಲಾಧಿಕಾರಿಗಳು ಹಾಗೂ ಸಚಿವರು ಸಲಹೆ ನೀಡಿದ್ದರು. ಆದರೆ, ಲಾಕ್​ಡೌನ್ ವಿಸ್ತರಣೆ ಮಾಡಿದರೆ, ರಾಜ್ಯ ಸರ್ಕಾರ ಬಡವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ವಿರೋಧ ಪಕ್ಷಗಳು ಸೇರಿದಂತೆ ಪಕ್ಷದ ಹಲವು ಸಚಿವರು ಒತ್ತಾಯ ಮಾಡಿದ್ದರು. ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
  Published by:Sushma Chakre
  First published: