ಬಿಜೆಪಿ ಸಂಪ್ರದಾಯಕ್ಕೆ ಇತಿಶ್ರೀ ಹಾಡಿದ ಸಿಎಂ; ದೆಹಲಿಗೆ ತೆರಳದೆ ಸಂಪುಟ ವಿಸ್ತರಿಸಲು ಮುಂದಾದ ಬಿಎಸ್​ವೈ

ಕಾಂಗ್ರೆಸ್​​ನಲ್ಲಾಗಲೀ ಬಿಜೆಪಿಯಲ್ಲಾಗಲಿ ಹೈಕಮಾಂಡ್​ ಭೇಟಿ ಇಲ್ಲದೆ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವುದಿಲ್ಲ. ಹಾಗಿದ್ದರೂ ಬಿಎಸ್​ವೈ ದೆಹಲಿಗೆ ತೆರಳುತ್ತಿಲ್ಲ. ಇದಕ್ಕೆ ಕಾರಣವೇನು ಎನ್ನುವುದನ್ನು ತಿಳಿಯಲು ಈ ಸ್ಟೋರಿ ಓದಿ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • Share this:
ಬೆಂಗಳೂರು (ಜ.27): ಸಚಿವ ಸಂಪುಟ ವಿಸ್ತರಣೆ ಎಂದರೆ ಮೊದಲು ದೆಹಲಿಗೆ ತೆರಳಿ ಹೈಕಮಾಂಡ್​ ನಾಯಕರ ಒಪ್ಪಿಗೆ ಪಡೆದು ನಂತರ ಕಾರ್ಯೋನ್ಮುಖರಾಗುವುದು ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷದಲ್ಲಿ ಈವರೆಗೆ ನಡೆದುಕೊಂಡು ಬಂದ ವಾಡಿಕೆ. ಆದರೆ, ಈ ಬಾರಿ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ದೆಹಲಿಗೆ ತೆರಳದೆ ಹೈಕಮಾಂಡ್​ ನಾಯಕರಿಗೆ ಕೇವಲ ಪಟ್ಟಿ ಕಳಿಸಿ ಇಲ್ಲೇ ಕುಳಿತು ಸಂಪುಟ ವಿಸ್ತರಣೆ ಮಾಡಲು ಮುಂದಾಗಿದ್ದಾರೆ.  

ಕೇಂದ್ರ ಗೃಹ ಸಚಿವ ಅಮಿತ್​ ಶಾ ರಾಜ್ಯಕ್ಕೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆದಿದ್ದರು. ಈಗ ಇದೇ ವಿಚಾರಕ್ಕೆ ಅವರು ಮತ್ತೊಮ್ಮೆ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಹೈಕಮಾಂಡ್​ ಭೇಟಿ ವಿಚಾರವನ್ನು ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್​​ನಲ್ಲಾಗಲೀ ಬಿಜೆಪಿಯಲ್ಲಾಗಲಿ ಹೈಕಮಾಂಡ್​ ಭೇಟಿ ಇಲ್ಲದೆ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವುದಿಲ್ಲ. ಹಾಗಿದ್ದರೂ ಬಿಎಸ್​ವೈ ದೆಹಲಿಗೆ ತೆರಳದೆ ಇರಲು ಪ್ರಮುಖ ಕಾರಣವಿದೆ. ಈಗಾಗಲೇ ಸಚಿವ ಸ್ಥಾನ ಅಲಂಕರಿಸುತ್ತಿರುವವರ ಪಟ್ಟಿಯನ್ನು ಸಿಎಂ ದೆಹಲಿಗೆ ಕಳುಹಿಸಿದ್ದು, ಅಲ್ಲಿ ಒಪ್ಪಿಗೆ ಪಡೆದಿದ್ದಾರೆ ಎನ್ನುತ್ತಿವೆ ಬಿಜೆಪಿ ಮೂಲಗಳು.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಹೊಸ ಸೂತ್ರ; ಡಿಕೆಶಿಗೆ ಪಟ್ಟ ತಪ್ಪಿಸಲು ಖರ್ಗೆ ಹೆಸರು ತೇಲಿಬಿಟ್ಟರಾ ಮಾಜಿ ಸಿಎಂ?

ಅಮಿತ್​ ಶಾ ಜೊತೆ ಚರ್ಚಿಸಿದ ನಂತರ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜೊತೆ ಚರ್ಚೆ ನಡೆಸಿದ್ದರು. ನಂತರ ಅವರ ಮೂಲಕವೇ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸಿದ್ದರು ಎನ್ನಲಾಗಿದೆ. ಇನ್ನು ಪಕ್ಷದಿಂದ ಮೂರು ಜನ ಶಾಸಕರಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿಗೆ ಸ್ಥಾನ ಖಚಿತವಾಗಿದ್ದು, ಇನ್ನೊಂದು ಸ್ಥಾನದ ಬಗ್ಗೆ ಭಾರಿ ಗೊಂದಲವಿದೆ.

ಉಳಿದಿರುವ ಒಂದು ಸ್ಥಾನ ಯಾರಿಗೆ?

ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ 12 ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಈ ಪೈಕಿ 9 ಸಚಿವ ಸ್ಥಾನವನ್ನು ಕಾಂಗ್ರೆಸ್​​-ಜೆಡಿಎಸ್ ಪಕ್ಷದಿಂದ ಬಂದವರಿಗೆ ಹಾಗೂ ಉಳಿದ ಮೂರು ಸ್ಥಾನಗಳನ್ನು ಮೂಲ ಬಿಜೆಪಿ ನಾಯಕರಿಗೆ ನೀಡಲು ಬಿಎಸ್​ವೈ ಸಿದ್ಧತೆ ನಡೆಸಿದ್ದಾರೆ.

ಈಗಾಗಲೇ 11 ಸ್ಥಾನ ಫೈನಲ್​ ಆಗಿದ್ದು, ಒಂದು ಸ್ಥಾನ ಮಾತ್ರ ಬಾಕಿ ಉಳಿದಿದೆ. ಇದಕ್ಕೆ, ದತ್ತಾತ್ರೇಯ ರೇವೂರ್ ಪಾಟೀಲ್, ಎಸ್. ಅಂಗಾರ, ಎಸ್​.ಎ. ರಾಮದಾಸ್, ಮುರುಗೇಶ್ ನಿರಾಣಿ, ಅಪ್ಪಚ್ಚು ರಂಜನ್, ಬಸವನಗೌಡ ಪಾಟೀಲ್ ಯತ್ನಾಳ್, ಪೂರ್ಣಿಮ ಶ್ರೀನಿವಾಸ್, ಜಿ. ರಾಜುಗೌಡ, ವಿ. ಸುನೀಲ್ ಕುಮಾರ್ ಭಾರೀ ಲಾಭಿ ನಡೆಸುತ್ತಿದ್ದಾರೆ. ಆದರೆ, ಈ ಪೈಕಿ ಯಾರೋ ಒಬ್ಬರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದ್ದು, ಆ ಶಾಸಕ ಯಾರು ಎಂಬ ಗುಟ್ಟನ್ನು ಬಿಎಸ್​ವೈ ಶೀಘ್ರದಲ್ಲೇ ಬಹಿರಂಗ ಪಡಿಸಲಿದ್ದಾರೆ ಎನ್ನಲಾಗುತ್ತಿದೆ.
First published: