ನವದೆಹಲಿ, ಜು. 30: ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ದೆಹಲಿ ಆಗಮಿಸಿದ ಬಸವರಾಜ ಬೊಮ್ಮಾಯಿ ಇಂದು ಹೈಕಮಾಂಡ್ ನಾಯಕರನ್ನು ಭೇಟಿ ಆಗಲಿದ್ದಾರೆ. ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ಧನ್ಯವಾದ ಹೇಳಲಿರುವ ಅವರು ಜೊತೆ ಜೊತೆಯಲ್ಲಿ ಸಂಪುಟ ರಚನೆಗೆ ಒಪ್ಪಿಗೆ ಕೇಳಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಲಿರುವ ಬಸವರಾಜ ಬೊಮ್ಮಾಯಿ ಸಂಜೆ 4ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಲಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಭೇಟಿ ವೇಳೆ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡಲ್ಲ. ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನು ಭೇಟಿ ಮಾಡಿದಾಗ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡುತ್ತೇನೆ. ಜೆಪಿ ನಡ್ಡ ಸ್ಥೂಲವಾಗಿ ನೀಡುವ ಮಾರ್ಗದರ್ಶನ ಎದುರು ನೋಡುತ್ತಿದ್ದೇನೆ. ಸಂಪುಟ ರಚನೆ ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಸಿಎಂಗೆ ಸಿಗದ ಭವ್ಯ ಸ್ವಾಗತ!
ಸಿಎಂ ಆಗಿ ಮೊದಲ ಬಾರಿಗೆ ದೆಹಲಿಗೆ ಬಂದಿದ್ದ ಬಸವರಾಜ್ ಬೊಮ್ಮಾಯಿ ಅವರನ್ನು ಸ್ವಾಗತಿಸಲು ದೆಹಲಿಯ ವಿಶೇಷ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ ಜೊತೆ ಕರ್ನಾಟಕ ಭವನದ ನಿವಾಸಿ ಆಯುಕ್ತೆ ಇಂಕೊಂಗ್ಲಾ ಜಮೀರ ಅವರು ಮಾತ್ರ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಕರ್ನಾಟಕ ಭವನದಲ್ಲಿ ಮೂವರು ಐಎಎಸ್ ಹಾಗೂ ಓರ್ವ ಐಎಫ್ಎಸ್ ಇದ್ದಾರೆ. ಆದರೆ ಯಾರೂ ಸಿಎಂ ಸ್ವಾಗತಕ್ಕೆ ತೆರಳಿರಲಿಲ್ಲ. ಸಂಸತ್ ಅಧಿವೇಶನದ ಹಿನ್ನಲೆಯಲ್ಲಿ ಬಹುತೇಕ ಬಿಜೆಪಿ ಸಂಸದರು ದೆಹಲಿಯಲ್ಲೇ ಇದ್ದಾರೆ. ಆದರೆ ಸಿಎಂ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತೆರಳಿದ್ದು ಕಲ್ಬುರ್ಗಿ ಸಂಸದ ಉಮೇಶ್ ಜಾಧವ್ ಮಾತ್ರ.
ಇದನ್ನೂ ಓದಿ: Explained: ಮಕ್ಕಳನ್ನು ದತ್ತು ಪಡೆಯಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮೋದನೆ ಸಾಲುತ್ತೆಯೇ? ಹೊಸಾ ನಿಯಮದಲ್ಲಿ ಏನಿದೆ?
ರಾಜ್ಯದಲ್ಲಿ ಮತ್ತೆ ಕೊವೀಡ್ ಹೆಚ್ಷಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಈಗಾಗಲೇ ಹಲವು ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಗಡಿ ಜಿಲ್ಲೆಗಳ ಡಿಸಿಗಳ ಜೊತೆಗೆ ಮಾತನಾಡಿದ್ದೇನೆ. ಕೊರೊನಾ ಹೆಚ್ಚಾದರೆ ಡಿಸಿ, ಎಸ್ಪಿಗಳೇ ಜವಬ್ದಾರಿ ಎಂದು ಹೇಳಿದ್ದೇನೆ. ರೈಲು ಮಾರ್ಗದಿಂದ ಬರುವವರನ್ನು ಪರೀಕ್ಷೆ ಮಾಡಬೇಕು ಎಂದು ಹೇಳಿದರು. ಎರಡು ವರ್ಷ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರದ ವಿಫಲತೆಗಳ ಬಗ್ಗೆ ಕಾಂಗ್ರೆಸ್ ಮಾಡಿರುವ ಆರೋಪ ಪಟ್ಟಿಯನ್ನು ಸುಳ್ಳಿನ ಕಂತೆ ಎಂದು ಬಣ್ಣಿಸಿದರು.
ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿರುವ ಬಸವರಾಜ ಬೊಮ್ಮಾಯಿ, ಮಧ್ಯಾಹ್ನ 1 ಗಂಟೆಗೆ ರಾಜ್ಯದಿಂದ ಕೇಂದ್ರ ಸಚಿವರಾಗಿರುವವರು ಮತ್ತು ಸಂಸದರನ್ನು ಭೇಟಿಯಾಗಿ ರಾಜ್ಯದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಉಮೇಶ್ ಕತ್ತಿ- ಬೊಮ್ಮಾಯಿ ದೋಸ್ತಿ!
ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕ ಭವನಕ್ಕೆ ಆಗಮಿಸುತ್ತಿದ್ದಂತೆ ಎದುರಿಗೆ ಕಂಡ ಉಮೇಶ್ ಕತ್ತಿ ಅವರನ್ನು 'ಬನ್ನಿ ಉಮೇಶ್' ಎಂದು ಹೇಳಿ ಜೊತೆಯಲ್ಲೇ ಸಿಎಂ ಸೂಟ್ ಗೆ ಕರೆದುಕೊಂಡು ಹೋದರು. ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ್ದ ಉಮೇಶ್ ಕತ್ತಿ, 'ಸಿಎಂ ಬಸವರಾಜ ಬೊಮ್ಮಾಯಿ ನನ್ನನ್ನು ಬಿಟ್ಟು ಸಂಪುಟ ಮಾಡಲ್ಲ' ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ