CET Result: ಸೆ. 20ರಂದು ಸಿಇಟಿ ಫಲಿತಾಂಶ ಪ್ರಕಟ: ಸಚಿವ ಅಶ್ವತ್ಥನಾರಾಯಣ

ರಾಷ್ಟ್ರೀಯ ಶಿಕ್ಷಣ ನೀತಿ ನೆಪದಲ್ಲಿ ಶುಲ್ಕ ಹೆಚ್ಚಳಕ್ಕೆ ಅವಕಾಶವೇ ಇಲ್ಲ. ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ವಿಧಿಸಿ ಕಾಲೇಜು ನಡೆಸುವುದು ಸರಿಯಲ್ಲ, ಗುಣಮಟ್ಟದ ಶಿಕ್ಷಣ ಕೊಡುವುದಷ್ಟೇ ಸರಕಾರದ ಉದ್ದೇಶ

File photo

File photo

  • Share this:
    ಬೆಂಗಳೂರು (ಸೆ. 3): ಇಂಜಿನಿಯರಿಂಗ್​ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳಿಗೆ ನಡೆದ ಸಿಇಟಿ ಪರೀಕ್ಷೆ ಫಲಿತಾಂಶ (CET Result -2021) ಇದೇ  ಸೆಪ್ಟೆಂಬರ್ 20ರಂದು ಶ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (C. N. Ashwath Narayan) ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಕಳೆದ ಆಗಸ್ಟ್​​ ಆಗಸ್ಟ್ 28-29 ಮತ್ತು 30ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ ಪ್ರಕ್ರಿಯೆಯನ್ನು ಯಾವುದೇ ಗೊಂದಲ-ಸಮಸ್ಯೆ ಇಲ್ಲದೆ ಪೂರ್ಣ ಗೊಳಿಸಲಾಗುವುದು. ಸಕಾಲಕ್ಕೆ ಫಲಿತಾಂಶ ನೀಡುವುದೂ ಸೇರಿ ನಿಗದಿತ ವೇಳಾಪಟ್ಟಿಯಂತೆ ಕೌನ್ಸಿಲಿಂಗ್ (CET Counseling)  ಮುಗಿಸಲಾಗುವುದು. ಯಾವುದೇ ಕಾರಣಕ್ಕೂ ಶೈಕ್ಷಣಿಕ ವರ್ಷ ಹಳಿತಪ್ಪಲು ಬಿಡುವುದಿಲ್ಲ ಎಂದರು.

    ಶುಲ್ಕದ ಬಗ್ಗೆ ಮುಂದಿನ ವಾರ ಸಭೆ:

    ಎಂಜಿನಿಯರಿಂಗ್ ಕಾಲೇಜು ಶುಲ್ಕ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ಮುಂದಿನ ವಾರ ಸಭೆ ನಡೆಸಲಾಗುವುದು. ಅದರಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ಅಂಶಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಕ್ರಮ:

    “ರಾಷ್ಟ್ರೀಯ ಶಿಕ್ಷಣ ನೀತಿ ನೆಪದಲ್ಲಿ ಶುಲ್ಕ ಹೆಚ್ಚಳಕ್ಕೆ ಅವಕಾಶವೇ ಇಲ್ಲ. ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ವಿಧಿಸಿ ಕಾಲೇಜು ನಡೆಸುವುದು ಸರಿಯಲ್ಲ, ಗುಣಮಟ್ಟದ ಶಿಕ್ಷಣ ಕೊಡುವುದಷ್ಟೇ ಸರಕಾರದ ಉದ್ದೇಶ. ಈ ಬಗ್ಗೆ ದೂರುಗಳು ಬಂದರೆ ಗಮನ ಹರಿಸಿ ಆಯಾ ಕಾಲೇಜುಗಳ ವಿರುದ್ಧ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

    ವಿದ್ಯಾರ್ಥಿಗಳು ಸರಕಾರೀ ಕಾಲೇಜುಗಳಲ್ಲೇ ದಾಖಲಾಗಬೇಕು. ಅಲ್ಲಿ ಕಡಿಮೆ ಶುಲ್ಕದಲ್ಲಿ ಪದವಿ ನೀಡಲಾಗುವುದು. ಅದರಲ್ಲೂ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಸೌಲಭ್ಯವಿದೆ. ಕೆಲ ಖಾಸಗಿ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿವೆ. ಆ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

    ಪದವಿ ಕಾಲೇಜುಗಳಿಗೆ ಶುಲ್ಕ ನಿಗದಿ ಮಾಡಲು ಸರಕಾರದ ಮಟ್ಟದಲ್ಲಿ ಸಮಿತಿ ಇಲ್ಲ. ಹೀಗಾಗಿ, ಕೆಲ ಕಾಲೇಜುಗಳು ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿವೆ. ಸಮಿತಿ ಇಲ್ಲ ಎಂದ ಮಾತ್ರಕ್ಕೆ ದುಬಾರಿ ಶುಲ್ಕ ವಿಧಿಸುವ ಹಾಗಿಲ್ಲ ಎಂದ ಸಚಿವರು, ಪದವಿ ಕಾಲೇಜುಗಳಿಗೆ ಅಕ್ಟೋಬರ್ 1 ರವರೆಗೂ ದಾಖಲು ಆಗಬಹುದು. ಅದಕ್ಕೆ ಅವಕಾಶ ನೀಡಲಾಗಿದೆ ಎಂದರು.

    ಇದನ್ನು ಓದಿ: ತಾಲಿಬಾನ್ ಸಹಸಂಸ್ಥಾಪಕ ಮುಲ್ಲಾ ಬರದಾರ್​ ನೇತೃತ್ವದಲ್ಲಿ ಅಫ್ಘಾನ್ ಹೊಸ ಸರ್ಕಾರ ರಚನೆ

    ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿಪಕ್ಷಗಳಿಂದ ಅಪಪ್ರಚಾರ



    ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮಾಧ್ಯಮಗಳ ಮೂಲಕ, ವಿವಿಧ ವೇದಿಕೆಗಳಲ್ಲಿ ಉತ್ತರ ನೀಡಲಾಗಿದೆ. ಇದರ ಜತೆಗೆ ಅವರಿಗೆ ವಿಧಾನಮಂಡಲ ಅಧಿವೇಶನದಲ್ಲೂ ಸಮಗ್ರವಾಗಿ ಉತ್ತರ ಕೊಡಲಾಗುವುದು ಎಂದು ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು.

    ಕೇವಲ ರಾಜಕೀಯದ ಉದ್ದೇಶ ಇಟ್ಟುಕೊಂಡು ವಿರೋಧ ಮಾಡುವವರಿಗೆ ಏನೂ ಮಾಡಲಾಗದು. ನೀತಿಯ ಬಗ್ಗೆ ಸಮಾಜದಲ್ಲಿ ಅಪನಂಬಿಕೆ ಮೂಡಿಸಲು ವಿರೋಧ ಪಕ್ಷಗಳು ಹೀಗೆ ಆರೋಪ ಮಾಡುತ್ತಿವೆ. ಇದು ಕೇವಲ ಒಂದು ಒಳ್ಳೆಯ ಕಾರ್ಯಕ್ರಮದ ವಿರುದ್ಧ ಅಪಪ್ರಚಾರ ಮಾಡುವ ಹುನ್ನಾರವಷ್ಟೇ ಎಂದು ದೂರಿದರು.

    ಹೊಸ ಶಿಕ್ಷಣ ನೀತಿ ಪ್ರಸಕ್ತ ವರ್ಷದಿಂದಲೇ ಜಾರಿ

    ಹೊಸ ಶಿಕ್ಷಣ ನೀತಿಯ ಪ್ರಕ್ರಿಯೆಗಳು ಪ್ರಾರಂಭವಾಗಿ 7 ವರ್ಷಗಳೇ ಆಗಿದ್ದು, ಪ್ರಸಕ್ತ ವರ್ಷದಿಂದ ಜಾರಿ ಮಾಡಲಾಗುತ್ತಿದೆ. ಶಿಕ್ಷಣದ ವ್ಯವಸ್ಥೆಯಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಲು ಇದನ್ನು ತರಲಾಗಿದೆ. ಸಾಕಷ್ಟು ಪೂರ್ವಸಿದ್ಧತೆ, ಚರ್ಚೆ, ತಯಾರಿ ಮಾಡಿಕೊಂಡೇ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುತ್ತಿದೆಯೇ ಹೊರತು ಆತುರಾತುರವಾಗಿ ತರುತ್ತಿರುವುದಲ್ಲ.
    Published by:Seema R
    First published: