ರಾಜ್ಯದಲ್ಲಿ ಸಚಿವ ಸಂಪುಟ ರಚನೆಗೂ ಮುನ್ನವೇ ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದಿನ ಸಿಎಂ ಯಡಿಯೂರಪ್ಪ ಮತ್ತು ಮೂವರು ಉಪಮುಖ್ಯಮಂತ್ರಿಗಳಿಂದ ಪ್ರಮುಖ ಸಲಹಾ ಸ್ಥಾನಗಳಿಗೆ ನೇಮಕಗೊಂಡ ಬಿಜೆಪಿ ಶಾಸಕರು ಮತ್ತು ಪರಿಣಿತರ ನೇಮಕಾತಿಯನ್ನು ರದ್ದುಗೊಳಿಸಿದ್ದಾರೆ.
ಬಿಜೆಪಿ ಹೈಕಮಾಂಡ್ 78 ವರ್ಷದ ಹಿರಿಯ ನಾಯಕ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನಿರ್ಧಾರ ಮಾಡಿದ ನಂತರ ಜುಲೈ 26 ರಂದು ಎರಡು ವರ್ಷಗಳ ಕಾಲ ಸಿಎಂ ಆಗಿ ಅಧಿಕಾರ ಪೂರೈಸಿದ ಬಳಿಕ ಬಿಎಸ್ವೈ ರಾಜೀನಾಮೆ ನೀಡಿದ್ದರು. ನಂತರ, ಜುಲೈ 28ರಂದು ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ (ಡಿಪಿಎಆರ್) ಹೊರಡಿಸಿದ ಅಧಿಸೂಚನೆ ಪ್ರಕಾರ, ಹಿಂದಿನ ಸರ್ಕಾರದಲ್ಲಿ ನಿರ್ವಹಿಸಿದ ವಿವಿಧ ಹುದ್ದೆಗಳಿಂದ 19 ಜನರನ್ನು ಬಿಡುಗಡೆ ಮಾಡಲಾಗಿದೆ. ಆಗಸ್ಟ್ 1 ಮತ್ತು ಆಗಸ್ಟ್ 2ರಂದು ಈ ನೇಮಕಾತಿ ರದ್ದು ಆದೇಶಗಳನ್ನು ನೂತನ ಸರ್ಕಾರ ಹೊರಡಿಸಿದೆ.
ಯಡಿಯೂರಪ್ಪನವರು ಜುಲೈ 26 ರಂದು ರಾಜೀನಾಮೆ ನೀಡುವುದರೊಂದಿಗೆ, ಅವರ ಸಚಿವ ಸಂಪುಟ ಸಹ ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ. ಇದರ ಪರಿಣಾಮವಾಗಿ, ಯಡಿಯೂರಪ್ಪನವರ ಅವಧಿಯಲ್ಲಿ ಅವರ ಅಥವಾ ಅವರ ಉಪ ಮುಖ್ಯಮಂತ್ರಿಗಳು ಅಥವಾ ಮಂತ್ರಿಗಳಿಂದ ಯಾವುದೇ ನೇಮಕಾತಿಗಳನ್ನು ಮಾಡಿರುವುದು ಸಹ ಕೊನೆಗೊಳ್ಳುತ್ತದೆ.
ಆಗಸ್ಟ್ 1 ರ ಆದೇಶದ ಪ್ರಕಾರ, ಯಡಿಯೂರಪ್ಪನವರ ಸಲಹೆಗಾರ ಎಂ. ಲಕ್ಷ್ಮೀನಾರಾಯಣ ಮತ್ತು ಶಿಕ್ಷಣ ತಜ್ಞ ಎಂ ಆರ್ ದೊರೆಸ್ವಾಮಿ ಇನ್ನು ಮುಂದೆ ಶಿಕ್ಷಣ ಸುಧಾರಣೆಗಳ ಕುರಿತು ಸರ್ಕಾರದ ಸಲಹೆಗಾರರಾಗಿ ಕಾರ್ಯನಿರ್ವಹಿಸುವುದಿಲ್ಲ. ಹಾಗೆ, ಬೇಲೂರು ಸುದರ್ಶನ್ ಅವರನ್ನು ಮುಖ್ಯಮಂತ್ರಿಯ ಇ-ಆಡಳಿತ ಸಲಹೆಗಾರ ಸ್ಥಾಣದಿಂದ ತೆಗೆದುಹಾಕಲಾಗಿದೆ.
ಇನ್ನು, ನೀತಿ ಮತ್ತು ಕಾರ್ಯತಂತ್ರದ ಕುರಿತು ಮುಖ್ಯಮಂತ್ರಿಯ ಸಲಹೆಗಾರ ಸ್ಟಾರ್ಟಪ್ ಹೂಡಿಕೆದಾರ ಪ್ರಶಾಂತ್ ಪ್ರಕಾಶ್ ಹಾಗೂ ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿದ್ದ ಮಾಜಿ ಎಂಎಲ್ಸಿ ಮೋಹನ್ ಲಿಂಬಿಕಾಯಿ ಅವರ ನೇಮಕಾತಿಯೂ ರದ್ದಾಗಿದೆ.
ಯಡಿಯೂರಪ್ಪನವರ ನಾಲ್ಕು ರಾಜಕೀಯ ಕಾರ್ಯದರ್ಶಿಗಳು - ಎಸ್.ಆರ್. ವಿಶ್ವನಾಥ್, ಎಂಪಿ ರೇಣುಕಾಚಾರ್ಯ, ಡಿಎನ್ ಜೀವರಾಜ್ ಮತ್ತು ಎನ್ ಆರ್ ಸಂತೋಷ್ ನೇಮಕಾತಿಯೂ ರದ್ದಾಗಿದೆ. ಜತೆಗೆ, ನವದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಅವರ ಹುದ್ದೆಯೂ ಹೋಗಿದೆ.
2000-ಬ್ಯಾಚ್ನ ಐಎಎಸ್ ಅಧಿಕಾರಿ ವಿ ಪೊನ್ನುರಾಜ್ ಅವರನ್ನು ಸಿಎಂ ಬೊಮ್ಮಾಯಿ ತಮ್ಮ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ಕೆಲವು ದಿನಗಳ ನಂತರ ಈ ಅಧಿಸೂಚನೆ ಬಂದಿದೆ. ಯಡಿಯೂರಪ್ಪಗೆ ಎಸ್ ಸೆಲ್ವಕುಮಾರ್ ಅವರು ಕಾರ್ಯದರ್ಶಿಯಾಗಿದ್ದು, ಅವರನ್ನೂ ಬೊಮ್ಮಾಯಿ ಬದಲಾಯಿಸಿದರು.
ಇದೇ ರೀತಿ, ಆಗಸ್ಟ್ 2ರ ಆದೇಶದ ಪ್ರಕಾರ, ಮೂವರು ಉಪಮುಖ್ಯಮಂತ್ರಿಗಳಿಂದ ಮಾಡಲಾದ ಎಲ್ಲಾ ಗುತ್ತಿಗೆ ನೇಮಕಾತಿಗಳು ಮತ್ತು ಸಲಹಾ ಹುದ್ದೆಗಳು ರದ್ದುಗೊಂಡಿವೆ. ಮತ್ತು ಸಚಿವರು, ಉಪ ಮುಖ್ಯಮಂತ್ರಿಗಳು ಹಾಗೂ
ಮುಖ್ಯಮಂತ್ರಿಯೊಂದಿಗೆ ಕೆಲಸ ಮಾಡಲು ಡೆಪ್ಯುಟೇಶನ್ ಮೇಲೆ ಬಂದ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನು ತಮ್ಮ ಕರ್ತವ್ಯಗಳಿಂದ ಬಿಡುಗಡೆ ಮಾಡಲಾಗಿದೆ ಹಾಗೂ ಅವರು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಪೋಷಕ ಇಲಾಖೆಗಳಿಗೆ ರಿಪೋರ್ಟ್ ಮಾಡಿಕೊಳ್ಳಲು ನಿರ್ದೇಶಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ