ಇಂದು ಸಚಿವ ಸಂಪುಟ ವಿಸ್ತರಣೆ; ಹೆಚ್​. ನಾಗೇಶ್​ಗೆ ಕೊಕ್, ಮುನಿರತ್ನ ಕೈ ತಪ್ಪಿತಾ ಮಂತ್ರಿಗಿರಿ?

Karnataka Cabinet Expansion | ಈಗಾಗಲೇ ಸಿ.ಪಿ ಯೋಗೇಶ್ವರ್, ಎಸ್. ಅಂಗಾರ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಆರ್ ಶಂಕರ್, ಎಂಟಿಬಿ ನಾಗರಾಜ್ ಅವರಿಗೆ ಕರೆ ಮಾಡಿರುವ ಸಿಎಂ ಯಡಿಯೂರಪ್ಪ ಇಂದಿನ ಪ್ರಮಾಣವಚನ ಕಾರ್ಯಕ್ರಮಕ್ಕೆ ಬರಲು ಸೂಚಿಸಿದ್ದಾರೆ. ಇನ್ನು, ಅಬಕಾರಿ ಸಚಿವ ಹೆಚ್. ನಾಗೇಶ್ ಅವರಿಗೆ ರಾಜೀನಾಮೆ ನೀಡಲು ಸೂಚಿಸಲಾಗಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

  • Share this:
ಬೆಂಗಳೂರು (ಜ. 13): ಇಂದು ಸಂಜೆ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್​ ಆಗಿದೆ. ಆದರೂ ಇನ್ನೂ ಸಂಪುಟ ವಿಸ್ತರಣೆಯ ಕಗ್ಗಂಟು ಬಗೆಹರಿದಿಲ್ಲ. ಸಚಿವಾಕಾಂಕ್ಷಿಗಳ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಪಟ್ಟಿ ಅಂತಿಮವಾಗಿಲ್ಲ. ಈಗಾಗಲೇ ಸಿ.ಪಿ ಯೋಗೇಶ್ವರ್, ಎಸ್. ಅಂಗಾರ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಆರ್ ಶಂಕರ್, ಎಂಟಿಬಿ ನಾಗರಾಜ್ ಅವರಿಗೆ ಕರೆ ಮಾಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದಿನ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸೂಚಿಸಿದ್ದಾರೆ. ಇನ್ನು, ಅಬಕಾರಿ ಸಚಿವ ಹೆಚ್. ನಾಗೇಶ್ ಅವರಿಗೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಸಚಿವರ ಪಟ್ಟಿ ಅಂತಿಮ ಮಾಡಲು ತುಂಬಾ ತಲೆ ಕೆಡಿಸಿಕೊಂಡಿರುವ ಸಿಎಂ ಬಿಎಸ್ ಯಡಿಯೂರಪ್ಪ ನಿನ್ನೆ ರಾತ್ರಿ ಪೂರ್ತಿ ಇತರೆ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಇನ್ನೂ ಸಂಪುಟ ಪಟ್ಟಿ ಅಂತಿಮವಾಗಿಲ್ಲ. ನಿನ್ನೆ ರಾತ್ರಿಯೇ ಪಟ್ಟಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದ ಸಿಎಂ ಯಡಿಯೂರಪ್ಪ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.

ಈಗಾಗಲೇ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟವರು ಮಾತ್ರವಲ್ಲದೆ ಅರವಿಂದ್ ಬೆಲ್ಲದ್, ಚಂದ್ರಪ್ಪ, ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಮಂತ್ರಿಗಿರಿಗೆ ಬೇಡಿಕೆಯಿಟ್ಟಿದ್ದಾರೆ. ಇತ್ತ ಸಚಿವ ಸ್ಥಾನ ಬೇಕೆ ಬೇಕು ಎಂದು ಮುನಿರತ್ನ ಪಟ್ಟು ಹಿಡಿದಿದ್ದಾರೆ. ನಿನ್ನೆ ಮಧ್ಯಾಹ್ನದಿಂದಲೂ ಸಿಎಂ ಬಳಿ ಪಟ್ಟು ಹಿಡಿದು ಕುಳಿತಿರುವ ಮುನಿರತ್ನರನ್ನು ಸಚಿವರ ಪಟ್ಟಿಯಿಂದ ಕೈ ಬಿಡಲಾಗಿದೆ ಎನ್ನಲಾಗುತ್ತಿದೆ. ಇಂದು ಮುನಿರತ್ನ ಅವರನ್ನು ತಮ್ಮ ಮನೆಗೆ ಕರೆಸಿ ಮನವೊಲಿಕೆ ಮಾಡಿರುವ ಸಿಎಂ ಯಡಿಯೂರಪ್ಪ ಮುನಿರತ್ನ ಅವರ ಬದಲಾಗಿ ಸಿಪಿ ಯೋಗೇಶ್ವರ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಖಾಲಿ ಇರುವ 7 ಸಚಿವ ಸ್ಥಾನಗಳು ಭರ್ತಿಯಾಗಿದ್ದು, 7 ಶಾಸಕರನ್ನು ಸಿಎಂ ಆಯ್ಕೆ ಮಾಡಿದ್ದಾರೆ. ಇನ್ನೂ ಮುನಿರತ್ನ ಸೇರಿದಂತೆ ಹಲವರಿಂದ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಸಿಎಂಗೆ ತಲೆ ನೋವು ಹೆಚ್ಚಾಗಿತ್ತು.

ಇದನ್ನೂ ಓದಿ: ಸಿಎಂ ಬಿಎಸ್​ ಯಡಿಯೂರಪ್ಪ ಸಚಿವ ಸಂಪುಟ ಸೇರ್ಪಡೆಯಾಗುವ ನೂತನ ಮಂತ್ರಿಗಳು ಇವರೇ?

ಈಗಾಗಲೇ ಸಿ.ಪಿ ಯೋಗೇಶ್ವರ್, ಎಸ್. ಅಂಗಾರ ಅವರಿಗೆ ಕರೆ ಮಾಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದಿನ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸೂಚಿಸಿದ್ದಾರೆ. ನಿನ್ನೆ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಆರ್ ಶಂಕರ್, ಎಂಟಿಬಿ ನಾಗರಾಜ್ ಅವರಿಗೆ ಕರೆ ಮಾಡಲಾಗಿದೆ.

ಇನ್ನು, ಅಬಕಾರಿ ಸಚಿವ ಹೆಚ್. ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಡುವುದು ಖಚಿತ ಎನ್ನಲಾಗುತ್ತಿದೆ. ಈಗಾಗಲೇ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಹೆಚ್. ನಾಗೇಶ್ ಅವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ನಿನ್ನೆ ತಡರಾತ್ರಿಯವರೆಗೂ ಸಂಪುಟದ ಸಹೋದ್ಯೋಗಿಗಳ ಜೊತೆ ಸಭೆ ನಡೆಸಿದ ಸಿಎಂ ಜೊತೆಗಿನ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಭಾಗಿಯಾಗಿದ್ದರು. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಶಾಸಕ ಮುನಿರತ್ನ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ನಿನ್ನೆ ಮಧ್ಯಾಹ್ನದಿಂದ ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುತ್ತಿರುವ ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಇಂದು ಬೆಳಗ್ಗೆ 10 ಗಂಟೆಗೆ ಬಿಜೆಪಿ‌ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅರುಣ್ ಸಿಂಗ್ ಬಂದ ಬಳಿಕ‌ ರಾಜ್ಯ ನಾಯಕರ ಮತ್ತೊಂದು ಸುತ್ತಿನ ಸಭೆ ಸಾಧ್ಯತೆಯಿದೆ. ಅರುಣ್ ಸಿಂಗ್ ಜೊತೆ ಚರ್ಚೆ ಬಳಿಕವೇ ರಾಜಭವನಕ್ಕೆ ಸಚಿವರ ಪಟ್ಟಿ ರವಾನೆಯಾಗಲಿದೆ ಎನ್ನಲಾಗುತ್ತಿದೆ. ಅರುಣ್ ಸಿಂಗ್ ಬರುವ ಮುನ್ನವೂ ತಮ್ಮ ನಿವಾಸದಲ್ಲಿ ಒಂದು ಸುತ್ತಿನ ಸಭೆ ನಡೆಸಲಿರುವ ಸಿಎಂ ಯಡಿಯೂರಪ್ಪ ಎಷ್ಟು ಸಚಿವರನ್ನು ತೆಗೆಯಬೇಕು, ಯಾವ ಸಚಿವರನ್ನು ತೆಗೆಯಬೇಕು, ಸಂಪುಟ ಸೇರೋರು 7 ಜನರಾ ಅಥವಾ 8 ಜನರಾ? ಎಂಬ ಬಗ್ಗೆ ನಿರ್ಧಾರ ಮಾಡಲಿದ್ದಾರೆ.
Published by:Sushma Chakre
First published: