ವಲಸಿಗರ ಪ್ರಮಾಣವಚನ, ಮೂಲ ಬಿಜೆಪಿಗರ ಅಸಮಾಧಾನ; ಕಮಲ ಪಾಳಯದಲ್ಲಿ ಬಂಡಾಯದ ವಾಸನೆ?

Karnataka Cabinet Expansion: ಇಂದು ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿ ಮಾಡಲಾಗಿದೆ. ಈಗಾಗಲೇ ಇಂದು ಪ್ರಮಾಣವಚನ ಸ್ವೀಕರಿಸುವ ಶಾಸಕರ ಪಟ್ಟಿ ಹೊರಬಿದ್ದಿದೆ. 10 ಮಂದಿ ವಲಸಿಗರು ಮತ್ತು ಮೂವರು ಮೂಲ ಬಿಜೆಪಿಗರು ಇಂದು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

 ಬಿಎಸ್​ ಯಡಿಯೂರಪ್ಪ

ಬಿಎಸ್​ ಯಡಿಯೂರಪ್ಪ

  • Share this:
ಬೆಂಗಳೂರು (ಫೆ. 6): ಕೊನೆಗೂ ಸಚಿವ ಸಂಪುಟ ರಚನೆಯ ಕಸರತ್ತಿಗೆ ಪೂರ್ಣವಿರಾಮವನ್ನಿಡಲು ಸಿಎಂ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 6 ತಿಂಗಳ ಬಳಿಕ ಬಿಎಸ್​ವೈ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಿದ್ದಾರೆ. ಸರ್ಕಾರ ರಚನೆಗೆ ಕಾರಣರಾದ ವಲಸೆ ಬಂದ ಬಿಜೆಪಿಗರ ಒತ್ತಾಯದ ಮೇರೆಗೆ ವಿಧಾನಸಭಾ ಜಂಟಿ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ನಡೆಸಲಾಗುತ್ತಿದೆ. ಆದರೆ, ವಲಸಿಗರನ್ನು ಓಲೈಸುವ ಭರದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿರುವುದು ಯಡಿಯೂರಪ್ಪನವರಿಗೆ ಮತ್ತೊಂದು ತಲೆನೋವಾಗುವ ಸಾಧ್ಯತೆಯಿದೆ.

ರಮೇಶ್ ಜಾರಕಿಹೊಳಿ (ಗೋಕಾಕ್), ಎಸ್.ಟಿ. ಸೋಮಶೇಖರ್ (ಯಶವಂತಪುರ), ಗೋಪಾಲಯ್ಯ (ಮಹಾಲಕ್ಷ್ಮೀಲೇಔಟ್), ಬೈರತಿ ಬಸವರಾಜು (ಕೆ.ಆರ್.ಪುರಂ), ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ), ಬಿ.ಸಿ.ಪಾಟೀಲ್ (ಹಿರೆಕೇರೂರು), ನಾರಾಯಣಗೌಡ (ಕೆ.ಆರ್.ಪೇಟೆ), ಶ್ರೀಮಂತ ಪಾಟೀಲ್ (ಕಾಗವಾಡ), ಶಿವರಾಮ ಹೆಬ್ಬಾರ್ (ಯಲ್ಲಾಪುರ), ಆನಂದಸಿಂಗ್ (ವಿಜಯನಗರ) ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಚುನಾವಣೆಯಲ್ಲಿ ಸೋತಿರುವ ಎಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ: ಉಮೇಶ್ ಕತ್ತಿಗಿಲ್ಲ ಸಚಿವ ಸ್ಥಾನ, ನಾಳೆ 10 ಮಂದಿಯಷ್ಟೇ ಪ್ರಮಾಣವಚನ ಸ್ವೀಕಾರ; ಸಿಎಂ ಬಿಎಸ್​ವೈ ಸ್ಪಷ್ಟನೆ

ತಮಗೆ ಸಚಿವ ಸ್ಥಾನ ಸಿಗುವುದು ಖಾತರಿಯಾಗಿರುವುದರಿಂದ ಬೆಳಗ್ಗೆಯಿಂದಲೇ ವಲಸಿಗ ಬಿಜೆಪಿ ಶಾಸಕರು ಯಡಿಯೂರಪ್ಪನವರ ಮನೆಗೆ ತೆರಳಿ ಧನ್ಯವಾದ ತಿಳಿಸುತ್ತಿದ್ದಾರೆ. ನಿನ್ನೆಯವರೆಗೂ ಮೂಲ ಬಿಜೆಪಿಗರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಯಡಿಯೂರಪ್ಪನವರ ಮನೆಯನ್ನು ಇಂದು ವಲಸಿಗ ಬಿಜೆಪಿಗರು ಆವರಿಸಿಕೊಂಡಿದ್ದಾರೆ. ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಘೋಷಣೆಯಾಗದಿರುವ ಹಿನ್ನೆಲೆಯಲ್ಲಿ ತಮಗೆ ಮಂತ್ರಿಗಿರಿ ನೀಡಿ ಎಂದು ಮನವಿ ಮಾಡಲು ಯಾವೊಬ್ಬ ಶಾಸಕರೂ ಬಾರದಿರುವುದು ಅಚ್ಚರಿಗೆ ಕಾರಣವಾಗಿದೆ.

ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದ ಸಿ. ಪಿ. ಯೋಗೇಶ್ವರ್, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಹೆಸರನ್ನು ಇನ್ನೂ ಘೋಷಣೆ ಮಾಡಿಲ್ಲ. ಈ ಶಾಸಕರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇಂದು ಪ್ರಮಾಣವಚನ ಸ್ವೀಕಾರ ಮಾಡಲಿರುವ ಮೂಲ ಬಿಜೆಪಿಯ ಮೂವರು ಶಾಸಕರು ಯಾರೆಂಬುದನ್ನು ಇನ್ನೂ ಘೋಷಣೆ ಮಾಡಿಲ್ಲ. ಹೀಗಿದ್ದರೂ ಯಾವ ಶಾಸಕರೂ ಯಡಿಯೂರಪ್ಪನವರ ಮನೆ ಕಡೆ ಧಾವಿಸಿಲ್ಲ. ಸಂಪುಟ ವಿಸ್ತರಣೆಯ ಪಟ್ಟಿ ಅಂತಿಮವಾಗುವ ಮುನ್ನ ಪ್ರತಿದಿನ ಯಡಿಯೂರಪ್ಪನವರ ಮನೆಗೆ ಬರುತ್ತಿದ್ದ ಬಿಜೆಪಿ ಶಾಸಕರು ಇಂದು ನಾಪತ್ತೆಯಾಗಿದ್ದಾರೆ. ಇನ್ನೊಂದೆಡೆ ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ನಡೆಸಿದ್ದ ಶಾಸಕ ಮಹೇಶ್ ಕುಮಟಳ್ಳಿಗೆ ಕೂಡ ಸಚಿವ ಸ್ಥಾನ ಕೈತಪ್ಪಿಹೋಗಿದೆ.

ಇದನ್ನೂ ಓದಿ: ಇಂದು ಸಂಪುಟ ವಿಸ್ತರಣೆ: 10 ಮಂದಿ ಪ್ರಮಾಣ ವಚನ; ಮೂಲ ಬಿಜೆಪಿಗರಿಗಿಲ್ಲ ಯಾವುದೇ ಸ್ಥಾನ

ಸಚಿವ ಸ್ಥಾನದಿಂದ ವಂಚಿತರಾಗಿರುವ ಶಾಸಕರು ಸಿಎಂ ಮನೆ ಕಡೆ ಬಂದಿಲ್ಲ. ಈಗಾಗಲೇ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕರು ಸಿಎಂ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಭಾವಿ ಸಚಿವರ ಮನೆಯಲ್ಲಿ ಸಂಭ್ರಮ ನೆಲೆಸಿದ್ದರೆ, ಸಚಿವ ಸ್ಥಾನದಿಂದ ವಂಚಿತರಾಗಿರುವ ಮೂಲ ಬಿಜೆಪಿಗರ ಮನೆಯಲ್ಲಿ ಬೇಸರ ಮನೆಮಾಡಿದೆ.

ಇಂದು ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿ ಮಾಡಲಾಗಿದೆ. ಈಗಾಗಲೇ ಇಂದು ಪ್ರಮಾಣವಚನ ಸ್ವೀಕರಿಸುವ ಶಾಸಕರ ಪಟ್ಟಿ ಹೊರಬಿದ್ದಿದೆ. 10+3 ಫಾರ್ಮುಲಾದಲ್ಲಿ ಸಂಪುಟ ವಿಸ್ತರಣೆಗೆ ಸಿದ್ಧವಾಗಿರುವ ಬಿ.ಎಸ್. ಯಡಿಯೂರಪ್ಪ 10 ಮಂದಿ ವಲಸಿಗರು ಮತ್ತು ಮೂವರು ಮೂಲ ಬಿಜೆಪಿಗರನ್ನು ಇಂದು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ. ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, 1 ಸಾವಿರ ಆಸನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಾಸ್​ ಇದ್ದವರಿಗಷ್ಟೇ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ರಾಜ್ಯಪಾಲ ವಿ.ಆರ್. ವಾಲಾ ಪ್ರಮಾಣವಚನ ಬೋಧಿಸಲಿದ್ದಾರೆ.
First published: