HOME » NEWS » State » KARNATAKA CABINET EXPANSION TAKE PLACE BEFORE THE ASSEMBLY SESSION SAYS BS YEDIYURAPPA RMD

Karnataka Cabinet Expansion: ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ; ಸುಳಿವು ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ

ದೆಹಲಿಯಲ್ಲಿ ಇಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್​ವೈ ಈ ಸೂಚನೆ ನೀಡಿದ್ದಾರೆ.

news18-kannada
Updated:September 19, 2020, 12:11 PM IST
Karnataka Cabinet Expansion: ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ; ಸುಳಿವು ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ
ಬಿಎಸ್​ ಯಡಿಯೂರಪ್ಪ
  • Share this:
ನವದೆಹಲಿ (ಸೆ. 19): ಸಂಪುಟ ವಿಸ್ತರಣೆ, ನೆರೆ ಪರಿಹಾರ ಮೊದಲಾದ ವಿಚಾರಗಳ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ದೆಹಲಿಗೆ ತೆರಳಿದ್ದರು. ಶುಕ್ರವಾರ ಪ್ರಧಾನಿ ನೇರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ಕೂಡ ನಡೆಸಿದ್ದರು. ಈಗ ಬಿಎಸ್​ವೈ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಸೋಮವಾರ ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆಂಬುದು ತಮ್ಮ ಅಪೇಕ್ಷೆಯಾಗಿದೆ ಎಂದು ಅವರು ತಿಳಿಸಿದರು. ದೆಹಲಿಯಲ್ಲಿ ಇಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್​ವೈ, “ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಜೊತೆಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಶುಕ್ರವಾರ ಸಮಾಲೋಚನೆ ನಡೆಸಿದ್ದೇನೆ‌. ಜೆ.ಪಿ. ನಡ್ಡ ಇಂದು ಪ್ರಧಾನಿ ಮೋದಿ ಜೊತೆ ಇದರ ಬಗ್ಗೆ ಚರ್ಚಿಸಿ ಸಂಜೆ ವೇಳೆಗೆ ತಮಗೆ ಸೂಚನೆ ನೀಡುವ ಸಾಧ್ಯತೆ ಇದೆ,”‌ ಎಂದರು.

“ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಎಂಬುದನ್ನು ಹಾಗೂ ಎಷ್ಟು ಜನರನ್ನು ತುಂಬಿಕೊಳ್ಳಬೇಕು ಎಂಬದನ್ನು ಹೈಕಮಾಂಡ್ ನಿರ್ಧರಿಸಲಿದೆ. ದೆಹಲಿ ನಾಯಕರ ಅನುಮತಿ ಮತ್ತು ಸಹಮತಿ ದೊರೆತ ಕೂಡಲೇ ಸಂಪುಟ ವಿಸ್ತರಣೆ ಮಾಡುವುದಾಗಿ,” ಎಂದು ಹೇಳಿದರು.

ದೆಹಲಿ ಭೇಟಿ ಅತ್ಯಂತ ಯಶಸ್ವಿ:

“ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗಿದೆ. ರಾಜ್ಯದ ಪ್ರಸ್ತಾವನೆಗಳಿಗೆ ಪ್ರಧಾನಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಬಹುತೇಕ ಬೇಡಿಕೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಹಸಿರು ನಿಶಾನೆ ದೊರೆಯಲಿದೆ ಎಂಬ ವಿಶ್ವಾಸ ತಮ್ಮಲ್ಲಿದೆ,” ಎಂದು ಹೇಳಿದರು.

“ರಾಜ್ಯದ ವಿವಿಧ ಯೋಜನಗೆಳ ಕುರಿತು ಅನುಮೋದನೆ ಹಾಗೂ ಮಂಜೂರಾತಿಗಾಗಿ ಕೇಂದ್ರದ ಹಲವು ಸಚಿವರನ್ನೂ ಕೂಡಾ ಖುದ್ದು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಎಲ್ಲರೂ ಕೂಡಾ ರಾಜ್ಯದ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ದೆಹಲಿ ಭೇಟಿ ಅತ್ಯಂತ ಯಶಸ್ವಿಯಾಗಿದೆ,” ಎಂದು ಯಡಿಯೂರಪ್ಪ ಬಣ್ಣಿಸಿದರು.
Published by: Rajesh Duggumane
First published: September 19, 2020, 10:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories