ಬಿಎಸ್​ವೈ ಸಂಪುಟ ಸಂಕಟ; ಮಂತ್ರಿ ಮಂಡಲ ವಿಸ್ತರಣೆ ಬೆನ್ನಿಗೆ ಕಮಲ ಪಾಳಯದಲ್ಲಿ ಶುರುವಾಯ್ತು ಲಾಬಿ ರಾಜಕಾರಣ

ಯಡಿಯೂರಪ್ಪ ಅವರ ಸೂತ್ರದಂತೆ ಸಂಪುಟ ವಿಸ್ತರಣೆಯಾದರೆ ಅತ್ತ ವಲಸಿಗರು ಇತ್ತ ಮೂಲ ಬಿಜೆಪಿಗರು ಸೇರಿದಂತೆ ಎರಡೂ ಬಣಗಳೂ ದಂಗೆ ಏಳುವುದು ಶತಾಯಗತಾಯ ಗ್ಯಾರಂಟಿ ಎನ್ನಲಾಗುತ್ತಿದೆ. ಒಟ್ಟಾರೆ ಈ ಸಂಪುಟ ಬಿಎಸ್​ವೈ ಪಾಲಿಗೆ ಕಂಟಕವಾದರೂ ಅಚ್ಚರಿ ಇಲ್ಲ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • Share this:
ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿಬಂದಿದೆ. ಉಪ ಚುನಾವಣೆ ಫಲಿತಾಂಶದ ಮರು ದಿನವೇ ಸಂಪುಟ ವಿಸ್ತರಣೆ ಮಾಡಿ ಗೆದ್ದು ಬರುವ ಎಲ್ಲಾ ಅನರ್ಹ ಶಾಸಕರನ್ನೂ ಸಚಿವರನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎರಡು ತಿಂಗಳ ನಂತರ ಕೊನೆಗೂ ಸಂಪುಟ ವಿಸ್ತರಣೆ ಮಾಡುವ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.

12 ಶಾಸಕರಿಗೆ ಸಚಿವ ಸ್ಥಾನ ನೀಡಲು ಉದ್ದೇಶಿಸಿರುವ ಬಿಎಸ್​ವೈ 9-3 ಸೂತ್ರಕ್ಕೆ ಮೊರೆ ಹೋಗಿದ್ದಾರೆ. 9 ಜನ ವಲಸೆ/ಅರ್ಹ ಶಾಸಕರಿಗೆ ಹಾಗೂ 3 ಜನ ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ. ಬಿಎಸ್​ವೈ ಸಿದ್ದಪಡಿಸಿರುವ ಪಟ್ಟಿಗೆ ಈಗಾಗಲೇ ಹೈಕಮಾಂಡ್ ನಾಯಕರು ಮುದ್ರೆ ಒತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಇನ್ನೆರಡು ದಿನದಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತ.

ರಾಜ್ಯ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಸಚಿವ ಸ್ಥಾನ ಆಕಾಂಕ್ಷಿಗಳ ಲಾಬಿಯೂ ಕಮಲ ಪಾಳಯದಲ್ಲಿ ಜೋರಾಗಿಯೇ ಇದೆ. ಅರ್ಹ/ವಲಸೆ ಶಾಸಕರ ಲಾಬಿ ಒಂದು ರೀತಿಯದ್ದಾದರೆ. ಮೂಲ ಬಿಜೆಪಿಗರಿಗೆ ಕೇವಲ 3 ಸ್ಥಾನ ಮಾತ್ರ ಮೀಸಲಿಟ್ಟಿದ್ದು ಈ ಕಡೆಯಿಂದ ಮತ್ತೊಂದು ರೀತಿಯ ಲಾಬಿ ಶುರುವಾಗಿದೆ. ಎಲ್ಲರೂ ಲಾಬಿ ರಾಜಕಾರಣಕ್ಕೆ ಮುಂದಾಗಿರುವುದು ಸಿಎಂ ಬಿಎಸ್​ವೈಗೆ ಸಂಕಟ ಸೃಷ್ಟಿ ಮಾಡುವ ಎಲ್ಲಾ ಲಕ್ಷಣಗಳನ್ನೂ ಮುಂದಿಟ್ಟಿವೆ.

3 ಸ್ಥಾನಕ್ಕೆ ಬಿಜೆಪಿ ಆಕಾಂಕ್ಷಿಗಳ ಸಂಖ್ಯೆ 30:

9-3 ಸೂತ್ರಕ್ಕೆ ಮುಂದಾಗಿರುವ ಬಿ.ಎಸ್. ಯಡಿಯೂರಪ್ಪ ಮೂಲ ಬಿಜೆಪಿ ಶಾಸಕರಿಗೆ ಕೇವಲ ಮೂರು ಸಚಿವ ಸ್ಥಾನಗಳನ್ನು ಮಾತ್ರ ಮೀಸಲಿಟ್ಟಿದ್ದಾರೆ. ಆದರೆ, ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಮಾತ್ರ ಪಕ್ಷದಲ್ಲಿ ಸುಮಾರು 30ರಷ್ಟಿದೆ ಎನ್ನಲಾಗುತ್ತಿದೆ.

ಈ ಮೂರರ ಪೈಕಿ ಎರಡು ಸ್ಥಾನ ಯಾರಿಗೆ ಎಂಬುದನ್ನು ಬಿಎಸ್​ವೈ ಈಗಾಗಲೇ ತೀರ್ಮಾನಿಸಿದ್ದಾರೆ. ಉಳಿದ ಒಂದು ಸ್ಥಾನಕ್ಕಾಗಿ ಹಿರಿಯ ಶಾಸಕರಾದ ದತ್ತಾತ್ರೇಯ ರೇವೂರ್ ಪಾಟೀಲ್, ಎಸ್. ಅಂಗಾರ, ಎಸ್.ಎ. ರಾಮದಾಸ್, ಮುರುಗೇಶ್ ನಿರಾಣಿ, ಅಪ್ಪಚ್ಚು ರಂಜನ್, ಬಸವನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ರೇಣುಕಾಚಾರ್ಯ ಪೂರ್ಣಿಮ ಶ್ರೀನಿವಾಸ್, ಜಿ. ರಾಜುಗೌಡ, ವಿ. ಸುನೀಲ್ ಕುಮಾರ್ ಸೇರಿದಂತೆ ಅನೇಕರು ಲಾಬಿ ನಡೆಸುತ್ತಿದ್ದಾರೆ.

ಇನ್ನೂ ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕ ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿರುಗವ ಉಮೇಶ್ ಕತ್ತಿ ಸಹ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದು, ಸ್ವತಃ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಮೂಲಕ ಬಿಎಸ್​ವೈ ಮೇಲೆ ಒತ್ತಡ ಹೇರಲು ಮುಂದಾಗಿರುವುದು ಯಡಿಯೂರಪ್ಪನವರಿಗೆ ನುಂಗಲಾರದ ತುತ್ತಾಗಿ ಪಡಿಣಮಿಸಿದೆ ಎನ್ನಲಾಗುತ್ತಿದೆ.

ಅರ್ಹರ ಕ್ಯಾಂಪ್​ನಲ್ಲೂ ತಳಮಳ:

ಕಳೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 12 ಅನರ್ಹ ಶಾಸಕರು ಗೆಲುವು ಸಾಧಿಸಿದ್ದಾರೆ. ಅಲ್ಲದೆ, ರಾಣಿಬೆನ್ನೂರು ಕ್ಷೇತ್ರದ ಆರ್. ಶಂಕರ್ ತಮ್ಮ ಶಾಸಕ ಸ್ಥಾನವನ್ನೂ ಬಿಜೆಪಿಗಾಗಿ ಬಿಟ್ಟುಕೊಟ್ಟಿದ್ದರು. ಇನ್ನೂ ಹುಣಸೂರಿನಲ್ಲಿ ಸೋಲುಂಡಿದ್ದ ಹೆಚ್. ವಿಶ್ವನಾಥ್ ಹಾಗೂ ಹೊಸಕೋಟೆಯಲ್ಲಿ ಸೋಲುಂಡಿದ್ದ ಎಂಟಿಬಿ ನಾಗರಾಜ್ ಅವರೂ ಸಹ ಸಚಿವ ಸ್ಥಾನದ ಆಕಾಂಕ್ಷಿಗಳು.

ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿರ್ಮಾಣವಾಗಲು ಈ ಎಲ್ಲಾ ಅರ್ಹ/ವಲಸೆ ಶಾಸಕರ ಪಾತ್ರ ಮಹತ್ವವಾದದ್ದು. ಅಲ್ಲದೆ, ಆರಂಭದಲ್ಲಿ ಬಿಜೆಪಿ ಎಲ್ಲರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿತ್ತು. ಇದೇ ಕಾರಣಕ್ಕೆ ಎಲ್ಲರೂ ಕಾಗ್ರೆಸ್-ಜೆಡಿಎಸ್​ಗೆ ಕೈಕೊಟ್ಟು ಬಿಜೆಪಿ ಪಾಲಾಗಿದ್ದರು. ಆದರೆ, ಇದೀಗ ಬಿಎಸ್​ವೈ ವಲಸಿಗರಿಗೆ ಕೇವಲ 9 ಸ್ಥಾನಗಳನ್ನು ಮಾತ್ರ ಮೀಸಲಿಟ್ಟಿದ್ದಾರೆ. ಇದು ವಲಸಿಗರಲ್ಲೂ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಲಸಿಗರಿಗೆ ಮೀಸಲಿಟ್ಟಿರುವ 9 ಸ್ಥಾನಗಳ ಪೈಕಿ ಯಾರ್ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ತೀರ್ಮಾನಿಸುವ ಹೊಣೆ ಇದೀಗ ವಲಸಿಗರ ಕ್ಯಾಂಪ್ ನಾಯಕರಾದ ರಮೇಶ್ ಜಾರಕಿಹೊಳಿ ಹೆಗಲ ಮೇಲಿದೆ. ಸಚಿವ ಸ್ಥಾನ 9 ಆಕಾಂಕ್ಷಿಗಳು 15 ಹೀಗಾಗಿ ಯಾರಿಗೆ ಸಚಿವ ಸ್ಥಾನ ಕೈತಪ್ಪಿದರೂ ಬಿಜೆಪಿ ಪಕ್ಷಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

ಸಂಪುಟ ವಿಸ್ತರಣೆಗೆ ಚಾಲ್ತಿ ನೀಡಿದರೆ ಈ ಎಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಸಿಎಂ ಯಡಿಯೂರಪ್ಪ ಅವರಿಗೂ ಗೊತ್ತು. ಇದೇ ಕಾರಣಕ್ಕೆ ಅವರು ಇಷ್ಟು ದಿನ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಲೇ ಬಂದಿದ್ದರು. ಆದರೆ, ಇದೀಗ ಯಡಿಯೂರಪ್ಪ ಅವರ ಸೂತ್ರದಂತೆ ಸಂಪುಟ ವಿಸ್ತರಣೆಯಾದರೆ ಅತ್ತ ವಲಸಿಗರು ಇತ್ತ ಮೂಲ ಬಿಜೆಪಿಗರು ಸೇರಿದಂತೆ ಎರಡೂ ಬಣಗಳೂ ದಂಗೆ ಏಳುವುದು ಶತಾಯಗತಾಯ ಗ್ಯಾರಂಟಿ ಎನ್ನಲಾಗುತ್ತಿದೆ. ಒಟ್ಟಾರೆ ಈ ಸಂಪುಟ ಬಿಎಸ್​ವೈ ಪಾಲಿಗೆ ಕಂಟಕವಾದರೂ ಅಚ್ಚರಿ ಇಲ್ಲ.

ಇದನ್ನೂ ಓದಿ : ಪಕ್ಷದ ನಾಯಕರು ಕೇಳಿದರೆ ಖುಷಿಯಿಂದ ರಾಜೀನಾಮೆ ನೀಡುತ್ತೇನೆ; ಡಿಸಿಎಂ ಗೋವಿಂದ ಕಾರಜೋಳ
First published: