ಜಾರ್ಜ್ ಬಳಿ ಇರುವ ಖಾತೆ ಮೇಲೆ ದೇಶಪಾಂಡೆ ಕಣ್ಣು; ಆದ್ರೆ ಸಂಪುಟ ವಿಸ್ತರಣೆಯ ದಿನ ಹೋಯ್ತು ಮುಂದಕ್ಕೆ


Updated:September 14, 2018, 12:42 PM IST
ಜಾರ್ಜ್ ಬಳಿ ಇರುವ ಖಾತೆ ಮೇಲೆ ದೇಶಪಾಂಡೆ ಕಣ್ಣು; ಆದ್ರೆ ಸಂಪುಟ ವಿಸ್ತರಣೆಯ ದಿನ ಹೋಯ್ತು ಮುಂದಕ್ಕೆ

Updated: September 14, 2018, 12:42 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಸೆ. 14): ಸಂಪುಟ ರಚನೆಯಾಗಲೀ, ವಿಸ್ತರಣೆಯಾಗಲೀ ಯಾವುದೇ ಸರಕಾರಕ್ಕಾದರೂ ತಲೆನೋವಿನ ಸಂಗತಿಯೇ ಸರಿ. ಅದರಲ್ಲೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರಕ್ಕೆ ಇದೊಂದು ರೀತಿ ಹೊಸ ಸಮಸ್ಯೆಯನ್ನ ಮೈಮೇಲೆ ಎಳೆದುಕೊಂಡಂತೆ. ಸರಕಾರದಲ್ಲಿ ಸಚಿವ ಸ್ಥಾನ ಸಿಗದವರ ಅತೃಪ್ತಿ ಒಂದೆಡೆಯಾದರೆ, ಇದ್ದ ಖಾತೆ ಬಗ್ಗೆ ತೃಪ್ತಿ ಇಲ್ಲದವರೂ ಇನ್ನೊಂದೆಡೆ ಇದ್ದಾರೆ. ಇದರ ಜೊತೆಗೆ ಸಂಪುಟದಲ್ಲಿ ಸ್ಥಾನ ಸಿಗದಿದ್ದವರು ಪಕ್ಷವನ್ನೇ ತೊರೆಯುತ್ತೇವೆಂದು ಘಂಟಾಘೋಷವಾಗಿ ಹೇಳುತ್ತಾ ಬರುತ್ತಿದ್ದಾರೆ. ಇದೆಲ್ಲವನ್ನೂ ಸಂಬಾಳಿಸುವುದು ಸಮ್ಮಿಶ್ರ ಸರಕಾರಕ್ಕೆ ದೊಡ್ಡ ತಲೆನೋವಾಗಿದೆ. ಈಗಂತೂ ಬೆಳಗಾವಿ ರಾಜಕೀಯ ಬಂಡಾಯವು ಸರಕಾರದ ಅಸ್ತಿತ್ವವನ್ನೇ ಅಲುಗಾಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮೂರನೇ ವಾರದಲ್ಲಿ ನಿಗದಿಯಾಗಿದ್ದ ಸಂಪುಟ ವಿಸ್ತರಣೆಯ ದಿನವನ್ನು ಇನ್ನೊಂದು ತಿಂಗಳು ಮುಂದಕ್ಕೆ ಹಾಕಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಪಿತೃಪಕ್ಷದ ನಂತರ, ಅಕ್ಟೋಬರ್​ನಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಲಿಷ್ಠ ನಾಯಕರ ಕಣ್ಣು ಪ್ರಬಲ ಖಾತೆಗಳ ಮೇಲೆ:

ಸಂಪುಟ ವಿಸ್ತರಣೆ ವೇಳೆ ತಮ್ಮ ನೆಚ್ಚಿನ ಹಾಗೂ ಮಹತ್ವದ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಹಲವು ಪ್ರಮುಖ ಮುಖಂಡರಿಗೆ ಸಂಪುಟ ವಿಸ್ತರಣೆಯ ದಿನಾಂಕ ಮುಂದೂಡಿಕೆಯಾಗಿರುವುದು ಹತಾಶೆ ತಂದಿದೆ. ಹಿಂದಿನ ಸರಕಾರದಲ್ಲಿ ಬೃಹತ್ ಕೈಗಾರಿಕೆ ಖಾತೆ ಹೊಂದಿದ್ದ ಆರ್.ವಿ. ದೇಶಪಾಂಡೆ ಅವರು ಈ ಬಾರಿಯೂ ಅದೇ ಖಾತೆಯನ್ನು ಮರಳಿ ಪಡೆಯಬಯಸಿದ್ದರು. ಅದಕ್ಕಾಗಿ ಅವರು ಸಕಲ ರೀತಿಯಲ್ಲಿ ಪ್ಲಾನ್ ಕೂಡ ಮಾಡಿದ್ದರು. ಬೃಹತ್ ಕೈಗಾರಿಕೆ ಖಾತೆ ಹೊಂದಿರುವ ಕೆ.ಜೆ. ಜಾರ್ಜ್ ಅವರಿಗೆ ಕಂದಾಯ ಖಾತೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಗಳ ಮೇಲೆ ಕಣ್ಣಿದೆ. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಂದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕಿತ್ತುಕೊಳ್ಳಲು ಜಾರ್ಜ್ ಮುಂದಾಗಿದ್ದಾರೆ. ಜಾರ್ಜ್, ದೇಶಪಾಂಡೆ ಸೇರಿದಂತೆ ಕೆಲ ಸಚಿವರು ಪರಸ್ಪರ ಖಾತೆ ಬದಲಾವಣೆಗೆ ಒಳ ಒಪ್ಪಂದ ಕೂಡ ಮಾಡಿಕೊಂಡಿದ್ದರು.

ಸಿಎಂ ಕುಮಾರಸ್ವಾಮಿ ಅವರ ಬಳಿ ಇರುವ ಇಂಧನ ಖಾತೆಯ ಮೇಲೆ ಕೆಲ ಹಿರಿಯ ಸಚಿವರು ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯಗೆ ಸೋಲುಣಿಸಿದ್ದ ಜಿ.ಟಿ. ದೇವೇಗೌಡರು ಈಗಲೂ ಉನ್ನತ ಶಿಕ್ಷಣ ಖಾತೆ ತೊರೆದು ಬೇರೆ ಖಾತೆ ಪಡೆಯಲು ಪ್ರಯತ್ನ ನಡೆಸುತ್ತಲೇ ಇದ್ದಾರೆ.

ಇವರೆಲ್ಲರಿಗೂ ಈಗ ಸಂಪುಟ ವಿಸ್ತರಣೆಯ ದಿನಾಂಕ ಮುಂದೂಡಿರುವುದು ಒಳಗಿಂದೊಳಗೆ ಹತಾಶೆ ತಂದಿದೆ.
Loading...

ಇವರಿಗೆ ಬೇಕು, ಅವರಿಗೆ ಬೇಡ….
ಇನ್ನು, ಇಂಥ ಖಾತೆಗಳು ತಮಗೆ ಬೇಕು, ಇಂಥವರಿಗೆ ಸಚಿವ ಸ್ಥಾನ ಬೇಕು ಎಂಬ ಬೇಡಿಕೆ ಒಂದೆಡೆಯಾದರೆ, ಇಂಥವರಿಗೆ ಸಚಿವ ಸ್ಥಾನ ಬೇಡ ಎಂದು ಅಡ್ಡಗಾಲಾಕುತ್ತಿರುವವರೂ ಇನ್ನೊಂದೆಡೆ ಇದ್ದಾರೆ. ಬಳ್ಳಾರಿಯಲ್ಲಿ ಆರು ಕಾಂಗ್ರೆಸ್ ಶಾಸಕರಿದ್ದು, ಒಬ್ಬರಿಗಾದರೂ ಸಚಿವ ಸ್ಥಾನ ಕೊಡಬೇಕೆಂಬ ಪ್ರಬಲ ಬೇಡಿಕೆ ವ್ಯಕ್ತವಾಗಿದೆ. ಬಳ್ಳಾರಿಯ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರು ಅನಗತ್ಯವಾಗಿ ತಲೆತೂರಿಸುತ್ತಿದ್ದಾರೆಂಬ ಸುದ್ದಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಮಹತ್ವ ಪಡೆದುಕೊಂಡಿದೆ. ಬಳ್ಳಾರಿ ಜಿಲ್ಲೆಯ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರು ಇಂದು ಖುದ್ದಾಗಿ ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿ ಚರ್ಚೆ ಕೂಡ ನಡೆಸಿದರು. ಅದಾದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಬಳ್ಳಾರಿ ಒಬ್ಬ ಶಾಸಕರಿಗೆ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಕೊಡಬೇಕೆಂದು ಆಗ್ರಹಿಸಿದರು.

ಬಳ್ಳಾರಿ ಶಾಸಕರಿಗೆ ಮಂತ್ರಿಗಿರಿ ಕೊಡದೇ ಇರುವುದಕ್ಕೂ ಕಾರಣಗಳಿವೆ. ಬಿ. ನಾಗೇಂದ್ರ, ಆನಂದ್ ಸಿಂಗ್ ವಿರುದ್ಧ ಗಣಿ ಪ್ರಕರಣಗಳು ಬಾಕಿ ಇವೆ. ಪಿ.ಟಿ. ಪರಮೇಶ್ವರ್ ನಾಯ್ಕ್ ವಿರುದ್ಧವೂ ಆರೋಪದ ಕಳಂಕವಿದೆ. ಹಾಗೆಯೇ, ಸಂಡೂರು ಶಾಸಕ ತುಕಾರಾಮ್ ಅವರ ಕಾಲೆಳೆಯಲು ಭೀಮಾನಾಯ್ಕ್ ಅಣಿಯಾಗಿ ನಿಂತಿದ್ದಾರೆ. ಇತ್ತ, ಭೀಮಾ ನಾಯ್ಕ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸ್ವತಃ ಸಿಎಂ ಕುಮಾರಸ್ವಾಮಿ ಅವರಿಗೆಯೇ ಇಷ್ಟವಿಲ್ಲ. ಹೀಗಾಗಿ, ಬೆಳಗಾವಿಯಂತೆ, ಬಳ್ಳಾರಿ ಶಾಸಕರ ಸಂಪುಟ ಸೇರ್ಪಡೆ ವಿಚಾರವೂ ಕಾಂಗ್ರೆಸ್ ಪಾಲಿಗೆ ತಲೆನೋವಾಗಿದೆ.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...