ಬೆಂಗಳೂರು (ನ.10): ಆರ್ಆರ್ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ನೆನೆಗುದಿಗೆ ಬಿದ್ದಿದ್ದ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ. ಚುನಾವಣಾ ಗೆಲುವಿನ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, , ಸಚಿವ ಸಂಪುಟ ವಿಸ್ತರಣೆ ದೊಡ್ಡ ಪ್ರಮಾಣದಲ್ಲಿ ಮಾಡಲು ಯೋಚಿಸಿದ್ದೇನೆ. ಕೆಲವರನ್ನು ಬಿಡಬೇಕು, ಇನ್ನು ಕೆಲವರನ್ನು ಸೇರಿಸಿಬೇಕು ಎಂದು ಯೋಚಿಸುತ್ತಿದ್ದೇನೆ. ಈ ಕುರಿತು ನಾಳೆ ಅಥವಾ ನಾಡಿದ್ದು ದೂರವಾಣಿ ಮೂಲಕ ಪ್ರಧಾನಿ, ಅಮಿತ್ ಷಾ, ನಡ್ಡಾ ಅವರನ್ನು ಸಂಪರ್ಕಿಸಲಾಗುವುದು. ಬಳಿಕ ಹೈಕಮಾಂಡ್ ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಇದೇ ವೇಳೆ ಚುನಾವಣಾ ಗೆಲುವಿಗೆ ಕಾರಣರಾದ ಎರಡು ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಅಭಿನಂದನೆ ತಿಳಿಸಿದರು. ಅದರಲ್ಲಿಯೂ ಶಿರಾದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಗೆಲುವಿನ ನಗೆ ಬೀರುವುದು ಇನ್ನಷ್ಟು ಖುಷಿ ನೀಡಿದೆ ಎಂದರು.
ಈ ಚುನಾವಣೆ ವಿಜಯ ಜನತೆಗೆ ಸೇರಿದ ವಜಯವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಜನತೆ ಸರ್ಕಾರಕ್ಕೆ ಇರುವ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಜನರ ಭಾವನೆ ಸ್ಪಂದಿರುವುದು ಮುಂದಿನ ದಿಕ್ಸೂಚಿಯಾಗಿದೆ. ಇನ್ನೆರಡು ವರ್ಷ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಪೂರೈಸಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.
ಕೊಟ್ಟ ಮಾತಿನಂತೆ ನಡೆವೆ:
ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹಲವಾರು ಭರವಸೆಗಳನ್ನು ನೀಡಿದ್ದೇನೆ. ಅದರ ಪ್ರಕಾರವೇ ಅವುಗಳನ್ನು ಈಡೇರಿಸಲಾಗುವುದು. ಆರ್ ಆರ್ ನಗರ ಭಾರೀ ಅಂತರದಲ್ಲಿ ಗೆಲುವು ಸಾಧಿಸಲಾಗಿದೆ. ಆರ್ ಆರ್ ನಗರ ಗೆಲುವು ಅತಿ ದೊಡ್ಡ ಗೆಲುವು. ಇದು ದೇಶದಲ್ಲಿ ಅತಿ ದೊಡ್ಡಗೆಲುವು. ನಮ್ಮ ಅಭ್ಯರ್ಥಿ 57,936 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಾಕಿ ಇರುವ ಮೂರು ಉಪ ಚುನಾವಣೆಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರು ಎಂಬ ಕುರಿತು ದೆಹಲಿ ಭೇಟಿ ಬಳಿಕ ವರದಿ ತರಿಸಿಕೊಂಡು ನಿರ್ಧರಿಸಲಾಗುವುದು ಎಂದರು.
ಮೋದಿ ಪರಿಶ್ರಮದ ಗೆಲುವು:
ಬಿಹಾರ ಚುನಾವಣೆಯಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿ ಪಕ್ಷಕ್ಕೆ ಫಲಿತಾಂಶ ಬಂದಿದೆ. ಎನ್ ಡಿ ಎ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರಮೋದಿ ಅವರ ಪರಿಶ್ರಮದಿಂದ ಗೆಲುವಾಗಿದೆ. ಮೋದಿ, ನಡ್ಡಾ, ಅಮಿತ್ ಷಾ, ನಳಿನ್ ಕುಮಾರ್‌ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು.
ವಿಪಕ್ಷಗಳ ವಾಗ್ದಾಳಿಗೆ ಮೌನ
ಆಡಳಿತ ಪಕ್ಷದ ವಿರುದ್ಧ ಸಿದ್ದರಾಮಯ್ಯ, ಪ್ರತಿಪಕ್ಷಗಳ ವಾಗ್ದಾಳಿ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದ ಅವರು, ಸಿದ್ದರಾಮಯ್ಯ ಅವರಿಗೆ ನಾನ್ಯಾಕೆ ಉತ್ತರ ಕೊಡಲಿ ಎಂದು ಪ್ರಶ್ನಿಸಿದರು. ಯಾವಾಗಲೂ ಸಾಧನೆ ಮಾತಾಡಬೇಕು. ಈ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಜನರೇ ಉತ್ತರ ನೀಡಿದ್ದಾರೆ. ಇನ್ನು ಮುಂದಾದ್ರೂ ಸಿದ್ದರಾಮಯ್ಯ, ಪ್ರತಿಪಕ್ಷಗಳು ವಿಪಕ್ಷ ಸ್ಥಾನದಲ್ಲಿದ್ದು ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು.
ವಿಜಯೇಂದ್ರ ಸ್ಪರ್ಧಿಸಲ್ಲ
ಕೆಆರ್ಪೇಟೆ ಬಳಿಕ ಶಿರಾದಲ್ಲಿ ಬಿಜೆಪಿ ಖಾತೆ ತೆರೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿವೈ ವಿಜಯೇಂದ್ರ, ಮುಂಬರುವ ಬಸವಕಲ್ಯಾಣ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಹೇಳಿಕೆಯನ್ನು ಸಿಎಂ ತಳ್ಳಿ ಹಾಕಿದರು. ಬಿ ವೈ ವಿಜಯೇಂದ್ರ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಈ ಬಗ್ಗೆ ಈಗಾಗಲೇ ನಾನು ವಿಜಯೇಂದ್ರ ಸ್ಪಷ್ಪಪಡಿಸಿದ್ದಾರೆ. ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ನಾಯಕರು ನಿರ್ಧರಿಸಿದರೇ ಯೋಚಿಸಲಾಗುವುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ