ಬೆಂಗಳೂರು (ಫೆ. 6): ಸಚಿವ ಸ್ಥಾನ ನೀಡಲೇಬೇಕೆಂದು ಸಿಎಂ ಎದುರು ಪಟ್ಟು ಹಿಡಿದಿದ್ದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ಬೇಸರಗೊಂಡಿರುವ ಕುಮಟಳ್ಳಿ, ಪಕ್ಷದ ನಿರ್ಧಾರದಿಂದ ಬೇಸರವವಾಗಿದೆ. ಆದರೆ, ಆ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.
ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡದಿದ್ದರೆ ಯಡಿಯೂರಪ್ಪ ನನಗೆ ನಂಬಿಕೆ ದ್ರೋಹ ಮಾಡಿದಂತೆ. ಯಡಿಯೂರಪ್ಪ ಪ್ರಾಣ ಬೇಕಾದರೂ ಬಿಟ್ಟಾರು ಆದರೆ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದು ವೀರಾವೇಶದಿಂದ ಹೇಳಿಕೆ ನೀಡಿದ್ದ ಮಹೇಶ್ ಕುಮಟಳ್ಳಿ ಬಳಿಕ ಸ್ವಲ್ಪ ಮೆತ್ತಗಾಗಿದ್ದರು. ನನಗೆ ಮಂತ್ರಿಗಿರಿ ಕೊಡದಿದ್ದರೂ ಪರವಾಗಿಲ್ಲ ಆದರೆ, ಎಚ್. ವಿಶ್ವನಾಥ್ ಅವರನ್ನು ಮಂತ್ರಿ ಮಾಡಿ ಎಂದು ಕುಮಟಳ್ಳಿ ಮನವಿ ಮಾಡಿದ್ದರು. ಹಾಗೇ, ನನಗೆ ಕ್ಷೇತ್ರ ಮುಖ್ಯ. ಮಂತ್ರಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಬಿಜೆಪಿ ಕಚೇರಿಯಲ್ಲಿ
ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ವಲಸಿಗರ ಪ್ರಮಾಣ ವಚನ, ಮೂಲ ಬಿಜೆಪಿಗರ ಅಸಮಾಧಾನ; ಕಮಲ ಪಾಳಯದಲ್ಲಿ ಬಂಡಾಯದ ವಾಸನೆ?
ಇದೀಗ ಆ ಮಾತನ್ನು ಪುನರುಚ್ಛರಿಸಿರುವ ವಲಸಿಗ ಶಾಸಕ ಮಹೇಶ್ ಕುಮಟಳ್ಳಿ, ಕಸ ಗುಡಿಸೋ ಕೆಲಸವಾದರೂ ಮಾಡಲು ಸಿದ್ಧನಿದ್ದೇನೆ. ಬಿಜೆಪಿ ವರಿಷ್ಟರ ನಿರ್ಧಾರಕ್ಕೆ ನಾನು ಬದ್ದ ಎಂದು ರಮೇಶ್ ಜಾರಕಿಹೊಳಿಗೆ ತಿಳಿಸಿದ್ದೇನೆ. ನನಗೆ ಮಂತ್ರಿಸ್ಥಾನ ತಪ್ಪಲು ಯಾರು ಕಾರಣ? ಎಂಬಿತ್ಯಾದಿ ವಿವರವನ್ನು ಯಡಿಯೂರಪ್ಪನವರ ಭೇಟಿ ನಂತರ ತಿಳಿಸುತ್ತೇನೆ. ಮಂತ್ರಿ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದ ಯಡಿಯೂರಪ್ಪ ಕೈ ಬಿಟ್ಟಿದ್ದಾರೆ. ಮಂತ್ರಿ ಸ್ಥಾನ ನೀಡುವುದು ಕಷ್ಟ ಎಂಬುದನ್ನು ತಿಳಿಸಿದ್ದಾರೆ. ಅದಕ್ಕೆ ಕಾರಣ ಗೊತ್ತಿಲ್ಲ. ರಾಜಕೀಯ ಕಾರಣಗಳನ್ನು ತಿಳಿಸಲು ಅವರಿಗೂ ಕಷ್ಟವಾಗುತ್ತದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕುತೂಹಲ ಮೂಡಿಸಿದ ಉಮೇಶ್ ಕತ್ತಿ ನಡೆ, ಬಿಎಸ್ವೈಗೆ ಟೆನ್ಷನ್; ಬಂಡಾಯದ ಬಾವುಟ ಹಾರಿಸ್ತಾರಾ ಬಿಜೆಪಿ ಹಿರಿಯ ನಾಯಕ?
ಮಂತ್ರಿ ಸ್ಥಾನ ಸಿಗದಿದ್ದರೂ ಪರ್ಯಾಯ ಅಧಿಕಾರ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಟೆನ್ಷನ್ ಇಲ್ಲ, ಮಂತ್ರಿ ಆಗಿಲ್ಲ ಅನ್ನೋದು ಸ್ವಲ್ಪ ನೋವಾಗುತ್ತದೆ ಅಷ್ಟೆ. ನಾನು ಹಲವಾರು ವರ್ಷಗಳಿಂದ ರಾಜಕೀಯದಲ್ಲೇ ಇದ್ದೇನೆ. ಗೌರವಯುತ ಸ್ಥಾನ ಸಿಕ್ಕಿತು ಎಂದರೆ ಸಂತೋಷವಾಗುತ್ತದೆ. ನಾನು ಕೂಡ ಮನುಷ್ಯನೇ ಅಲ್ಲವೇ? ಎಂದಿದ್ದಾರೆ.
ಪಕ್ಷ ಬಿಟ್ಟೊರು ಬೀದಿಗೆ ಬೀಳುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಮಹೇಶ್ ಕುಮಟಳ್ಳಿ , ಬಿಜೆಪಿ ಪಕ್ಷಕ್ಕೆ ಮುಜುಗರ ಆಗುವಂತೆ ಮಾತನಾಡಬಾರದು ಎಂದು ಸುಮ್ಮನಿದ್ದೇನೆ. ನೆಟ್ಟಗಿರುವ ಮರ ಬೇಗ ಮುರಿದು ಬೀಳುತ್ತದೆ. ಅಸಮಾಧಾನ ಇದೆಯೋ, ಇಲ್ಲವೋ ಎಂಬುದಕ್ಕಿಂತ ಪಕ್ಷದ ನಿರ್ಧಾರಕ್ಕೆ ಬದ್ದವಾಗಿರುತ್ತೇನೆ ಎಂದು ಮಹೇಶ್ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.
(ವರದಿ: ಅಭಿಷೇಕ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ