ಇಂದು ಐದು ಕ್ಷೇತ್ರಗಳಿಗೆ ಮತದಾನ; ಚುನಾವಣಾ ಆಯೋಗದಿಂದ ಸಕಲ ಸಿದ್ಧತೆ

  • News18
  • Last Updated :
  • Share this:
ನ್ಯೂಸ್ 18 ಕನ್ನಡ

ಬೆಂಗಳೂರು (ನವೆಂಬರ್ 3): ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಮತದಾನ ಇಂದು (ನ.3) ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಚುನಾವಣಾ ಆಯೋಗ ಸಮಯ ನಿಗದಿ ಮಾಡಿದೆ.

ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಅಭ್ಯರ್ಥಿಗಳನ್ನು ಐದೂ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದರೆ, ಬಿಜೆಪಿ ಏಕಾಂಗಿ ಹೋರಾಟ ಮಾಡುತ್ತಿದೆ. ಕಾಂಗ್ರೆಸ್​ - ಜೆಡಿಎಸ್​ ಜಂಟಿ ಅಭ್ಯರ್ಥಿಗಳ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎರಡೂ ಪಕ್ಷದ ಹಿರಿಯ ನಾಯಕರು ಪ್ರಚಾರ ಮಾಡಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿಗಳ ಪರವಾಗಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಆರ್​. ಅಶೋಕ್​, ಸದಾನಂದಗೌಡ ಸೇರಿದಂತೆ ಹಲವು ಹಿರಿಯ ನಾಯಕರು ಪ್ರಚಾರ ಮಾಡಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಈ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಮೂರು ಪಕ್ಷಗಳ ಗುರಿಯಾಗಿದೆ. ಅಲ್ಲದೇ, ರಾಜ್ಯದಲ್ಲಿ ಮೈತ್ರಿಯಾಗಿ ಸರ್ಕಾರ ರಚಿಸಿರುವ ಕಾಂಗ್ರೆಸ್, ಜೆಡಿಎಸ್​ಗೆ ಈ ಚುನಾವಣೆ ಭವಿಷ್ಯದ ಅಸ್ತಿತ್ವವಾದರೆ, ಬಿಜೆಪಿಗೆ ಬಿ.ಎಸ್​.ಯಡಿಯೂರಪ್ಪ ಅವರಿಗೆ ನಾಯಕತ್ವದ ಸವಾಲಿನ ಕದನವಾಗಿದೆ.

ಮಂಡ್ಯ, ಶಿವಮೊಗ್ಗ ಲೋಕಸಭೆ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಬೆಂಬಲದೊಂದಿಗೆ ಜೆಡಿಎಸ್​ ಅಭ್ಯರ್ಥಿಗಳು ಕಣದಲ್ಲಿ ಇದ್ದರೆ, ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಬೆಂಬಲದೊಂದಿಗೆ ಕಾಂಗ್ರೆಸ್​ ಅಭ್ಯರ್ಥಿಗಳು ಅಖಾಡಕ್ಕೆ ಇಳಿದಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಂಟಿಯಾಗಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದು, ವಿರೋಧ ಪಕ್ಷವಾದ ಬಿಜೆಪಿಗೆ ಮಣ್ಣು ಮುಕ್ಕಿಸಲು ಸಕಲ ಕಸರತ್ತು ನಡೆಸಿದೆ. ದೋಸ್ತಿ ಪಕ್ಷಗಳ ಒಗ್ಗಟ್ಟನ್ನು ಛಿದ್ರ ಮಾಡಲು ಬಿಜೆಪಿ ಕೂಡ ಅಣಿಯಾಗಿದ್ದು, ಗೆಲುವಿಗಾಗಿ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದೆ. ಒಟ್ಟಿನಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬುದನ್ನು ಇದೇ ಶನಿವಾರ ಮತದಾರರು ನಿರ್ಧರಿಸಲಿದ್ದಾರೆ.

ಒಟ್ಟು ಐದು ಮತಕ್ಷೇತ್ರಗಳಲ್ಲಿ 6,453 ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಇವುಗಳಲ್ಲಿ 1,502 ಸೂಕ್ಷ್ಮ ಮತಗಟ್ಟೆಗಳು, ಮಹಿಳೆಯರಿಗಾಗಿ 57 ಪಿಂಕ್​ ಹಾಗೂ ವಿಕಲಚೇತನರಿಗಾಗಿ 26 ಮತಗಟ್ಟೆಗಳನ್ನು ತೆರಯಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್​ ತಿಳಿಸಿದ್ದಾರೆ.

ಸೂಕ್ಷ್ಮ ಮತಗಟ್ಟೆಗಳಲ್ಲಿ ಛಾಯಾಗ್ರಾಹಕರು ಹಾಗೂ ಅಂತರ್ಜಾಲ ಪ್ರಸಾರ ವ್ಯವಸ್ಥೆ ಮತ್ತು ಕಣ್ಗಾವಲು ವೀಕ್ಷಕರನ್ನು ನೇಮಿಸಲಾಗುತ್ತದೆ. ಬಂದೋಬಸ್ತ್​ಗಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್​) 39 ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. ಪ್ರಚಾರದ ವೇಳೆ ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸಲಾಗುತ್ತಿದ್ದ 55 ಲಕ್ಷ ಹಣ, 60 ಸಾವಿರ ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಇದುವರೆಗೂ ಚುನಾವಣೆಗೆ ಸಂಬಂಧಿಸಿದಂತೆ 12 ದೂರುಗಳು ದಾಖಲಾಗಿವೆ ಎಂದು ಆಯೋಗ ತಿಳಿಸಿದೆ.

ಇದನ್ನು ಓದಿ: ಗೆದ್ದರೆ ಮೈತ್ರಿ ಬಲಿಷ್ಠ, ಸೋತರೆ ಸರ್ಕಾರ ಪತನ..? ಮತದಾನದಲ್ಲಿ ರಾಜ್ಯ ರಾಜಕಾರಣದ ಭವಿಷ್ಯ ನಿರ್ಧಾರ

ರಾಮನಗರದಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿ ಎಲ್​.ಚಂದ್ರಶೇಖರ್​ ಕಣದಿಂದ ಹಿಂದೆ ಸರಿದು, ಜೆಡಿಎಸ್​ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಅಲ್ಲಿ ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲುವು ನಿಶ್ಚಿತವಾಗಿದೆ. ಇನ್ನು ಜೆಡಿಎಸ್​ ಭದ್ರಕೋಟೆ ಎನಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಎಲ್​.ಆರ್​.ಶಿವರಾಮೇಗೌಡ, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರ ವಿರುದ್ಧ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಇದ್ದು, ವಿಜಯಮಾಲೆ ಯಾರಿಗೆ ಎಂಬುದು ಇಂದು ನಿರ್ಧಾರವಾಗಲಿದೆ. ಹಾಗೆಯೇ, ಬಾಗಲಕೋಟೆಯ ಜಮಖಂಡಿ ಕ್ಷೇತ್ರದಲ್ಲೂ ಅನುಕಂಪದ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್​ನ ಆನಂದ ನ್ಯಾಮಗೌಡ ಪರ ತಂದೆ ನಿಧನದ ಅನುಕಂಪ ಇದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಕೂಡ ಮೂರು ಬಾರಿ ಸೋತಿರುವ ಅನುಕಂಪವಿದೆ. ಅಂತಿಮವಾಗಿ ಮತದಾರ ಪ್ರಭು ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 
First published: