Karnataka By Election Result 2021: ಇಂದು ಸಿಂದಗಿ & ಹಾನಗಲ್ ಉಪ ಚುನಾವಣೆ ಫಲಿತಾಂಶ; ಗೆಲುವಿನ ಲೆಕ್ಕಾಚಾರ ಹೀಗಿದೆ

Counting of votes for Sindgi and Hangal : ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಸರಿಸುಮಾರು ಶೇ.69 ರಷ್ಟು ಮತದಾನವಾಗಿದ್ದರೆ, ಹಾನಗಲ್​​​ನಲ್ಲಿ ಶೇ.84 ರಷ್ಟು ಮತದಾನವಾಗಿದೆ. ಎರಡು ಕ್ಷೇತ್ರಗಳಿಂದ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಿಂದಗಿಯಿಂದ ಆರು ಹಾಗೂ ಹಾನಗಲ್‌ನಿಂದ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Sindagi, Hangal by election counting: ಸಿಂದಗಿ ಹಾಗೂ ಹಾನಗಲ್​​ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ (by election result) ಇಂದು ಹೊರ ಬೀಳಲಿದೆ. ಅ.30ರಂದು ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಸಿಎಂ ಬಸವರಾಜ ಬೊಮ್ಮಾಯಿ (CM basavaraj bommai) ಅಧಿಕಾರದ ಚುಕ್ಕಾಡಿ ಹಿಡಿದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ. ಇನ್ನು ಕಾಂಗ್ರೆಸ್​​-ಜೆಡಿಎಸ್​ (congress-JDS) ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಆಡಳಿತ ಪಕ್ಷವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿವೆ. ಸಿಂದಗಿಯಲ್ಲಿ ಕಾಂಗ್ರೆಸ್ ನಿಂದ ಅಶೋಕ್ ಮನಗೂಳಿ, ಬಿಜೆಪಿಯಿಂದ ರಮೇಶ್ ಭುಸನೂರು ಮತ್ತು ಜೆಡಿಎಸ್ ನಿಂದ ನಾಜೀಯಾ ಅಂಗಡಿ ಕಣದಲ್ಲಿದ್ದಾರೆ. ಇತ್ತ ಹಾನಗಲ್ ನಲ್ಲಿ ಕಾಂಗ್ರೆಸ್ ನಿಂದ  ಶ್ರೀನಿವಾಸ್ ವಿ ಮಾನೆ, ಬಿಜೆಪಿಯಿಂದ ಶಿವರಾಜ್ ಸಜ್ಜನ್  ಮತ್ತು ಜೆಡಿಎಸ್ ನಿಂದ ನಿಯಾಜ್ ಶೇಕ್ ಸ್ಪರ್ಧೆಯಲ್ಲಿದ್ದಾರೆ.

ಶೇಕಡಾವಾರು ಮತದಾನ ಎಷ್ಟು ಆಗಿದೆ? 

ರಾಜ್ಯ ಚುನಾವಣಾ ಆಯೋಗದ ಪ್ರಕಾರ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಸರಿಸುಮಾರು ಶೇ.69 ರಷ್ಟು ಮತದಾನವಾಗಿದ್ದರೆ, ಹಾನಗಲ್​​​ನಲ್ಲಿ ಶೇ.84 ರಷ್ಟು ಮತದಾನವಾಗಿದೆ. ಎರಡು ಕ್ಷೇತ್ರಗಳಿಂದ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಿಂದಗಿಯಿಂದ ಆರು ಹಾಗೂ ಹಾನಗಲ್‌ನಿಂದ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಿಂದಗಿ ಜೆಡಿಎಸ್ ಶಾಸಕ ಎಂ ಸಿ ಮನಗೂಳಿ ಮತ್ತು ಹಾನಗಲ್​​​ನಲ್ಲಿ ಬಿಜೆಪಿಯ ಸಿ ಎಂ ಉದಾಸಿ ಅವರ ನಿಧನದ ನಂತರ ತೆರವಾದ ಸ್ಥಾನಗಳಿಗೆ ಉಪಚುನಾವಣೆ ಅನಿವಾರ್ಯವಾಗಿತ್ತು.

ಯಾವ ಪಕ್ಷದ ಯಾರಿಗೆ ಮತದಾರ ಮಣೆ ಹಾಕಲಿದ್ದಾನೆ?

ಬಿಜೆಪಿ ಸಿಂದಗಿಯಿಂದ ರಮೇಶ ಭೂಸನೂರ ಅವರನ್ನು ಕಣಕ್ಕಿಳಿಸಿದ್ದರೆ, ಹಾನಗಲ್​​ ಕ್ಷೇತ್ರದಿಂದ ಶಿವರಾಜ್ ಸಜ್ಜನರ್ ಅಭ್ಯರ್ಥಿಯಾಗಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಸಿಂದಗಿಯಿಂದ ಎಂಸಿ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿಯನ್ನು ಕಣಕ್ಕಿಳಿಸಿದ್ದರೆ, ಮಾಜಿ ಎಂಎಲ್ ಸಿ ಶ್ರೀನಿವಾಸ ಮಾನೆ ಹಾನಗಲ್​​ ನಿಂದ ಸ್ಪರ್ಧಿಸಿದ್ದಾರೆ. ಸಿಂದಗಿಯಿಂದ 33 ವರ್ಷದ ಸ್ನಾತಕೋತ್ತರ ಪದವೀಧರೆ ನಾಜಿಯಾ ಶಕೀಲ್ ಅಹ್ಮದ್ ಅಂಗಡಿ ಮತ್ತು ಹಾನಗಲ್ ನಿಂದ 35 ವರ್ಷದ ಬಿಇ, ಎಂಟೆಕ್ ಪದವೀಧರ ನಿಯಾಜ್ ಶೇಖ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್​ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಿದ್ದರ ಸಂಬಂಧ ಜೆಡಿಎಸ್​-ಕಾಂಗ್ರೆಸ್​​ ಮಧ್ಯೆ ಚುನಾವಣಾ ಪ್ರಚಾರದ ವೇಳೆ ವಾಕ್ಸಮರವೇ ನಡೆದಿತ್ತು.

3 ಪಕ್ಷಗಳಿಗೆ ಈ ಫಲಿತಾಂಶ ಏಕೆ ಮುಖ್ಯ?

ಈ ವರ್ಷ ಜುಲೈನಲ್ಲಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಸವರಾಜ ಬೊಮ್ಮಾಯಿ ಅವರಿಗೆ ಈ ಉಪಚುನಾವಣೆಯು ಚುನಾವಣಾ ಸವಾಲಾಗಿ ಪರಿಗಣಿಸಲ್ಪಟ್ಟಿದೆ. ಸಿಎಂ ಅವರ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರಕ್ಕೆ ಪಕ್ಕದ ಕ್ಷೇತ್ರವಾಗಿರುವುದರಿಂದ ಹಾನಗಲನ್ನು ಉಳಿಸಿಕೊಳ್ಳುವುದು ಅವರಿಗೆ ಹೆಚ್ಚು ಮುಖ್ಯವಾಗಿದೆ. ಕಾಂಗ್ರೆಸ್ ಉಪಚುನಾವಣೆಯಲ್ಲಿ ಗೆಲುವು ದಾಖಲಿಸುವ ಮೂಲಕ, ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ತನ್ನ ಸಿದ್ಧತೆಗಳಿಗೆ ವೇಗವನ್ನು ನೀಡಲು ಬಯಸುತ್ತಿದೆ. ಆದರೆ ಜೆಡಿಎಸ್ (ಎಸ್) ಸಿಂದಗಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಮತ್ತು ಆ ಮೂಲಕ ತಾನು ಇನ್ನೂ ಭದ್ರ ನೆಲೆಯನ್ನು ಹೊಂದಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಮುಂದಿನ ವರ್ಷ ರಾಜ್ಯೋತ್ಸವ ಪ್ರಶಸ್ತಿ ಜೊತೆ ₹5 ಲಕ್ಷ; ಮಹತ್ವದ ಬದಲಾವಣೆಗಳನ್ನು ಘೋಷಿಸಿದ ಸಿಎಂ

ಅಬ್ಬರ ಭಾಷಣಕ್ಕೆ ಮತದಾರರ ಉತ್ತರವೇನು?

ಚುನಾವಣೆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್​ಡಿಕೆ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​​ ಶಾಸಕ ಜಮೀರ್ ಮಧ್ಯೆ ತೀವ್ರ ವಾಕ್ಸಮರ ನಡೆದಿತ್ತು. ಜೆಡಿಎಸ್​ಗೆ ಮತ ಹಾಕಬೇಡಿ, ಆ ಪಕ್ಷ ಬಿಜೆಪಿಯ ಬಿ ಟೀಂ ಎಂದು ಸಿದ್ದರಾಮಯ್ಯ ಚುನಾವಣಾ ಪ್ರಚಾರವ ವೇಳೆ ಅಬ್ಬರಿಸಿದ್ದರು. ಇನ್ನು ಬಿಜೆಪಿ ಕುಮಾರಸ್ವಾಮಿಯ ದ್ವಿಪತ್ನಿತ್ವ ಪ್ರಶ್ನಿಸಿ ಟಾಂಗ್​ ಕೊಟ್ಟಿತ್ತು. ನನ್ನ ವೈಯಕ್ತಿಕ ವಿಚಾರಕ್ಕೆ ಬಂದರೆ ನಿಮ್ಮ ಬಂಡವಾಳ ಬಯಲಿಗೆಳೆಯುವೆ ಎಂದು ಎಚ್​ಡಿಕೆ ತಿರುಗೇಟು ನೀಡಿದ್ದರು. ಅದೆಲ್ಲಾ ಅಬ್ಬರ ಮಾತುಗಳಿಗೆ ಮತದಾರ ಏನೆಂದು ಉತ್ತರ ಕೊಟ್ಟಿದ್ದಾನೆ ಎಂದು ಇಂದು ತಿಳಿಯಲಿದೆ. ಕೆಲವೇ ಗಂಟೆಗಳಲ್ಲಿ ಎರಡೂ ಕ್ಷೇತ್ರದ ಫಲಿತಾಂಶ ಹೊರ ಬೀಳಲಿದೆ.
Published by:Kavya V
First published: