ಉಪಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ; ಇಂದು ಮನೆಮನೆ ಪ್ರಚಾರ; ಮತದಾನಕ್ಕೆ ಒಂದು ದಿನ ಬಾಕಿ

ಚುನಾವಣೆ ಘೋಷಣೆಯಾದಾಗಿನಿಂದ ಮತದಾರರ ಸೆಳೆಯಲು ಮೂರು ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದರು. ಆಡಳಿತ ವಿಪಕ್ಷಗಳ ನಡುವೆ ಆರೋಪ -ಪ್ರತ್ಯಾರೋಪ ನಡೆಸಿದ ನಾಯಕರು ಕ್ಷೇತ್ರಗಳಲ್ಲಿ ಬಿಡುವಿಲ್ಲದ ಪ್ರಚಾರ ನಡೆಸಿದ್ದು, ನಾಳೆ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಹೊಂದಿದ್ದಾರೆ.

Seema.R | news18-kannada
Updated:December 4, 2019, 7:45 AM IST
ಉಪಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ; ಇಂದು ಮನೆಮನೆ ಪ್ರಚಾರ; ಮತದಾನಕ್ಕೆ ಒಂದು ದಿನ ಬಾಕಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಡಿ. 03): ಕಾಂಗ್ರೆಸ್​-ಜೆಡಿಎಸ್​ನ 17 ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ 15 ಕ್ಷೇತ್ರಗಳ ಚುನಾವಣೆ ಡಿ.5ರಂದು ನಡೆಯಲಿದ್ದು,  ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಇಂದು ನಾಯಕರು ಮನೆ ಮನೆ ಪ್ರಚಾರ ನಡೆಸಲಿದ್ದಾರೆ. 

ಚುನಾವಣೆ ಘೋಷಣೆಯಾದಾಗಿನಿಂದ ಮತದಾರರ ಸೆಳೆಯಲು ಮೂರು ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದರು. ಆಡಳಿತ ವಿಪಕ್ಷಗಳ ನಡುವೆ ಆರೋಪ -ಪ್ರತ್ಯಾರೋಪ ನಡೆಸಿದ ನಾಯಕರು ಕ್ಷೇತ್ರಗಳಲ್ಲಿ ಬಿಡುವಿಲ್ಲದ ಪ್ರಚಾರ ನಡೆಸಿದ್ದು, ನಾಳೆ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಹೊಂದಿದ್ದಾರೆ.

ಇನ್ನು ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಹುಣಸೂರು, ಕೆಆರ್​ ಪೇಟೆಗಳಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರ ನಡೆಸಿ ಸಿಎಂ ಬಿಎಸ್​ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ತಾವು ತಂತಿ ಮೇಲೆ ನಡೆಯುತ್ತಿದ್ದೇವೆ ಎನ್ನುತ್ತಾರೆ.  ಅವರಿಗೆ ವಯಸ್ಸಾಗಿದೆ, ಬಿದ್ದುಬಿಟ್ಟೀರಾ ಇಳಿದುಬಿಡಿ ಎಂದಿದ್ದೇನೆ ಎಂದು ಮಾಜಿ ಸಿಎಂ ವ್ಯಂಗ್ಯವಾಡಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಿಎಸ್​ ಯಡಿಯೂರಪ್ಪ, ಉಪಚುನಾವಣೆಯ ಫಲಿತಾಂಶದ ನಂತರ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜಿನಾಮೆ ಕೊಡುವಂತೆ ಕಾಂಗ್ರೆಸ್​​ನವರೇ ಕೇಳಲಿದ್ದಾರೆ ಎಂದು ಕುಟುಕಿದರು.  ಕಾಂಗ್ರೆಸ್- ಜೆಡಿಎಸ್ ತಮಗೆ ಬಹುಮತವಿದೆ ಅನ್ನುತ್ತಾರೆ. ಅವರ ಯೋಗ್ಯತೆಗೆ ಎರಡೂ ಪಕ್ಷಗಳು ಸೇರಿ ರಾಜ್ಯಸಭೆಗೆ ಒಂದು ಕ್ಯಾಂಡಿಡೇಟ್ ಹಾಕಲು ಆಗಿಲ್ಲವೆಂದು ಟೀಕಿಸಿದ್ದಾರೆ

ಬೆಳಗಾವಿಯ ಗೋಕಾಕ್​​ನಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಕಡೆ ಹಂತದ ಕಸರತ್ತು ನಡೆಸಿದ್ದಾರೆ. ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್​ ಹೆಬ್ಬಾರ್​ ರೋಡ್​ ಶೋ ಮಾಡುವ ಮೂಲಕ ಪ್ರಚಾರ ನಡೆಸಿದರು.

ಹೊಸಕೋಟೆಯಲ್ಲಿ ಡಿಕೆ ಶಿವಕುಮಾರ್​ ಕಾಂಗ್ರೆಸ್​ ಅಭ್ಯರ್ಥಿ ಪದ್ಮಾವತಿ ಪರ ಪ್ರಚಾರ ನಡೆಸಿ 15 ಕ್ಷೇತ್ರಗಳಲ್ಲಿ ಅನರ್ಹರ ಸೋಲು ಖಚಿತ ಎಂದು ಭವಿಷ್ಯ ನುಡಿದರು.

ಬಳ್ಳಾರಿ ವಿಜಯನಗರ ಕೈ-ಕಮಲ ಪಕ್ಷ ನಾಯಕರು ಭರ್ಜರಿ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಪರ ಶ್ರೀರಾಮುಲು ಕೂಡ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು.ಕೆಆರ್​ ಪೇಟೆಯಲ್ಲಿ ಮಾಜಿ ಸಚಿವ ರೇವಣ್ಣ ಪ್ರಚಾರ ನಡೆಸಿ, ಜಿಲ್ಲೆಗೆ ದೇವೇಗೌಡರ ಕೊಡುಗೆಯನ್ನು ನೆನಪಿಸಿದರು. ಮಹಾಲಕ್ಷ್ಮೀ ಲೇಔಟ್​ನಲ್ಲಿ ಕುಮಾರಸ್ವಾಮಿ ಪ್ರಚಾರ ನಡೆಸಿ ಅನರ್ಹ ಶಾಸಕರ ನಡೆಯನ್ನು ಪ್ರಶ್ನಿಸಿದರು.

ಸೋಲು-ಗೆಲುವಿನ ಲೆಕ್ಕಾಚಾರ ಶುರು

15 ಕ್ಷೇತ್ರಗಳಲ್ಲಿ ಬಿಡುವಿಲ್ಲದಂತೆ ಪ್ರಚಾರ ನಡೆಸಿದ ಮೂರು ಪಕ್ಷದ ನಾಯಕರು ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದ್ದಂತೆ ಸೋಲು-ಗೆಲುವಿನ ಲೆಕ್ಕಾಚಾರ ಆರಂಭಿಸಿದ್ದಾರೆ.

ಮೂಲಗಳ ಪ್ರಕಾರ ಸಿಎಂ ಬಿಎಸ್​ವೈ ಈಗಾಗಲೇ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದಿದ್ದು, ಕ್ಷೇತ್ರದ ವಾತಾವರಣ ತಿಳಿಯುವ ಪ್ರಯತ್ನ ನಡೆಸಿದ್ದಾರೆ. ಇನ್ನು ಕಾಂಗ್ರೆಸ್​-ಜೆಡಿಎಸ್​ ನಾಯಕರು ಈ ಬಾರಿ ಮತದಾರರು ಅನರ್ಹರ ಕೈ ಹಿಡಿಯುವುದಿಲ್ಲ ಎಂಬ ಭರವಸೆಯಲ್ಲಿದ್ದು, ಫಲಿತಾಂಶದ ಬಳಿಕ ಮುಂದಿನ ನಡೆ ಏನು ಎಂಬ ಕುರಿತು ಚರ್ಚೆ ನಡೆಸಿದ್ದಾರೆ.

ನಾಳೆಯಿಂದ ಮನೆ ಮನೆ ಪ್ರಚಾರ

ನಾಳೆ ಮನೆಮನೆಗೆ ತೆರಳಿ ಅಭ್ಯರ್ಥಿಗಳು ಮತಯಾಚಿಸಬಹುದಾಗಿದೆ. 15 ಕ್ಷೇತ್ರಗಳಲ್ಲಿ ಒಟ್ಟು 4,185 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಮಹಿಳೆಯರು ಹಾಗೂ ಅಂಧರಿಗಾಗಿ 9 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚುನಾವಣೆಯ ಭದ್ರತೆಗಾಗಿ 15 ಕ್ಷೇತ್ರಗಳಲ್ಲಿ ಹೆಚ್ಚುವರಿ ಪೊಲೀಸರನ್ನ ನೇಮಕ ಮಾಡಲಾಗಿದೆ. 900 ಸೂಕ್ಷ್ಮ ಪ್ರದೇಶಗಳಿವೆ. 2,511 ಸಿಆರ್​ಪಿಎಫ್​ ಸೇರಿದಂತೆ ಇತರೆ ಎಲ್ಲಾ ಸಿಬ್ಬಂದಿ ಒಳಗೊಂಡಂತೆ ಒಟ್ಟು 42,509 ಸಿಬ್ಬಂದಿ ಕಾರ್ಯ ನಿವರ್ಹಿಸಲಿದ್ದಾರೆ. ಮತದಾನಕ್ಕೆ 78 ಗಂಟೆ ಮೊದಲು ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಸಾರವನ್ನು ನಿಷೇಧಿಸಲಾಗಿದೆ ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್​ ಕುಮಾರ್​ ತಿಳಿಸಿದ್ದಾರೆ. ಇನ್ನು ಮತದಾನದ ದಿನ, ಮತದಾನ ನಡೆಯುವ ಕ್ಷೇತ್ರಗಳಲ್ಲಿ ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ