ಬೆಂಗಳೂರು (ಮಾ. 4): ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದೆ. ಹೀಗಾಗಿ, ಆಡಳಿತ ಪಕ್ಷ ಸೇರಿದಂತೆ ವಿರೋಧ ಪಕ್ಷವೂ ಸದನದಲ್ಲಿ ಧ್ವನಿಯೆತ್ತಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಾರ್ಚ್ 8ರಂದು ಬಜೆಟ್ ಮಂಡನೆ ನಡೆಯಲಿದ್ದು, ಇಂದಿನಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ನಾನಾ ವಿಚಾರಗಳು ಚರ್ಚೆಯಾಗಲಿವೆ. ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ವಿಡಿಯೋ ಬಗ್ಗೆ ಸದನದಲ್ಲಿ ಭಾರೀ ಟೀಕೆ ವ್ಯಕ್ತವಾಗುವ ನಿರೀಕ್ಷೆಯಿಂದ ನಿನ್ನೆಯೇ ಸಿಎಂ ಯಡಿಯೂರಪ್ಪ ರಮೇಶ್ ಜಾರಕಿಹೊಳಿ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದಿದ್ದಾರೆ.
ಇನ್ನು, ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ ವಿಧಾನಸೌಧದಲ್ಲಿ ಸಭೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಹೇಗೆ ತಿರುಗಿ ಬೀಳಬೇಕು? ಯಾವ ವಿಚಾರವನ್ನು ಯಾರು ಪ್ರಸ್ತಾಪಿಸಬೇಕು? ಎಲ್ಲರೂ ಒಟ್ಟಾಗಿ ಹೇಗೆ ಧ್ವನಿ ಎತ್ತಬೇಕು? ಆಡಳಿತ ಪಕ್ಷದ ಸದಸ್ಯರ ಬಾಯಿ ಮುಚ್ಚಿಸುವುದು ಹೇಗೆ? ಎಂಬಿತ್ಯಾದಿ ವಿಚಾರಗಳು ಇಂದಿನ ಸಭೆಯಲ್ಲಿ ಚರ್ಚೆಯಾಗಲಿವೆ.
ಗಣಿ ಪ್ರಕರಣದ ವಿಚಾರ ಯಾರು ಪ್ರಸ್ತಾಪಿಸಬೇಕು? ತೈಲಬೆಲೆ ಏರಿಕೆ,ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಸ್ತಿ ತೆರಿಗೆ ಹೆಚ್ಚಳ ಇವುಗಳ ಬಗ್ಗೆ ಹೇಗೆ ಪ್ರಸ್ತಾಪಿಸಬೇಕು? ಸರ್ಕಾರವನ್ನ ಯಾವ ರೀತಿ ಮುಜುಗರಕ್ಕೀಡುಮಾಡಬೇಕು? ಸಚಿವರ ಸಿಡಿ ವಿಚಾರವನ್ನು ಹೇಗೆ ಪ್ರಸ್ತಾಪಿಸಬೇಕು? ಎಂಬ ಬಗ್ಗೆ ತಮ್ಮ ಶಾಸಕರಿಗೆ ಸಿದ್ದರಾಮಯ್ಯ ಸಲಹೆ ನೀಡಲಿದ್ದಾರೆ. ಬಿಜೆಪಿ ಪಕ್ಷದ ಹಿರಿಯ ನಾಯಕರಿಂದಲೂ ಸಲಹೆ, ಸೂಚನೆಗಳನ್ನು ನೀಡಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ