ಬೆಂಗಳೂರು (ಮಾ. 4): ಭದ್ರಾವತಿಯಲ್ಲಿ ತಮ್ಮ ಮೇಲೆ ಕೇಸ್ ದಾಖಲಿಸಿದ್ದನ್ನು ಖಂಡಿಸಿ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಇಂದು ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದರು. ಇದು ಭಾರೀ ಚರ್ಚೆಗೆ ಕಾರಣವಾಯಿತು. ಅಲ್ಲದೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಕ್ರೋಶಕ್ಕೂ ಕಾರಣವಾಯಿತು. ಸದನದಲ್ಲಿ ಶರ್ಟ್ ಬಿಚ್ಚಿ ಹೆಗಲು ಮೇಲೆ ಹಾಕಿಕೊಂಡಿದ್ದಕ್ಕೆ ಸಂಗಮೇಶ್ ಮೇಲೆ ಫುಲ್ ಗರಂ ಆದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತರಾಟೆ ತೆಗೆದುಕೊಂಡರು.
ನೀವೇನು ಬೀದಿಯಿಂದ ಬಂದಿದ್ದೀರ? ನಿಮ್ಮ ಸ್ಥಾನದ ಬಗ್ಗೆ ನಿಮಗೆ ಅರಿವಿಲ್ಲವಾ? ಎಂದು ಶಾಸಕ ಸಂಗಮೇಶ್ ಅವರನ್ನು ಪ್ರಶ್ನಿಸಿದ ಸ್ಪೀಕರ್ ಕಾಗೇರಿ, ಏನ್ರೀ ಸಿದ್ದರಾಮಯ್ಯನವರೇ? ಇವರು ವಿಧಾನಸಭಾ ಸದಸ್ಯರೇನ್ರೀ? ಏನ್ರೀ ಇವರು ಹೀಗೆ ನಡೆದುಕೊಳ್ಳುತ್ತಿದ್ದಾರೆ. ಸಂಗಮೇಶ್ ಅವರೇ ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ. ಶರ್ಟ್ ಬಿಚ್ಚಿಕೊಂಡು ಗಲಾಟೆ ಮಾಡಿದ ನೀವು ಅಶಿಸ್ತಿನಿಂದ ನಡೆದುಕೊಂಡು ಭದ್ರಾವತಿ ಜನತೆಗೆ ಅವಮಾನ ಮಾಡ್ತಿದ್ದೀರಿ. ನಿಮ್ಮ ಕ್ಷೇತ್ರದ ಜನರಿಗೆ ಅಗೌರವ ತೋರುತ್ತಿದ್ದೀರಿ. ಸದನದಲ್ಲಿ ಅಶಿಸ್ತಿನಿಂದ ನಡೆದುಕೊಂಡಿದ್ದೀರಿ ಎಂದು ಸ್ಪೀಕರ್ ಕಿಡಿ ಕಾರಿದ್ದಾರೆ.
ಸದನದಲ್ಲಿ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಪ್ರತಿಭಟನೆ ನಡೆಸಿದರು. ಬಳಿಕ ಸಂಗಮೇಶ್ ಬಿಚ್ಚಿದ್ದ ಶರ್ಟ್ ಅನ್ನು ಹಾಕಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಲ್ಲಿನ ವಾತಾವರಣವನ್ನು ತಿಳಿಗೊಳಿಸಿದರು.
ವಿರೋಧ ಪಕ್ಷದವರು ಗಲಾಟೆ ಮಾಡದೆ ವಿರೋಧ ಮಾಡಬೇಕು. ಆದರೆ, ಪ್ರತಿಪಕ್ಷದವರಾಗಿ ಹೀಗೆ ನಡೆದುಕೊಳ್ಳೋದು ಸರಿಯಲ್ಲ. ನಿಮ್ಮ ನಡವಳಿಕೆ ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. ನಿಮ್ಮ ನಡೆಯನ್ನು ರಾಜ್ಯದ ಜನರು ಸಹಿಸೋದಿಲ್ಲ ಎಂದು ಕಾಂಗ್ರೆಸ್ ನವರ ವಿರುದ್ದ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಸದನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
Karnataka Budget Session: ಇಂದಿನಿಂದ ಬಜೆಟ್ ಅಧಿವೇಶನ; ಸರ್ಕಾರದ ವಿರುದ್ಧ ಹರಿಹಾಯಲು ಕಾಂಗ್ರೆಸ್ ಸಜ್ಜು
ಸದನದಲ್ಲಿ ಶರ್ಟ್ ಬಿಚ್ಚಿದ ವಿಚಾರವಾಗಿ ನ್ಯೂಸ್18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್, ಭದ್ರಾವತಿ ಕ್ಷೇತ್ರದಲ್ಲಿ ನನ್ನ ಮೇಲೆ ಬೇಕು ಬೇಕು ಅಂತಾ ಕೇಸ್ ಹಾಕಿದ್ದಾರೆ. ಸ್ಪೀಕರ್ ಕಾಗೇರಿ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಅದಕ್ಕಾಗಿ ನಾನು ಶರ್ಟ್ ಬಿಚ್ಚಿ ಸದನದಲ್ಲಿ ಪ್ರತಿಭಟನೆ ಮಾಡಿದೆ. ಈಗ ಮತ್ತೆ ಸದನದಲ್ಲಿ ಪ್ರತಿಭಟನೆ ಮುಂದುವರಿಸುತ್ತೇನೆ. ಸ್ಪೀಕರ್ ನನ್ನನ್ನು ಹೊರಗೆ ಹಾಕ್ತಾರಾ..? ಹಾಕಲಿ. ನಾನು ನನ್ನ ಕ್ಷೇತ್ರದ ಜನರ ಮನಸ್ಸಲ್ಲಿ ಇದ್ದೇನೆ, ನನಗೆ ಅಷ್ಟೇ ಸಾಕು. ನನಗೆ ಅನ್ಯಾಯ ಆಗಿದೆ, ಅದಕ್ಕೆ ನ್ಯಾಯ ಸಿಗೋವರೆಗೂ ಹೋರಾಟ ಮಾಡ್ತೇನೆ ಎಂದಿದ್ದಾರೆ.
ಸದನದಲ್ಲಿ ಸಂಗಮೇಶ್ ಶರ್ಟ್ ಬಿಚ್ಚಿದ್ದೇಕೆ?:
ಅಷ್ಟಕ್ಕೂ ಶಾಸಕ ಸಂಗಮೇಶ್ ಶರ್ಟ್ ಬಿಚ್ಚಲು ಕಾರಣ ಏನು? ಇಲ್ಲಿದೆ ಉತ್ತರ. ಭದ್ರಾವತಿಯಲ್ಲಿ ತನ್ನ ಮೇಲೆ ಕೇಸ್ ಹಾಕಿಸಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಸಂಗಮೇಶ್ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸಲುವಾಗಿ ಶರ್ಟ್ ಬಿಚ್ಚಿದರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಕಬಡ್ಡಿ ಪಂದ್ಯಾವಳಿ ನಡೆದ ವೇಳೆ ಗಲಾಟೆ ನಡೆದು, ಭದ್ರಾವತಿಯಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದ ತಂಡ ರನ್ನರ್ ಅಪ್ ಆಗಿತ್ತು. ಆಗ ಆ ತಂಡದವರು ಭಾರತ್ ಮಾತಾಕಿ ಜೈ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಪಟಾಕಿ ಸಿಡಿಸಿದ್ದರು. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ