ರಾಜ್ಯ ಬಜೆಟ್​ನಲ್ಲಿ ಕೃಷ್ಣೆಯನ್ನು ಮರೆತ ಸಿಎಂ; ಪ್ರತಿಪಕ್ಷ ಅಷ್ಟೇ ಅಲ್ಲ, ಆಡಳಿತ ಪಕ್ಷದ ಶಾಸಕರೂ ಅಸಮಾಧಾನ

ಪ್ರತಿಬಾರಿ ಬಜೆಟ್​ನಲ್ಲಿ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಸಿಗಬೇಕಾದ ಆದ್ಯತೆ ಸಿಗುತ್ತಿಲ್ಲ ಎಂಬ ಆರೋಪವಿದೆ. ಚುನಾವಣೆಗಳಲ್ಲಿ ಈ ಭಾಗದ ಜನಪ್ರತಿನಿಧಿಗಳು ಇದೇ ವಿಷಯದ ಮೇಲೆ ಭರವಸೆ ನೀಡಿ ಆಯ್ಕೆಯಾಗುತ್ತಿದ್ದಾರೆ. ಈ ಬಾರಿ ಇದೇ ಭಾಗದಿಂದ ಇಬ್ಬರು ಡಿಸಿಎಂ, ಜಲಸಂಪನ್ಮೂಲ ಸಚಿವರಾಗಿದ್ದರೂ ಬಜೆಟ್​ನಲ್ಲಿ ಯುಕೆಪಿ ಯೋಜನೆಗಳನ್ನು ಸಿಎಂ ಪ್ರಸ್ತಾಪ ಮಾಡಿಲ್ಲ.

ಎಂಬಿ ಪಾಟೀಲ್

ಎಂಬಿ ಪಾಟೀಲ್

  • Share this:
ವಿಜಯಪುರ: ಸಿಎಂ ಮಂಡಿಸಿದ ಬಜೆಟ್​ನಲ್ಲಿ ಕೃಷ್ಣಾ ಮೇಲ್ದಂಡೆಯ 3ನೇ ಹಂತದ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲಿದಿರುವುದು ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕೊಪ್ಪಳ ಜಿಲ್ಲೆಗಳ ಜನರಲ್ಲಿ ಆತಂಕ ಮೂಡಿಸಿದೆ. ಅಷ್ಟೇ ಅಲ್ಲ ಈ ವಿಚಾರದ ಕುರಿತು ಜಲಸಂಪನ್ಮೂಲ ಇಲಾಖೆ ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ಹಾಗೂ ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಶಕರು ಅಸಮಾಧಾನ ವ್ಯಕ್ತಪಡಿಸುವುದು ಸಹಜ ಎಂದು ಭಾವಿಸಿದರೂ ಆಡಳಿತಾರೂಢ ಬಿಜೆಪಿ ಶಾಸಕರು ಕೂಡ ನಿರಾಸೆ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ. ಈ ಬಜೆಟ್ ಬಳಿಕ ಎಂ. ಬಿ. ಪಾಟೀಲ ಟ್ವೀಟ್ ಮಾಡಿದ್ದು, ಬಿಜೆಪಿ, ಸಿಎಂ, ಮತ್ತು ಡಿಸಿಎಂ ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿ ಎಸ್ ವೈ ಅವರೇ, ಬಜೆಟ್ ನಲ್ಲಿ ಕೃಷ್ಣಾ ಮೇಲ್ದಂಡೆ .ಯೋಜನೆಯ 3ನೇ ಹಂತದ ಕಾಮಗಾರಿಗಳಿಗೆ ರೂ. 20000 ಕೋ. ಮೀಸಲಿಡುತ್ತೇನೆ ಎಂದಿದ್ದೀರಿ.  ಈಗ ಆ ಹಣ ಎಲ್ಲಿ ಮಾಯವಾಯಿತು? ಗೋವಿಂದಾ ಗೋವಿಂದ! ಎಂದು ಇದೇ ಭಾಗದ ಡಿಸಿಎಂ ಆಗಿರುವ ಗೋವಿಂದ ಕಾರಜೋಳ ಅವರನ್ನು ಲೇವಡಿ ಮಾಡಿದ್ದಾರೆ.

ಯುಕೆಪಿ 3ನೇ ಹಂತದ ಯೋಜನೆಗಳಿಗೆ ಹಣ ಒದಗಿಸಿಲ್ಲ.  ಈ ಬಗ್ಗೆ ಉಪಮುಖ್ಯಮಂತ್ರಿಗಳು ಗೋವಿಂದ ಕಾರಜೋಳ ಏನು ಹೇಳುತ್ತೀರಿ? ಎಂದು ಟ್ವಿಟರ್ ನಲ್ಲಿ ಎಂ. ಬಿ. ಪಾಟೀಲ ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ತುಮಕೂರು ಬಳಿ ಭೀಕರ ರಸ್ತೆ ಅಪಘಾತ; 13 ಮಂದಿ ಸ್ಥಳದಲ್ಲೇ ಸಾವು

ಮತ್ತೋಂದು ಟ್ವೀಟ್​ನಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಕಾನೂನು ಪ್ರಕಾರ ಸಿಗಬೇಕಾದ ಹಣ ಸಿಕ್ಕಿಲ್ಲ. ಇದರ ವಿರುದ್ಧ ಪ್ರಶ್ನೆ ಮಾಡುವ ತಾಕತ್ತು ರಾಜ್ಯದ ಯಾವ ಬಿಜೆಪಿ ನಾಯಕರಿಗೂ ಇಲ್ಲ.  25 ಬಿಜೆಪಿ ಸಂಸದರು ಇದ್ದೂ ಏನೂ ಪ್ರಯೋಜನವಾಗಿಲ್ಲ.  ಪ್ರಶ್ನೆ ಮಾಡಿದರೆ ತಮ್ಮ ಖುರ್ಚಿಗೆ ಆಪತ್ತು ಬರುತ್ತೋ ಎಂಬ ಭಯದಲ್ಲೇ ಬದುಕುತ್ತಿದ್ದಾರೆ ಎಂದು ಎಂ. ಬಿ. ಪಾಟೀಲ ಬಿಜೆಪಿ ಸಂಸದರನ್ನು ಕುಟುಕಿದ್ದಾರೆ.

AS Patil Nadahalli
ಎ.ಎಸ್. ಪಾಟೀಲ್ ನಡಹಳ್ಳಿ


ನಡಹಳ್ಳಿ ಅಸಮಾಧಾನ:

ಈ ಬಜೆಟ್ ಕುರಿತು ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಒಟ್ಟಾರೆಯಾಗಿ ಈ ಬಜೆಟ್ ಚೆನ್ನಾಗಿದೆ. ಎಲ್ಲ ಕ್ಷೇತ್ರಗಳಿಗೂ ಒತ್ತು ನೀಡಲಾಗಿದೆ ಎಂದಿದ್ದಾರೆ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸದಿರುವುದಕ್ಕೆ ಮಾತ್ರ ಅಸಮಾಧಾನ ಹೊರ ಹಾಕಿದ್ದಾರೆ.

ಬಜೆಟ್ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪವಾಗಿಲ್ಲ. ನಾನು ಅನೇಕ ವರ್ಷಗಳಿಂದ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಲು ಹೋರಾಟ ಮಾಡುತ್ತ ಬಂದಿದ್ದೇನೆ. ದುರದೃಷ್ಟವಶಾತ್, ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗಲೂ ಹೀಗೆಯೇ ಆಗಿತ್ತು. ಈಗಲೂ ಅದೇ ರೀತಿ ಆಗಿದೆ ಎಂದು ನಿರಾಸೆ ಹೊರಹಾಕಿದ್ದಾರೆ.

ಇದನ್ನೂ ಓದಿ: ಕೇವಲ ಹೆಸರು ಬದಲಾವಣೆಯಿಂದ ಕಲ್ಯಾಣ ಕರ್ನಾಟಕದ ಭವಿಷ್ಯ ಬದಲಾಗುವುದಿಲ್ಲ; ಅನುದಾನ ನೀಡದ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಅಷ್ಟೇ ಅಲ್ಲ, ಸಿಎಂ ಸದನದ ಮುಂದೆ ಬಜೆಟ್ ಮಂಡಿಸಿದ್ದಾರೆ. ಈಗಾಗಲೇ ಒಂದು ಬಾರಿ ಸಿಎಂ ಭೇಟಿಯಾಗಿ ಹೇಳಿದ್ದೇನೆ. ರಾಜ್ಯದ ಅತೀ ದೊಡ್ಡ ಯೋಜನೆ ಇದಾಗಿದೆ. 5.80 ಎಕರೆಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದು. ಹಣ ಎಲ್ಲಿಂದ ತರ್ತಾರೊ ಗೊತ್ತಿಲ್ಲ. ಹಣ ತಂದು ಯೋಜನೆ ಪೂರ್ಣಗೊಳಿಸಬೇಕು. ಈಗಾಗಲೇ ಕಾಲುವೆ ಮುಗಿದು ನಾಲ್ಕು ವರ್ಷಗಳಾಗಿವೆ. ಯೋಜನೆ ಪೂರ್ಣಗೊಳಿಸದಿದ್ದರೆ ಆ ಕಾಲುವೆಗಳೂ ಹಾಳಾಗಿ ಹೋಗಲಿವೆ. ಕನಿಷ್ಛ ರೂ. 20,000 ಕೋಟಿ ನೀಡಬಹುದು ಎಂಬ ನಿರೀಕ್ಷೆ ಇತ್ತು. ಪ್ರತಿವರ್ಷ ಈ ಯೋಜನೆಯ ನಿರ್ಲಕ್ಷ್ಯದಿಂದಾಗಿ ರೂ. 10 ಸಾವಿರ ಕೋಟಿ ರೂ ಯೋಜನಾ ವೆಚ್ಚ ಈಗ ರೂ. 50,000 ತಲುಪಿದೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಒತ್ತಾಯ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಈ ವಿಷಯವನ್ನು ಬಿಡಲು ಆಗಲ್ಲ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ವಿಚಾರದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಇದೇ ಪರಿಸ್ಥಿತಿ ಉದ್ಭವವಾಗಿದೆ. ಜಲಸಂಪನ್ಮೂಲ ಸಚಿವರು, ಇಬ್ಬರೂ ಡಿಸಿಎಂ ಗಳು ಇದೇ ಭಾಗದವರಾಗಿದ್ದರೂ ಪ್ರಸ್ತಾಪವಾಗದಿರುವುದು ಸರಿಯಲ್ಲ. ಈಗಾಗಲೇ ಬಜೆಟ್ ಭಾಷಣ ಮುಗಿದ ಬಳಿಕ ಡಿಸಿಎಂ ಗೋವಿಂದ ಕಾರಜೋಳ, ಶಾಸಕರಾದ ಸೋಮನಗೌಡ ಬಿ.ಪಾಟೀಲ, ಹಾಲಪ್ಪ ಆಚಾರ ಭೇಟಿಯಾಗಿ ಹೇಳಿದ್ದೇವೆ.  ಮುಂದೆ ನಾಲ್ಕು ಜಿಲ್ಲೆಗಳ ಶಾಸಕರು ಸೇರಿ ಸಿಎಂ ಭೇಟಿ ಮಾಡುತ್ತೇವೆ. ರಾಜಕೀಯ ಜೀವನ ಆರಂಭದಿಂದಲೂ ನಾನು ನೀರಾವರಿ ಯೋಜನೆಗಳ ಪರವಾಗಿ ಸ್ವಪಕ್ಷದ ವಿರುದ್ಧವೇ ಹೋರಾಟ ಮಾಡಿದ್ದೇನೆ. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆಗೆ ಸಿಎಂ ಹಣ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ಎ.ಎಸ್. ಪಾಟೀಲ ನಡಹಳ್ಳಿ ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಹೀಗಾಗಿ ಬಜೆಟ್ ಮೇಲಿನ ಚರ್ಚೆಯಲ್ಲಿ ಸಿಎಂ ಉತ್ತರ ಕರ್ನಾಟಕ ಪ್ರಮುಖ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಏನು ಹೇಳುತ್ತಾರೆ? ಯಾವ ಭರವಸೆ ನೀಡುತ್ತಾರೆ? ಎಷ್ಟು ಹಣ ಮೀಸಲಿಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ವರದಿ: ಮಹೇಶ ವಿ. ಶಟಗಾರ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: