2023-24ನೇ ರಾಜ್ಯ ಬಜೆಟ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ (Chief Minister Basavaraj Bommai) ಮೀನುಗಾರಿಕೆ ಕ್ಷೇತ್ರಕ್ಕೆ (Fisheries Department Karnataka) ಬಜೆಟ್ ನಲ್ಲಿ ಭರ್ಜರಿ ಕೊಡುಗೆ ನೀಡಿದೆ. ವಿವಿಧ ಯೋಜನೆಗಳ ಮೂಲಕ ಮೀನುಗಾರರ ಕೈ ಹಿಡಿದಿದೆ. ಮೀನುಗಾರರ ದೋಣಿಗಳಿಗಾಗಿ ರಿಯಾಯಿತಿ ನೀಡುತ್ತಿರುವ ಡೀಸೆಲ್‌ನ ಮಿತಿಯನ್ನು ಸದ್ಯದ 1.5 ಲಕ್ಷ ಲೀಟರ್‌ಗಳಿಂದ 2 ಲಕ್ಷ ಹೆಚ್ಚಿಸಲಾಗುವುದು. ಇದರಿಂದ ಕಿಲೋ ದರದಲ್ಲಿ ಲೀಟರ್‌ಗಳವರೆಗೆ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂ.ಗಳ ನೆರವು ಸಿಗಲಿದೆ.
ಮೀನುಗಾರರಿಗೆ ನೀಡುತ್ತಿರುವ ಸೀಮೆ ಎಣ್ಣೆ ಸಹಾಯಧನದ ಪ್ರಕ್ರಿಯೆಯನ್ನು ಸರಳೀಕರಿಸಿ ಮುಖಾಂತರ ಮಾಡಲಾಗುವುದು. ನೇರವಾಗಿ ಪ್ರಸಕ್ತ ಮೀನುಗಾರರ ಸಾಲಿನಿಂದ ಖಾತೆಗೆ ಜಮೆ ಮಾಡಲಾಗುವುದು.
ಮೀನುಗಾರರಿಗೆ 5,000 ಮನೆಗಳ ನಿರ್ಮಾಣ
ಮೀನುಗಾರರಿಗೆ ವಸತಿ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಿರುವ ಸರ್ಕಾರ ಕಳೆದ ವರ್ಷ ವಸತಿ ರಹಿತ ಮೀನುಗಾರರಿಗೆ 5,000 ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದೆ. ಪ್ರಸಕ್ತ ಸಾಲಿನಲ್ಲಿ 10,000 ವಸತಿರಹಿತ ಮೀನುಗಾರರಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು.
ಇದನ್ನೂ ಓದಿ: Karnataka Budget 2023 Live Updates
ಮತ್ಸ ಸಿರಿ ಯೋಜನೆ ಪರಿಚಯ
ಆಳಸಮುದ್ರ ಮೀನುಗಾರಿಕೆಯನ್ನು ಇನ್ನಷ್ಟು ಉತ್ತೇಜಿಸಲು 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ (Deep sea fishing boats) ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ, ಮತ್ಸ ಸಿರಿ ಎಂಬ ವಿಶೇಷ ಯೋಜನೆಯನ್ನು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರೂಪಿಸಲಾಗಿದೆ. ಆಯ್ಕೆಯಾದ ಎಲ್ಲಾ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ದೋಣಿ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ.
ರಾಜ್ಯಕ್ಕೆ 3ನೇ ಸ್ಥಾನದ ಹಿರಿಮೆ
ಸೀಗಡಿ ಉತ್ಪನ್ನಗಳ ರಫ್ತು ಪ್ರೋತ್ಸಾಹಿಸಲು ಕೇಂದ್ರ ಆಯವ್ಯಯದಲ್ಲಿ ರಫ್ತು ಸುಂಕವನ್ನು ಕಡಿಮೆ ಮಾಡಲಾಗಿದೆ. 2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯವನ್ನು ಅತ್ಯುತ್ತಮ ಕರಾವಳಿ ರಾಜ್ಯವೆಂದು ಗುರುತಿಸಿ ಕೇಂದ್ರ ಸರ್ಕಾರವು ಘೋಷಿಸಿದೆ. ಕಳೆದ ಸಾಲಿನಲ್ಲಿ 10.73 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆಯನ್ನು ಮಾಡಿ ದೇಶದಲ್ಲಿ ರಾಜ್ಯವು 3ನೇ ಸ್ಥಾನದಲ್ಲಿದೆ.
20 ಕೋಟಿ ರೂ. ಅನುದಾನ
ಮೀನುಗಾರರಿಗೆ ನೆರವಾಗಲು FFPO ಗಳ ಸ್ಥಾಪನೆ ಹಾಗೂ 12,175 ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗಿದೆ. ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಉತ್ತಮ ಪಡಿಸಲು ಕರಾವಳಿ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಡಿ ಕೃತಕ ಬಂಡೆ ಸಾಲುಗಳನ್ನು (Artificial Reef) ಸ್ಥಾಪಿಸಲಾಗುವುದು.. ಉತ್ತಮ ತಳಿಯ ಬಲಿತ ಬಿತ್ತನೆ ಮೀನು ಮರಿಗಳ ದಾಸ್ತಾನು (Ranching) ಪ್ರೋತ್ಸಾಹಿಸಲು 20 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
ಉತ್ತರ ಕರ್ನಾಟಕ ಭಾಗದಲ್ಲೂ ಮೀನು ಕೃಷಿಗೆ ಉತ್ತೇಜನ
ಉತ್ತರ ಕರ್ನಾಟಕ ಭಾಗದಲ್ಲಿ ಮೀನು ಕೃಷಿಯನ್ನು ಉತ್ತೇಜಿಸಲು ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರಿಗೆ ಗುಣಮಟ್ಟದ ಮೀನು ಉತ್ಪನ್ನಗಳನ್ನು ಪೂರೈಸಲು ಪರಿಸರಸ್ನೇಹಿ ತ್ರಿಚಕ್ರ ಮೀನು ಮಾರಾಟ ವಾಹನಗಳನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಒದಗಿಸಲಾಗುವುದು.
ದೋಣಿಗಳ ಪತ್ತೆಗೆ ಅನುದಾನ
ಮೀನುಗಾರರ ಹಾಗೂ ಅವರ ದೋಣಿಗಳ ಸುರಕ್ಷತೆಗಾಗಿ 17 ಕೋಟಿ ರೂ. ಗಳ ಅನುದಾನದಲ್ಲಿ ISRO ಅಭಿವೃದ್ಧಿಪಡಿಸಿರುವ GPS ಸಂವಹನ ವ್ಯವಸ್ಥೆಯನ್ನು ಎಲ್ಲಾ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಲ್ಲಿ ಅಳವಡಿಸಲಾಗುವುದು. ಇದರಿಂದ ಆಳ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ದೋಣಿಗಳನ್ನು ಪತ್ತೆ ಹಚ್ಚಲು ಅನುಕೂಲವಾಗಲಿದೆ.
2 ವರ್ಷ ಸೀಮೆಎಣ್ಣೆ ಸಹಾಯಧನ
ಸೀಮೆಎಣ್ಣೆ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯ ಮತ್ತು ಅದರ ಬೆಲೆಯ ಏರಿಳಿತದಿಂದ ದೋಣಿಗಾರರಿಗೆ ಉಂಟಾಗುವ ಆರ್ಥಿಕ ಸಂಕಷ್ಟವನ್ನು ತಪ್ಪಿಸಲು ಮುಂದಿನ 2 ವರ್ಷಗಳಲ್ಲಿ ಎಲ್ಲಾ ಸೀಮೆಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್/ಡೀಸೆಲ್ ಆಧಾರಿತ ಮೋಟಾ ಇಂಜಿನ್ ಅನ್ನು ಅಳವಡಿಸಲು ತಲಾ 50 ಸಾವಿರ ರೂ. ನಂತೆ ಸಹಾಯಧನ ನೀಡಲಾಗುವುದು. ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ 40 ಕೋಟಿ ರೂ. ಗಳನ್ನು ಮೀಸಲಿಡಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂದಿನ 2 ವರ್ಷಗಳ ಅವಧಿಗೆ ಸೀಮೆಎಣ್ಣೆ ಸಹಾಯಧನ ಮುಂದುವರೆಸಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ