ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಇಂದು ತಮ್ಮ ಎರಡನೇ ಬಜೆಟ್ (Bommai Budget 2023) ಮಂಡನೆ ಮಾಡಲಿದ್ದಾರೆ. ವಿಧಾನಸಭಾ ಚುನಾವಣೆ (Assembly Election 2023) ಹೊಸ್ತಿನಲ್ಲಿರುವ ಈ ವೇಳೆ ಇಡೀ ರಾಜ್ಯದ ಚಿತ್ತ ಬಜೆಟ್ನತ್ತಿದೆ. ಚುನಾವಣೆ ಇರೋದರಿಂದ ಇದೊಂದು ಜನಪ್ರಿಯ ಬಜೆಟ್ ಆಗಿರಲಿದೆ ಎಂಬುವುದು ಬಹುತೇಕರ ಲೆಕ್ಕಾಚಾರ ಆಗಿದೆ. ಇಂದು ಬೆಳಗ್ಗೆ 10.15ಕ್ಕೆ ಸಿಎಂ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ (Budget 2023-24) ಘೋಷಣೆ ಪ್ರಕ್ರಿಯೆ ಪ್ರಾರಂಭಿಸಲಿದ್ದಾರೆ. ಇಂದಿನ ಬಜೆಟ್ ಗಾತ್ರ 3 ಲಕ್ಷ ಕೋಟಿಗೂ ಅಧಿಕ ಇರಲಿದೆ ಎನ್ನಲಾಗಿದೆ. ಈ ಬಾರಿ ಗುರಿ ಮೀರಿದ ಆದಾಯ ಸಂಗ್ರಹ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹೊರೆ ಇಲ್ಲದ ಚುನಾವಣೆ ಬಜೆಟ್ ಮಂಡನೆ ಆಗುವ ಸಾಧ್ಯತೆಗಳಿವೆ.
ಕಳೆದ ವರ್ಷ ₹5 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ಆದಾಯ ಕೊರತೆಯಿತ್ತು. ಈ ಬಾರಿ ಈವರೆಗೆ ಬಜೆಟ್ ಗುರಿಗಿಂತ 13 ಸಾವಿರ ಕೋಟಿ ಅಧಿಕವಾಗಿ ಆದಾಯ ಸಂಗ್ರಹವಾಗಿದೆ. 2022-23 ಸಾಲಿನಲ್ಲಿ ಒಟ್ಟು ₹1,89,887.54 ಕೋಟಿ ರಾಜಸ್ವ ಜಮೆಯ ಅಂದಾಜು ಮಾಡಲಾಗಿದೆ. ಹಣಕಾಸಿನ ಸಂಗ್ರಹ ಉತ್ತಮವಾಗಿದ್ದು ಪರಿಷ್ಕೃತ ರಾಜಸ್ವ ಜಮೆ ಅಂದಾಜು ಮಾರ್ಚ್ ಅಂತ್ಯಕ್ಕೆ ಗುರಿ ಮೀರಲಿದೆ.
ಜನಪ್ರಿಯ ಘೋಷಣೆ ನಿರೀಕ್ಷೆ!
ಈ ಬಾರಿಯ ಬಜೆಟ್ನಲ್ಲಿ ಬಡವರಿಗೆ, ಮಹಿಳೆಯರಿಗೆ ಹಾಗೂ ರೈತರಿಗೆ ಹೊಸ ಯೋಜನೆಗಳನ್ನು ಘೋಷಿಸಲು ಸಿಎಂ ಬೊಮ್ಮಾಯಿ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕುಲಕಸುಬು ಮಾಡಲು ಇಚ್ಚಿಸುವವರಿಗೆ ₹50,000 ಆರ್ಥಿಕ ಸಹಾಯ ನೀಡಲು ಸಿಎಂ ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ.
ರೈತರು, ಕಾರ್ಮಿಕರು, ಮಹಿಳೆಯರು ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಜನಪ್ರಿಯ ಯೋಜನೆ ಘೋಷಣೆ ಸಾಧ್ಯತೆಗಳಿವೆ.
ಸ್ತ್ರೀ ಶಕ್ತಿ ವಿಶೇಷ ಯೋಜನೆ: ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ದುಡಿಯುವ ವರ್ಗಕ್ಕೆ ಸಹಾಯ ಮಾಡುವ ಉದ್ದೇಶದಿಂದ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಯೋಜನೆಗಳ ರೂಪುರೇಷೆ ಸಾಧ್ಯತೆಗಳಿವೆ. ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಕನಿಷ್ಠ ಮನೆ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ಸಾಧ್ಯತೆ ಇದೆ.
ರೈತರಿಗೆ ಬಂಪರ್ ಕೊಡುಗೆ:
ಚುನಾವಣೆ ಹೊಸ್ತಿಲಲ್ಲಿ ಸಿಎಂ ಬೊಮ್ಮಾಯಿ ರೈತರನ್ನು ಕೇಂದ್ರೀಕರಿಸಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಬಾರಿ ತಮ್ಮ ಆಯವ್ಯಯದಲ್ಲಿ ಹೊಸ ಕೃಷಿ ನೀತಿ ಘೋಷಿಸುವ ಸಾಧ್ಯತೆಗಳು ದಟ್ಟವಾಗಿವೆ.
ಬೊಮ್ಮಾಯಿ ಬಜೆಟ್ ಸರ್ಪ್ರೈಸ್ ಏನಿರಲಿದೆ?
*25 ತಾಲ್ಲೂಕುಗಳಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಸಾಧ್ಯತೆ
*ಅಡಿಕೆ ರೋಗ ತಡೆಯುವಿಕೆಗೆ ಬಜೆಟ್ನಲ್ಲಿ ವಿಶೇಷ ಅನುದಾನ ಸಾಧ್ಯತೆ
*ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವ ಸಾಧ್ಯತೆ
*ದಿವಂಗತ ಪುನೀತ್ ರಾಜಕುಮಾರ್ ಅವರ ಸಮಾಧಿಯಲ್ಲಿ ಅದ್ಭುತ ಸ್ಮಾರಕ ಸ್ಥಾಪನೆ ಬಗ್ಗೆ ಘೋಷಣೆ ಸಾಧ್ಯತೆ
*ಬೆಂಗಳೂರು ನಗರದಲ್ಲಿ ಸಮಗ್ರವಾಗಿ ರಾಜಕಾಲುವೆ ಪುನರ್ನಿಮಾಣ ಮಾಡಲು ಐಐಎಸ್ಸಿ ಸೇರಿದಂತೆ ಇತರೆ ವರದಿಗಳನ್ನು ಆಧರಿಸಿ ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯನ್ನು ಸುಧಾರಣೆಗಾಗಿ ವಿಶೇಷವಾದ ಮಾಸ್ಟರ್ ಪ್ಲಾನ್ ಪ್ರಕಟಿಸುವ ಸಾಧ್ಯತೆಗಳಿವೆ.
*ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಬಜೆಟ್ನಲ್ಲಿ ಅನುದಾನದ ಜೊತೆಗೆ ನಿವೃತ್ತ ಪತ್ರಕರ್ತರಿಗೆ ಮಾಸಾಶನವನ್ನು ಹೆಚ್ಚಳ ಸಾಧ್ಯತೆ.
*ವೃತ್ತಿ ಆಧಾರಿತವಾದ ಕುಲಕಸುಬುಗಳ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ
*ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಪದ್ಧತಿಯ ಗೋದಾಮುಗಳ ನಿರ್ಮಾಣ ಘೋಷಣೆ ಸಾಧ್ಯತೆ
*ಆಯವ್ಯಯದಲ್ಲಿ ವಿಕಲಚೇತನರಿಗೆ ವಿವಿಧ ಕಾರ್ಯಕ್ರಮಗಳ ಘೋಷಣೆ ಸಾಧ್ಯತೆ
*ವಿವಿಧ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಾಣ ಘೋಷಣೆ ಸಾಧ್ಯತೆ
*ಕರಾವಳಿ ಭಾಗದ ಚಟುವಟಿಕೆ, ಬಂದರುಗಳ ಅಭಿವೃದ್ಧಿ, ಮೂಲ ಉದ್ಯೋಗಕ್ಕೆ ಇಂಬು ಕೊಡುವ, ಪ್ರವಾಸೋದ್ಯಮವನ್ನು ವಿಸ್ತರಿಸುವ ದೊಡ್ಡ
ಕಾರ್ಯಕ್ರಮ ಘೋಷಣೆ ಸಾಧ್ಯತೆ
*ಬೆಂಗಳೂರು ಮೂಲಭೂತಸೌಕರ್ಯ ಅಭಿವೃದ್ಧಿಗಾಗಿ ಬಂಪರ್ ಕೊಡುಗೆ ಸಾಧ್ಯತೆ
*ಬಜೆಟ್ ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ವಿಶೇಷವಾದ ಒತ್ತು, ಹಣಕಾಸಿನ ನೆರವು ಸಾಧ್ಯತೆ
*ನೇಕಾರರಿಗೆ ಇನ್ನಷ್ಟು ಬೆಂಬಲ ನೀಡಲು, ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿಯವರಿಗೆ ಸಹಾಯ ಸಾಧ್ಯತೆ
*ಎಲ್ಲಾ ಸಮಾಜದ ಮಠ, ದಲಿತ ಮಠ, ಹಿಂದುಳಿದ ವರ್ಗಗಳ ಮಠಗಳಿಗೆ ಹೆಚ್ಚಿನ ಅನುದಾನ ಘೋಷಣೆ ಸಾಧ್ಯತೆ.
*ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಯೋಜನೆ, ಏತ ನೀರವಾರಿಗಳಿಗೆ ಹೆಚ್ಚಿನ ಅನುದಾನ ಘೋಷಣೆ
*ವಿದ್ಯುತ್ ವಾಹನ ಖರೀದಿದಾರರಿಗೆ ತೆರಿಗೆ ವಿನಾಯಿತಿ, ಸಾರಿಗೆ ಇಲಾಖೆಗೆ ವಿದ್ಯುತ್ ಚಾಲಿತ ಬಸ್ ಗಳ ಖರೀದಿಗೆ ಅನುದಾನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ