ಬೆಂಗಳೂರು (ಫೆ.17): ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj Bommai) ಅವರು ಈ ಬಾರಿಯ ಬಜೆಟ್ನಲ್ಲಿ(Karnataka Budget-2023) ಹಲವು ಹೊಸ ಘೋಷಣೆಗಳನ್ನು ಮಾಡಿದ್ದಾರೆ. ಜೊತೆಗೆ ಎಲ್ಲಾ ಕ್ಷೇತ್ರಗಳಿಗೂ ಬಂಪರ್ ಅನುದಾನವನ್ನೂ ನೀಡಿದ್ದಾರೆ. ಕರ್ನಾಟಕ ಬಜೆಟ್ 2023 ರಲ್ಲಿ ಸಿಎಂ ಬೊಮ್ಮಾಯಿ ಹೊಸ ಯೋಜನೆಗಳನ್ನು ಪರಿಚಯಿಸಿದ್ದಾರೆ. ಶಿಕ್ಷಣ ಕ್ಷೇತ್ರ, ಕೃಷಿ ಕ್ಷೇತ್ರದಲ್ಲಿ ಹಾಗೂ ಗ್ರಾಮೀಣ ಭಾಗಕ್ಕೆ, ಮಹಿಳೆಯರಿಗೆ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳ ಬಗ್ಗೆ ವಿವರ ಈ ಕೆಳಕಂಡಂತಿದೆ.
ಸಿಎಂ ಬೊಮ್ಮಾಯಿ ಲೆಕ್ಕದ ಹೊಸ ಯೋಜನೆಗಳು
1. ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ
ಉನ್ನತ ಶಿಕ್ಷಣ ಹೊಂದಲು ಅನುಕೂಲವಾಗುವಂತೆ 'ಮುಖ್ಯಮಂತ್ರಿ ವಿದ್ಯಾಶಕ್ತಿ' ಎಂಬ ಯೋಜನೆ ಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ಸರ್ಕಾರಿ ಪದವಿ ಪೂರ್ವ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯತಿ ನೀಡಲಾಗುತ್ತದೆ. ಈ ಯೋಜನೆಯಿಂದ 8 ಲಕ್ಷ ವಿದ್ಯಾರ್ಥಿಗಳು ಅನುಕೂಲ ಪಡೆಯಲಿದ್ದಾರೆ.
2. ಮಕ್ಕಳ ಬಸ್ ಯೋಜನೆ
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಯೋಜನೆಯನ್ನು ಘೋಷಿಸಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಕ್ಕಳ ಬಸ್ಸು ಎಂಬ ಹೊಸ ಯೋಜನೆಯನ್ನು ಜಾರಿ ಮಾಡಲಾಗುತ್ತದೆ. ಸಾರಿಗೆ ನಿಗಮಗಳ ಮೂಲಕ 100 ಕೋಟಿ ರೂ ವೆಚ್ಚದಲ್ಲಿ 1000 ಹೊಸ ಬಸ್ಸುಗಳ ಕಾರ್ಯಾಚರಣೆ ಶುರುವಾಗಲಿದೆ. ಈಗಾಗಲೇ 19 ಲಕ್ಷ ವಿದ್ಯಾರ್ಥಿಗಳೊಂದಿಗೆ ಹೆಚ್ಚುವರಿಯಾಗಿ 2 ಲಕ್ಷ ಹೊಸ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
3. ಭೂಸಿರಿ ಹೊಸ ಯೋಜನೆ
ಸಿಎಂ ಬೊಮ್ಮಾಯಿ ಅವರು ಕೃಷಿ ಕ್ಷೇತ್ರಕ್ಕೂ ಬಂಪರ್ ಕೊಡುಗೆ ನೀಡಿದ್ದಾರೆ. ರೈತಾಪಿ ವರ್ಗಕ್ಕೆ ಅನುಕೂಲವಾಗುವಂತೆ ಮಹತ್ತರ ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಭೂಸಿರಿ ಹೊಸ ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವರಿಗೆ 10 ಸಾವಿರ ಹೆಚ್ಚುವರಿ ಸಹಾಯ ಧನ ಸಿಗಲಿದೆ.
4. ಹಳ್ಳಿ ಮುತ್ತು ಎಂಬ ಯೋಜನೆ
ಹಳ್ಳಿ ಮುತ್ತು ಯೋಜನೆಯಡಿ ಕನ್ನಡ ಸರ್ಕಾರಿ ಶಾಲೆಗಳಲ್ಲಿ ಓದಿದ, ಸಿಇಟಿ ಮೂಲಕ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ವೃತಿಪರ ಕೋರ್ಸ್ ಗಳಿಗೆ ಸಂಪೂರ್ಣ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಅತ್ಯುತ್ತಮ 500 ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯವಾಗಲಿದೆ.
5. ವಾತ್ಸಲ್ಯ ಯೋಜನೆ
ಗ್ರಾಮೀಣ ಪ್ರದೇಶದ 6 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೆ ಎರಡು ಉಚಿತ ಆರೋಗ್ಯ ತಪಾಸಣೆಗಳನ್ನು ಮಾಡುವ ಗುರಿ ಹೊಂದಲಾಗಿದೆ. ಹೀಗಾಗಿ ಸರ್ಕಾರವು ವಾತ್ಸಲ್ಯ ಯೋಜನೆಯನ್ನು ಪರಿಚಯಿಸಿದೆ.
ಬಜೆಟ್ ಕುರಿತಾದ ಲೈವ್ ಅಪ್ಡೇಟ್ಸ್ಗೆ ಇಲ್ಲಿ ಕ್ಲಿಕ್ ಮಾಡಿ.
6. ಗೃಹಿಣಿ ಶಕ್ತಿ ಯೋಜನೆ
ಗೃಹಿಣಿ ಶಕ್ತಿ ಯೋಜನೆಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 500 ರೂ. ವಿತರಣೆ ಮಾಡಲಾಗುತ್ತದೆ. ಹೀಗಾಗಿ ಗೃಹಿಣಿ ಶಕ್ತಿ ಯೋಜನೆಯನ್ನು ಪರಿಚಯಿಸಲಾಗಿದೆ. 1 ಲಕ್ಷ ಗೃಹಿಣಿಯರಿಗೆ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತದೆ. ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಉಚಿಯ ಬಸ್ ಪಾಸ್ ನೀಡಲಾಗುತ್ತದೆ. ಹೀಗಾಗಿ 1000 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಜೊತೆಗೆ ಶಾಲಾ ಕಾಲೇಜು ವಿಧ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ.
7. ನಮ್ಮ ನೆಲೆ ಯೋಜನೆ
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆರ್ಥಿಕ ದುರ್ಬಲ ವರ್ಗದವರಿಗೂ ವಿಶೇಷ ಅನುದಾನ ನೀಡಿದ್ದಾರೆ. ಗೃಹಮಂಡಳಿಯಿಂದ ಆರ್ಥಿಕ ದುರ್ಬಲ ವರ್ಗದವರಿಗೆ(EWS)10 ಸಾವಿರ ನಿವೇಶನ ನೀಡಲಾಗುತ್ತದೆ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ. ನಮ್ಮ ನೆಲೆ ಯೋಜನೆಯಡಿಯಲ್ಲಿ ಫಲಾನುಭವಿಗಳು ಈ ಅನುಕೂಲ ಪಡೆಯಲಿದ್ದಾರೆ.
8. ಕಲಿಕೆ ಜೊತೆಗೆ ಕೌಶಲ್ಯ
ವಿದ್ಯಾರ್ಥಿಗಳಿಗೆ ಕಲಿಕೆ ಜೊತೆಗೆ ಕೌಶಲ್ಯವನ್ನು ಸಹ ಕಲಿಸಲು ಬೊಮ್ಮಾಯಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕೈಗಾರಿಕಾ ಆದ್ಯತಾ ಹಾಗೂ ಉದ್ಯಮಶೀಲ ತರಬೇತಿ ನೀಡಲಾಗುತ್ತದೆ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ