ಬೆಂಗಳೂರು: ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ತಮ್ಮ ಎರಡನೇ ಬಜೆಟ್ ಮಂಡನೆ ಮಾಡುತ್ತಿದ್ದು, ಆಶಾ ಕಾರ್ಯಕರ್ತೆಯರ (Asha Workers) ಗೌರವಧನ ಹೆಚ್ಚಳ ಮಾಡೋದಾಗಿ ಘೋಷಣೆ ಮಾಡಿದರು. ಸಮಾಜದ ಏಳಿಗೆಗಾಗಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಕಿಕತೆ ವಲಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು, ಆಶಾ ಕಾರ್ಯಕರ್ತೆಯರು ಹಾಗೂ ಸಹಾಯಕರು, ಬಿಸಿಯೂಟ ತಯಾರಕರು ಹಾಗೂ ಸಹಾಯಕರು ಮತ್ತು ಗ್ರಂಥಪಾಲಕರ ಸೇವೆಯನ್ನ ಗುರುತಿಸಿ ಅವರಿಗೆ ನೀಡುವ ಮಾಸಿಕ ಗೌರವಧನ 1000 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದರು.
ರಾಜ್ಯದ 10.32 ಲಕ್ಷ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ 725 ಕೋಟಿ ರೂಪಾಯಿ ಮೊತ್ತವನ್ನು ಬಜೆಟ್ನಲ್ಲಿ ನೀಡಲಾಗಿದೆ. 2022-23ನೇ ಸಾಲಿನಲ್ಲಿ ಈ ಸೌಲಭ್ಯವನ್ನು ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಯೆಲ್ಲೋ ಬೋರ್ಡ್ ಚಾಲಕರು ಹಾಗೂ ಆಟೋರಿಕ್ಷಾ ಚಾಲಕರ ಮಕ್ಕಳಿಗೆ ವಿಸ್ತರಿಸಲಾಗಿದೆ.
ಹೆಚ್ಚುವರಿಯಾಗಿ 3 ಲಕ್ಷ ವಿದ್ಯಾರ್ಥಿಗಳಿಗೆ 141 ಕೋಟಿ ರೂಪಾಯಿ ಮೊತ್ತವನ್ನು ನೀಡಲಾಗಿದೆ. ಪ್ರಸಕ್ತ ಈ ವರ್ಷದಲ್ಲಿ ಯೋಜನೆಯನ್ನು ರಾಜ್ಯದ ಸಿಂಪಗರ ಮಕ್ಕಳಿಗೂ ವಿಸ್ತರಣೆ ಮಾಡಲಾಗಿದಎ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.
ಸಿದ್ದರಾಮಯ್ಯ ವ್ಯಂಗ್ಯಕ್ಕೆ ಸಿಎಂ ಟಾಂಗ್
ಬಜೆಟ್ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಸದಸ್ಯರು ಗದ್ದಲ ಗಲಾಟೆ ಆರಂಭಿಸಿದ್ರು. ಕಿವಿಗೆ ಹೂವಿಟ್ಟುಕೊಂಡು ಬಂದ ಸಿದ್ದರಾಮಯ್ಯ ವ್ಯಂಗ್ಯಕ್ಕೆ ಸಿಎಂ ಟಾಂಗ್ ಕೊಟ್ರು. ಇಷ್ಟು ದಿನ ವಿಪಕ್ಷಗಳು ಜನರ ಕಿವಿಗೆ ಹೂವು ಇಡ್ತಿದ್ವು. ಆದ್ರೆ, ಚುನಾವಣೆಯಲ್ಲಿ ಜನರು ಕಾಂಗ್ರೆಸ್ಸಿಗರ ಕಿವಿಗೆ ಹೂವಿಡುತ್ತಾರೆ ಎಂದರು.
ಇನ್ನು ಈ ಬಾರಿ ಬಜೆಟ್ನಿಂದ ಎಲ್ಲರ ಕಿವಿಗೂ ಬಿಜೆಪಿ ಸರ್ಕಾರ ಹೂವಿಟ್ಟಿದೆ ಅಂತ ಕಾಂಗ್ರೆಸ್ ಟ್ವೀಟ್ ಮಾಡಿದೆ. ಕೇಂದ್ರದಿಂದ ರಾಜ್ಯದವರೆಗೂ ಬಿಜೆಪಿ ಮೊದಲಿಂದಲೂ ಜನರ ಕಿವಿ ಮೇಲೆ ಹೂವಿಡುತ್ತಲೇ ಬಂದಿದೆ ಅಂತ ಟಾಂಗ್ ಕೊಟ್ಟಿದೆ.
ಕಾಂಗ್ರೆಸ್ ನಡೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನವ್ರು ಹೀಗೆ ಮಾಡಬಾರದಿತ್ತು ಎಂದಿದ್ದಾರೆ.
ನೀರಾವರಿ ಕ್ಷೇತ್ರಕ್ಕೆ 25 ಸಾವಿರ ಕೋಟಿ ಅನುದಾನ
ರಾಜ್ಯ ಬಹಳ ಪ್ರಮುಖವಾದ ಕಳಸ ಬಂಡೂರಿ, ಎತ್ತಿನಹೊಳೆ, ಕೆ.ಸಿ ವ್ಯಾಲಿ ಯೋಜನೆಗಳಿಗೆ ಅನುದಾನ ನೀಡಲಾಗಿದೆ. ಬೊಮ್ಮಾಯಿ ಬಜೆಟ್ನಲ್ಲಿ ನೀರಾವರಿ ಅಭಿವೃದ್ಧಿಗಾಗಿ 2022-23 ನೀರಾವರಿ (Irrigation) ಕ್ಷೇತ್ರಕ್ಕೆ ಒಟ್ಟಾರೆ 25,000 ಕೋಟಿ ರೂ. ಗಳ ಅನುದಾನ ನೀಡಿದ್ದಾರೆ. ಈ ವರ್ಷ 1.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಗುರಿಯನ್ನು ವ್ಯಕ್ತಪಡಿಸಿದೆ.
ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ಮೂರನೇ ಹಂತಕ್ಕೆ ಈ ಬಾರಿಯ ಬಜೆಟ್ನಲ್ಲಿ 5000 ಕೋಟಿ ರೂ ಅನುದಾನ ಘೋಷಣೆ ಮಾಡಲಾಗಿದೆ. ಈ ಯೋಜನೆಯಡಿ ಭೂಸ್ವಾದೀನಕ್ಕೆ ಏಕರೂಪ ದರ ನಿಗದಿಪಡಿಸುವ ಸಂಬಂಧದಲ್ಲಿ ಒಪ್ಪಂದದ ತೀರ್ಪನ್ನು ರಚಿಸುವ ಕುರಿತು ಪ್ರಸಕ್ತ ಸರ್ಕಾರ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆ. ಇದರಿಂದ ರೈತರು ಭೂಮಾಲೀಕರಿಗೆ ಶೀಘ್ರ ಭೂಪರಿಹಾರ ದೊರಕಲಿದೆ ಎಂದರು.
ಇದನ್ನೂ ಓದಿ: Karnataka Budget 2023 Live Updates: ಚುನಾವಣೆಗೆ ದಿನಗಣನೆ, ಜನಸ್ನೇಹಿ ಬಜೆಟ್ ಘೋಷಣೆಯ ನಿರೀಕ್ಷೆ
ಕಳಸಾ ಬಂಡೂರಿ ಯೋಜನೆಗೆ 1000 ಕೋಟಿ ಅನುದಾನ
ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗಳಿಗೆ ಮಹದಾಯಿ ನ್ಯಾಯಾಧೀಕರಣದಿಂದ ಹಂಚಿಕೆಯಾಗಿರುವ 3.90 ಟಿಎಂಸಿ ನೀರಿನ ಬಳಕೆಗಾಗಿ ಕೇಂದ್ರ ಜಲ ಆಯೋಗದಿಂದ ಅನುಮೋದನೆ ಸಿಕ್ಕಿದೆ. ಈ ಯೋಜನೆಯ ಕಾಮಗಾರಿ ಪ್ರಾರಂಭಿಸಿಲು 1000 ಕೋಟಿ ರೂ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ