• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Budget 2023: ರಾಜ್ಯ ಬಜೆಟ್​ ಕುರಿತಂತೆ ಮಾಜಿ ಸಿಎಂಗಳಾದ ಬಿಎಸ್​​ವೈ, ಸಿದ್ದು, ಹೆಚ್​​ಡಿಕೆ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Budget 2023: ರಾಜ್ಯ ಬಜೆಟ್​ ಕುರಿತಂತೆ ಮಾಜಿ ಸಿಎಂಗಳಾದ ಬಿಎಸ್​​ವೈ, ಸಿದ್ದು, ಹೆಚ್​​ಡಿಕೆ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ ಬಜೆಟ್​ 2023-24

ಕರ್ನಾಟಕ ಬಜೆಟ್​ 2023-24

"ಎಷ್ಟಾದರೂ ಮಕ್ಕಳಾಗಲಿ ಅನ್ನುವಂತಿದೆ ಬೊಮ್ಮಾಯಿ ಬಜೆಟ್" -ಸಿದ್ದರಾಮಯ್ಯ "ರೈತರ ಆದಾಯ ದ್ವಿಗುಣಗೊಳಿಸುವ ಕ್ರಮಗಳು ರಾಜ್ಯ ಬಜೆಟ್​ನಲ್ಲಿದೆ" - ಬಿಎಸ್​ವೈ "ಬಜೆಟ್​ ಬಿಜೆಪಿ ಶಾಸಕರು, ಮಂತ್ರಿಗಳಿಗೆ ನಿರಾಸೆ ತಂದಿದೆ" -ಹೆಚ್​ಡಿಕೆ

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ (CM Basavaraj Boomai) ಅವರು ತಮ್ಮ ಎರಡನೇ, ಈಗಿನ ಬಿಜೆಪಿ ಸರ್ಕಾರ (BJP Government ) ಕೊನೆಯ ಬಜೆಟ್​​ಅನ್ನು ಮಂಡನೆ ಮಾಡಿದ್ದಾರೆ. ಬಜೆಟ್​ ಕುರಿತಂತೆ ಮಾಜಿ ಸಿಎಂಗಳಾದ ಬಿಎಸ್​​ ಯಡಿಯೂರಪ್ಪ (BS Yediyurappa), ಸಿದ್ದರಾಮಯ್ಯ (Siddaramaiah), ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯೆ ನೀಡಿದ್ದಾರೆ. ನಿರೀಕ್ಷೆಯಂತೆ ಬೊಮ್ಮಾಯಿ ಬಜೆಟ್​​ನಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗಳಿಗೆ ಎಂದು ಹೇಳಿ ಬಿಎಸ್​​ವೈ ಮೆಚ್ಚುಗೆ ಸೂಚಿಸಿದ್ದು, ಇತ್ತ ಹೆಚ್​​​ಡಿಕೆ ಹಾಗೂ ಸಿದ್ದು, ಬಜೆಟ್​​ ಕುರಿತಂತೆ ಟೀಕೆ ಮಾಡಿ ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.


ದುರ್ಬಲ ವರ್ಗ, ಮಹಿಳೆಯರ, ಯುವಜನರ ಶ್ರೇಯೋಭಿವೃದ್ಧಿಗೆ ಆದ್ಯತೆ


ರಾಜ್ಯ ಬಜೆಟ್​ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿಎಸ್​​​ವೈ, ರಾಜ್ಯದ ಆರ್ಥಿಕ ಸ್ಥಿತಿಯ ಉತ್ತಮ ನಿರ್ವಹಣೆಯ ಜೊತೆಗೆ ದೀರ್ಘಕಾಲಿನ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಇಂದು ಅತ್ಯುತ್ತಮವಾದ ಆಯವ್ಯಯ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಪಕ್ಷದ ಆಶಯದಂತೆ, ರೈತರ ಆದಾಯ ದ್ವಿಗುಣಗೊಳಿಸುವ ಕ್ರಮಗಳಿಗೆ, ದುರ್ಬಲ ವರ್ಗ, ಮಹಿಳೆಯರ, ಯುವಜನರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.


ಇದನ್ನೂ ಓದಿ: Karnataka Budget 2023: ಆ್ಯಸಿಡ್​ ದಾಳಿಗೆ ಒಳಗಾದವರಿಗೆ ₹10 ಸಾವಿರ ಮಾಸಾಶನ; ಸಿಎಂ ಬೊಮ್ಮಾಯಿಗೆ ಅಭಿನಂದನೆ ತಿಳಿಸಿದ ಸಂತ್ರಸ್ತೆ
ಜನ ಸಾಮಾನ್ಯರ ವಿರೋಧಿ, ಬಡವರ ವಿರೋಧಿ ಬಜೆಟ್; ಸಿದ್ದರಾಮಯ್ಯ


ಇತ್ತ, ರಾಜ್ಯ ಬಜೆಟ್​ ಮಂಡನೆಯಾಗುತ್ತಿದ್ದಂತೆ ಕಿವಿ ಮೇಲೆ ಹೂ ಇಟ್ಟುಕೊಂಡು ಸುದ್ದಿಗೋಷ್ಠಿ ನಡೆಸಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಇದು ಬಿಜೆಪಿ ಸರ್ಕಾರದ ಚುನಾವಣಾ ಮತ್ತು ಸರ್ಕಾರದ ನಿರ್ಗಮದ ಬಜೆಟ್. ಕಳೆದ ಬಜೆಟ್ ನಲ್ಲಿ ಏನೇನು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೋ ಅದರಲ್ಲಿ 57 ಕಾರ್ಯಕ್ರಮಗಳನ್ನು ಅನುಷ್ಠಾನವನ್ನೇ ಮಾಡಿಲ್ಲ. ಹಿಂದೆ 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಶೇಕಡಾ 90 ಭರವಸೆಗಳನ್ನು ಈಡೇರಿಸಿಲ್ಲ.


ನಾನು ಕೊನೆಯ ಬಜೆಟ್ ಮಂಡಿಸಿದಾಗ 5 ವರ್ಷದಲ್ಲಿ ಏನು ಮಾಡಿದ್ದೆ? ಮುಂದೆನೂ ಮಾಡುತ್ತೇನೆ ಎಂಬುದನ್ನು ಹೇಳಿದ್ದೆ. ಆದರೆ ಇವರು ಹಾಗೆ ಮಾಡಿಲ್ಲ. 'ಆಡದೆಲೆ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ಅಧಮ ತಾನಾಡಿಯೂ ಮಾಡದವನು' ಎಂಬ ಸರ್ವಜ್ಞರ ವಚನ ಈ ಸರ್ಕಾರಕ್ಕೆ ಬಹಳ ಅನ್ವಯವಾಗುತ್ತದೆ. ಜನರಿಗೆ ಸುಳ್ಳು ಭರವಸೆ ಕೊಟ್ಟು, ಅವರು ಕಲ್ಪನಾ ಲೋಕದಲ್ಲಿ ಇರುವಂತೆ ಮಾಡಿದ ಬಜೆಟ್ ಇದು ಎಂದು ಟೀಕಿಸಿದ್ದಾರೆ.


ಯದ್ವಾತದ್ವಾ ಸಾಲ ಮಾಡಿ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದ್ದಾರೆ


ನಾವು ಎಸ್​ಟಿ/ಎಸ್​​ಟಿ ಸಮುದಾಯಕ್ಕೆ ಎಸ್​​​ಎಸ್​ಪಿ, ಟಿಎಸ್​​ಪಿ ತಂದಿದ್ದೆವು. ಆ ಮೂಲಕ 36 ಸಾವಿರ ಕೋಟಿ ರೂಪಾಯಿ ಅದಕ್ಕೆ ಮೀಸಲಿಟ್ಟಿದ್ದೆವು. ಇವರ ಬಜೆಟ್ ಗಾತ್ರ 3 ಲಕ್ಷ ಕೋಟಿ ರೂಪಾಯಿ ಇದೆ. ಈಗಲೂ 30 ಸಾವಿರ ಕೋಟಿ ರೂಪಾಯಿಯನ್ನು ಕೊಟ್ಟಿಲ್ಲ. ಎಸ್​​​ಎಸ್​ಪಿ, ಟಿಎಸ್​​ಪಿ ಯೋಜನೆಗೆ ಕೊಟ್ಟಿಲ್ಲ. ಇವರು ಮಾಡಿರುವ ಸಾಲಕ್ಕೆ ಬಡ್ಡಿಯೇ ಹೆಚ್ಚು ಹೋಗುತ್ತದೆ. ಯದ್ವಾತದ್ವಾ ಸಾಲ ಮಾಡಿ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿಟ್ಟಿದ್ದಾರೆ. ಮುಂದಿನ ವರ್ಷ 77,750 ಕೋಟಿ ರೂ‌ಪಾಯಿ ಸಾಲ ಮಾಡುತ್ತೇವೆ ಎಂದು ಹೇಳಿದ್ದಾರೆ. ಸಾಲದ ಪ್ರಮಾಣ ಶೇಕಡಾ 95ರಷ್ಟು ಹೆಚ್ಚಾಗಿದೆ. ಹೀಗಿದ್ದಾಗ ಇದು ಅಭಿವೃದ್ಧಿ ಪರವಾದ ಬಜೆಟ್ ಹೇಗಾಗುತ್ತದೆ ಎಂದು ಪ್ರಶ್ನೆ ಮಾಡಿದರು.
ಕೇಂದ್ರಕ್ಕೆ ನಮ್ಮಿಂದ 4.75 ಲಕ್ಷ ಕೋಟಿ ರೂಪಾಯಿ ತೆರಿಗೆ ವಸೂಲಿ ಆಗುತ್ತಿದೆ


ಮಕ್ಕಳ ಸಾಕುವ ಜವಾಬ್ದಾರಿ ಇಲ್ಲದೇ ಹೋದರೆ ಎಷ್ಟಾದರೂ ಮಕ್ಕಳಾಗಲಿ ಎಂಬಂತಿದೆ ಈ ಬಜೆಟ್. ಅನುಷ್ಠಾನ ಮಾಡುವ ಜವಾಬ್ದಾರಿ ಇಲ್ಲದೆ ಹೋದರೆ ಎಷ್ಟಾದರೂ ಭರವಸೆ ಕೊಡಬಹುದು. ಹಾಗಾಗಿದೆ ಇವರ ಬಜೆಟ್. 600 ಭರವಸೆಗಳನ್ನು ಕೊಟ್ಟು 56 ಭರವಸೆ ಈಡೇಸಿದರೆ ಹೀಗೆ ಆಗುತ್ತದೆ.


ಕೇಂದ್ರಕ್ಕೆ ನಮ್ಮಿಂದ 4.75 ಲಕ್ಷ ಕೋಟಿ ರೂಪಾಯಿ ತೆರಿಗೆ ವಸೂಲಾಗುತ್ತದೆ. ಅದರಲ್ಲಿ ಕೇಂದ್ರದಿಂದ ನಮಗೆ 34,596 ಕೋಟಿ ರೂಪಾಯಿ ಬರಬಹುದು ಎಂದಿದ್ದಾರೆ. 50,64,896 ಕೋಟಿ ಒಟ್ಟು ಸಾಲವಾಗಲಿದೆ. ನಾವು ಅಧಿಕಾರ ಬಿಟ್ಟಾಗ 22,80,000 ಕೋಟಿ ರೂಪಾಯಿ ಸಾಲ ಇತ್ತು. ಇವರು ಸಾಲವನ್ನು ಹೆಚ್ಚು ಮಾಡಿದ್ದಾರೆ ಎಂದು ಆರೋಪಿಸಿದರು.


ಕೇಂದ್ರ ತೆರಿಗೆ ಪಾಲು ಹೆಚ್ಚು ಬಂದಿಲ್ಲ


ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ರಚಿಸಿಲ್ಲ. ಆ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ನಾನು ಸಿಎಂ ಆಗಿದ್ದಾಗ 6ನೇ ವೇತನ ಆಯೋಗ ರಚನೆ ಮಾಡಿದ್ದೆ. ಜೊತೆಗೆ ಅದರ ಅನುಷ್ಠಾನಕ್ಕೆ 10,100 ರೂಪಾಯಿ ಮಂಜೂರು ಮಾಡಿದ್ದೆ. ಆದರೆ ಇವರು ಪ್ರಸ್ತಾಪವನ್ನೇ ಮಾಡಿಲ್ಲ.


ಕೇಂದ್ರ ತೆರಿಗೆ ಪಾಲು ಹೆಚ್ಚು ಬಂದಿಲ್ಲ. ಕೇಂದ್ರ ಸರ್ಕಾರ ರಾಜ್ಯವನ್ನು ಸುಲಿಗೆ ಮಾಡಿದೆ. ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಅತ್ಯಂ‌ತ ನಿರಾಶಾದಾಯಕ ಚುನಾವಣಾ ಬಜೆಟ್ ಇದು. ಬದ್ಧ ವೆಚ್ಚಗಳು ಎಷ್ಟು ಅಂತಾ ಹೇಳಿಲ್ಲ. ಕಳೆದ ವರ್ಷ ಅದು 92% ಇತ್ತು. ಬದ್ದ ವೆಚ್ಚ ಕಡಿಮೆ ಮಾಡಲು ಇವರು ಯಾವುದೇ ಪ್ರಯತ್ನ ಮಾಡಿಲ್ಲ.


ಕೇಂದ್ರ ಸರ್ಕಾರ ಈ ಸಲ ಕೃಷಿಗೆ 50 ಸಾವಿರ ಕೋಟಿ ರೂ‌ಪಾಯಿ ಅನುದಾನ ಕಡಿತ ಮಾಡಿದೆ


ಜೆಎಸ್​ಟಿ ಹೆಚ್ಚಿಗೆ ಹಾಕಿದ್ದರಿಂದ ತೆರಿಗೆ ಹೆಚ್ಚು ಬಂದಿದೆ. ಮಜ್ಜಿಗೆ, ಮೊಸಲು ಹೀಗೆ ಅಗತ್ಯ ಪದಾರ್ಥಗಳ ಮೇಲೆ ತೆರಿಗೆ ಹಾಕಿದ್ದಾರೆ. ಮೊದಲಿಗೆ ಇವುಗಳಿಗೆ ತೆರಿಗೆ ಹಾಕುತ್ತಾ ಇರಲಿಲ್ಲ. ಇವರ ಕೆಟ್ಟ ಆರ್ಥಿಕ ನೀತಿಯಿಂದ ಸಾಲದ ಸುಳಿಗೆ ಸಿಲುಕಿದ್ದಾರೆ. ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿ ಸಾಲದ‌ ಸುಳಿಗೆ ಸಿಲುಕಿಸಿದ್ದಾರೆ. ಈ ಬಜೆಟ್ ನಿಂದ ರಾಜ್ಯದ ಜನರ ಸಮಸ್ಯೆಗಳು ಪರಿಹಾರವಾಗುವುದಿಲ್ಲ.


ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. ಎಲ್ಲೂ ಕೂಡ ದುಪ್ಪಟ್ಟು ಮಾಡಲು ಯೋಜನೆ ಹಾಕಿಕೊಂಡಿಲ್ಲ. ಕೇಂದ್ರ ಸರ್ಕಾರ ಈ ಸಲ ಕೃಷಿಗೆ 50 ಸಾವಿರ ಕೋಟಿ ರೂ‌ಪಾಯಿ ಅನುದಾನ ಕಡಿಮೆ ಮಾಡಿದ್ದಾರೆ. ಹೀಗಾಗಿ ಈ ಸಲ‌ ರಸಗೊಬ್ಬರದ ಬೆಲೆ ಹೆಚ್ಚಾಗಲಿದೆ. ಹಾಗಾದಲ್ಲಿ ರೈತರ ಆದಾಯ ಹೇಗೆ ದುಪ್ಪಟ್ಟು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Karnataka Budget 2023: ಎರಡು ಕಿವಿಗಳಿಗೂ ಹೂ ಇಟ್ಟುಕೊಂಡು ಸಿಎಂ ಬಳಿಯೇ ಬಜೆಟ್ ಗೇಲಿ ಮಾಡಿದ ಡಿಕೆ ಶಿವಕುಮಾರ್!


ಮಂತ್ರಿಗಳು, ಶಾಸಕರಿಗೆ ಇದು ನೀರಸ ಬಜೆಟ್ ಅನಿಸಿದೆಯಂತೆ; ಹೆಚ್​ಡಿಕೆ


ರಾಜ್ಯ ಬಜೆಟ್ ಕುರಿತಂತೆ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು, ಚುನಾವಣೆ ಪೂರ್ವದ ಈ ಬಜೆಟ್ ಗೆ ಯಾವುದೇ ಮಹತ್ವ ಇಲ್ಲ. ಮುಂದಿನ ಮೇ ತಿಂಗಳಲ್ಲಿ ಚುನಾವಣೆ ಇದೆ‌. ಮುಂದೆ ಬರುವ ಸರ್ಕಾರ ಮತ್ತೊಂದು ಬಜೆಟ್ ಘೋಷಣೆ ಮಾಡುತ್ತೆ.


ನಾನು ಈಗಾಗಲೇ ರಾಜ್ಯದ 70 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಚುನಾವಣೆ ಇರುವರಿಂದ ಜನರನ್ನು ಮೆಚ್ಚಿಸಲು ಆದರೂ ಜನಪ್ರಿಯ ಘೋಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರ ಮಂತ್ರಿಗಳು, ಶಾಸಕರುಗಳಿಗೆ ಇದು ನೀರಸ ಬಜೆಟ್ ಅನಿಸಿದೆಯಂತೆ ಎಂದರು.


ಈ ಬಾರಿಯ ಬಜೆಟ್​ ಬಿಜೆಪಿ ಶಾಸಕರು, ಮಂತ್ರಿಗಳಿಗೆ ನಿರಾಸೆ ತಂದಿದೆ ಎಂಬ ಚರ್ಚೆ ವಿಧಾನಸೌಧದ ಮೊಗಸಾಲೆಯಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಇವತ್ತಿನ ಬಜೆಟ್​ಗೆ ಅಂತಹ ಮಹತ್ವ ಕೊಡಲ್ಲ. ಮುಂದೆ ಜನರು ಆಯ್ಕೆ ಮಾಡುವ ಸರ್ಕಾರ ಅದರ ಮೇಲೆ ಮುಂದಿನ ಬಜೆಟ್ ಕಾರ್ಯರೂಪಕ್ಕೆ ಬರುತ್ತೆ ಎಂದು ತಿಳಿಸಿದರು.

Published by:Sumanth SN
First published: