ಬೆಂಗಳೂರು: ತಮ್ಮ ಆಡಳಿತಾವಧಿಯ ಕೊನೆಯ ಬಜೆಟ್‌ನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮಂಡಿಸಿದ್ದಾರೆ. ಚುನಾವಣಾ ವರ್ಷ ಆಗಿರುವುದರಿಂದ ಬಜೆಟ್‌ನಲ್ಲಿ (Karnataka Budget 2023) ಎಲ್ಲಾ ವರ್ಗದ ಜನರನ್ನು ತಲುಪಲು ಪ್ರಯತ್ನ ಪಟ್ಟಿರುವ ಸಿಎಂ ಬೊಮ್ಮಾಯಿ, ಕೃಷಿ ಕ್ಷೇತ್ರಕ್ಕೂ (Agriculture Sector) ಬೃಹತ್ ಗಾತ್ರದ ಅನುದಾನ ಘೋಷಿಸಿದ್ದಾರೆ. ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2023-24ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ₹39,031 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.
ರೈತರ ಬೆಂಬಲಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೆರವಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿರುವ ಸಿಎಂ ಬೊಮ್ಮಾಯಿ, ಕಳೆದ ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 10,930 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 4,822 ಕೋಟಿ ರೂಪಾಯಿ ಸೇರಿ ಒಟ್ಟಾರೆ 15,752 ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗಿದೆ ಎಂದು ಹೇಳಿದರು. ಇದರ ಜೊತೆಗೆ ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ 400 ಕೋಟಿ ಅನುದಾನ ನೀಡಲಾಗಿದೆ. ಕೃಷಿ ಯಂತ್ರೀಕರಣ ಉತ್ತೇಜನಕ್ಕೆ 2,037 ಕೋಟಿ ರೂ ನೀಡಲಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಹನಿ ನೀರಾವರಿಗೆ 2,900 ಕೋಟಿ ರೂಪಾಯಿ ಮಾರುಕಟ್ಟೆ ನೆರವು ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Karnataka Budget 2023: ಮಾನವ-ವನ್ಯಜೀವಿ ಸಂಘರ್ಷಕ್ಕೂ ಅನುದಾನ; ಕಾಡಾನೆ ಇನ್ಮೇಲೆ ನಾಡಿಗೆ ಬರೋದು ಅನುಮಾನ!
ರೈತರ ಸಾಲದ ಮಿತಿ 3ರಿಂದ 5 ಲಕ್ಷಕ್ಕೆ ಏರಿಕೆ
ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಯೋಜನೆಗಳನ್ನು ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಈ ವರ್ಷದಿಂದ ರೈತರಿಗೆ ನೀಡುವ ಅಲ್ಪಾವಧಿ ಸಾಲದ ಮಿತಿಯನ್ನು ಮೂರು ಲಕ್ಷ ರೂ ನಿಂದ 5 ಲಕ್ಷ ರೂಗೆ ಏರಿಕೆ ಮಾಡಲಾಗಿದ್ದು, ಆ ಮೂಲಕ ಈ ವರ್ಷ ರೈತರಿಗೆ 30 ಲಕ್ಷದಿಂದ 25000 ಕೋಟಿ ರೂಗಳಷ್ಟು ಸಾಲ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ರೈತರಿಗೆ ಸುಲಭವಾಗೋದು ಮಾತ್ರವಲ್ಲದೇ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ ಸಿಕ್ಕಂತಾಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ರೈತರಿಗೆ 'ಭೂ ಸಿರಿ' ನೂತನ ಯೋಜನೆ
ಇನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಎಂಬ ನೂತನ ಯೋಜನೆ ಅಡಿ 2023-24ನೇ ಸಾಲಿನಲ್ಲಿ 10,000 ರೂ. ಹೆಚ್ಚುವರಿ ಸಹಾಯಧನ ನೀಡಲು ಸರ್ಕಾರ ನಿರ್ಧಾರ ಮಾಡಿದ್ದು, ಇದರಿಂದ ಸುಮಾರು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ. ತುರ್ತು ಸಂದರ್ಭದಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳನ್ನು ಖರೀದಿಸಲು ಸಹಾಯವಾಗಲಿದೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರದ 2500 ರೂಪಾಯಿ ಮತ್ತು ಕೇಂದ್ರ ಸರ್ಕಾರದ 7500 ರೂಪಾಯಿ ಸೇರಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಜೀವನ್ ಜ್ಯೋತಿ ವಿಮಾ ಯೋಜನೆ
ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ನೆರವಿನೊಂದಿಗೆ ಬದುಕಿನ ಭದ್ರತೆ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಿಎಂ ಹೇಳಿದ್ದು, ಜೊತೆಗೆ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್‌ಗಳನ್ನು ಹಂತ ಹಂತವಾಗಿ ಒದಗಿಸುವ ಉದ್ದೇಶದಿಂದ 2023-24ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್‌ಗಳಿಗೆ 50 ಲಕ್ಷ ರೂ ನಂತೆ 50 ಕೋಟಿ ರೂಪಾಯಿ ಒದಗಿಸಲಾಗುವುದು ಎಂದು ಹೇಳಿದರು.
ನೈಸರ್ಗಿಕ ಮತ್ತು ಸಮಗ್ರ ಕೃಷಿ ಒತ್ತು
ಇನ್ನು ರೈತ ಉತ್ಪಾದಕ ಸಂಸ್ಥೆಗಳ ಪ್ರೋತ್ಸಾಹಕ್ಕೆ ತಲಾ ಹತ್ತು ಲಕ್ಷ ರೂ ವರೆಗಿನ ಬಂಡವಾಳಕ್ಕೆ ಐದು ವರ್ಷಗಳ ಅವಧಿಗೆ ಬ್ಯಾಂಕುಗಳ ಮೂಲಕ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ಬಡ್ಡಿ ಸಹಾಯಧನ ನೀಡುವ ಯೋಜನೆ ಹಾಕಲಾಗಿದ್ದು, ಇನ್ನು ರೈತಸಿರಿ ಯೋಜನೆ ಅಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟರಿಗೆ 10 ಸಾವಿರ ರೂಗಳ ಪ್ರೋತ್ಸಾಹ ಧನ ನೀಡಲು ನಿರ್ಧಾರ ಮಾಡಲಾಗಿದೆ. ಅಲ್ಲದೇ, ಪ್ರತಿ ತಾಲೂಕಿಗೆ ಒಂದರಂತೆ ತಲ 50 ಹೆಕ್ಟೆ ಪ್ರದೇಶದಲ್ಲಿ ಗುಚ್ಛ ಮಾದರಿಯಲ್ಲಿ ಮುಂದಿನ ನಾಲ್ಕು ವರ್ಷದಲ್ಲಿ ಒಂದು ಲಕ್ಷ ಹೆಕ್ಟರ್ ಪ್ರದೇಶವನ್ನ ನೈಸರ್ಗಿಕ ಮತ್ತು ಸಮಗ್ರ ಕೃಷಿಗೆ ಒಳಪಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಸಹಸ್ರ ಸರೋವರ & ಸಹ್ಯಾದ್ರಿ ಸಿರಿ ಯೋಜನೆ
ಸಹಸ್ರ ಸರೋವರ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಸಾವಿರ ಸಣ್ಣ ಸರೋವರಗಳ ಅಭಿವೃದ್ಧಿಗೂ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗಿದ್ದು, ಇದರ ಜೊತೆಗೆ ಸಹ್ಯಾದ್ರಿ ಸಿರಿ ಯೋಜನೆ ಅಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶದಲ್ಲಿ ಬೇಸಿಗೆ ನೀರು ಸಂಸ್ಕರಣೆಗೆ ಬಾವಿ ಕಿಂಡಿ ಅಣೆ ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಈ ಎರಡು ಯೋಜನೆಗಳಿಗೆ 75 ಕೋಟಿ ರೂ ಅನುದಾನ ಮೀಸಲಿರಿಸಲಾಗಿದೆ.
ಇದನ್ನೂ ಓದಿ: Karnataka Budget 2023: ಅಡಿಕೆ ಬೆಳೆಗಾರರಿಗೆ ಗುಡ್‌ನ್ಯೂಸ್! ಸಿಎಂ ಬೊಮ್ಮಾಯಿ ಬಜೆಟ್‌ನಲ್ಲಿ ಸಿಕ್ತು ಬಂಪರ್!
ಕೊಯ್ಲೋತ್ತರ ತಂತ್ರಜ್ಞಾನಕ್ಕೆ ಒತ್ತು
ಇನ್ನು ಕೊಯ್ಲೋತ್ತರ ತಂತ್ರಜ್ಞಾನಕ್ಕೆ ಒತ್ತು ಕೊಟ್ಟು ತೋಟಗಾರಿಕಾ ಬೆಳೆ ಮೌಲ್ಯವರ್ಧನೆ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ರಫ್ತು ಮತ್ತು ಸಂಸ್ಕರಣೆಯ ಉತ್ತೇಜನಕ್ಕೆ ರೈತ ಸಂಪದ ಯೋಜನೆ ಅಡಿ ಕೆಫೆಕ್ ಸಂಸ್ಥೆಯ ಮೂಲಕ 100 ಕೋಟಿ ರೂಗಳಲ್ಲಿ ಯೋಜನೆ ರೂಪಿಸಲು ನಿರ್ಧಾರ ಮಾಡಲಾಗಿದ್ದು, ಇವಿಷ್ಟೇ ಅಲ್ಲದೇ, ತೋಟಗಾರಿಕೆ ಇಲಾಖೆ ಅಡಿ 12 ತೋಟಗಳಲ್ಲಿ ಒಂದು ತೋಟ ಒಂದು ಬೆಳೆ ಯೋಜನೆಯ ಮೂಲಕ ಉತ್ಪಾದಕತೆ ಹೆಚ್ಚಿಸಲು 10 ಕೋಟಿ ರೂಗಳ ಒಂದು ಬಾರಿಯ ವಿಶೇಷ ಅನುದಾನ ಮೀಸಲಿರಿಸಲಾಗಿದೆ.
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಎಲೆ ಚುಕ್ಕಿ ರೋಗ ಸೇರಿದಂತೆ ಇನ್ನಿತರ ಹೊಸ ಹೊಸ ರೋಗಗಳನ್ನು ಅಡಿಕೆ ಕೃಷಿ ಎದುರಿಸುತ್ತಿದ್ದು, ಹೀಗಾಗಿ ಅಡಿಕೆ ಬೆಳೆಯನ್ನು ಬಾಧಿಸುವ ರೋಗಗಳ ನಿರ್ವಹಣೆಗೆ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಉತ್ಪಾದಕತೆ ಹೆಚ್ಚಿಸುವ ಅಗತ್ಯತೆಯನ್ನು ಮನಗಂಡು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂಪಾಯಿ ನೆರವನ್ನು ಘೋಷಿಸಲಾಗಿದೆ.
ಇಲ್ಲಿದೆ ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಹೈಲೈಟ್ಸ್:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ