ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ (Karnataka Budget 2023) ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಈ ಆಡಳಿತಾವಧಿಯ ಕೊನೆಯ ಬಜೆಟ್ ಮಂಡನೆ ಮಾಡಿದ್ದಾರೆ. ಚುನಾವಣಾ ವರ್ಷ ಆಗಿರುವುದರಿಂದ ಬಜೆಟ್‌ನಲ್ಲಿ ಎಲ್ಲಾ ವರ್ಗದ ಜನರನ್ನು ತಲುಪಲು ಪ್ರಯತ್ನ ಪಟ್ಟಿರುವ ಸಿಎಂ ಬೊಮ್ಮಾಯಿ, ಇತ್ತ ಪಶ್ಚಿಮ ಘಟ್ಟ, ಮಲೆನಾಡು ಸೇರಿದಂತೆ ಇನ್ನಿತರ ಭಾಗಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ಮಾನವ ವನ್ಯ ಪ್ರಾಣಿ ಸಂಘರ್ಷಕ್ಕೂ (Wildlife) ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.
ವಿಶೇಷವಾಗಿ ಇತ್ತೀಚಿನ ಕೆಲ ವರ್ಷಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ಅನೇಕ ಮಂದಿ ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದರು. ಈ ಸಮಸ್ಯೆಗೆ ಇನ್ನೂ ಪರಿಹಾರ ಕಂಡು ಹುಡುಕದ ರಾಜ್ಯ ಸರ್ಕಾರದ ವಿರುದ್ಧ ಜನರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಹಲವೆಡೆ ಸಂತ್ರಸ್ತ ಜನರು ಅಧಿಕಾರಿಗಳ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು. ಇದೀಗ ಚುನಾವಣಾ ವರ್ಷವೂ ಆಗಿರುವುದರಿಂದ ತಮ್ಮ ಅಧಿಕಾರಾವಧಿಯ ಕೊನೆಯ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾನವ ಮತ್ತು ವನ್ಯ ಪ್ರಾಣಿ ಸಂಘರ್ಷಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ಮಾಡಿದ್ದಾರೆ.
ಇದನ್ನೂ ಓದಿ: Karnataka Budget 2023: ಅಡಿಕೆ ಬೆಳೆಗಾರರಿಗೆ ಗುಡ್‌ನ್ಯೂಸ್! ಸಿಎಂ ಬೊಮ್ಮಾಯಿ ಬಜೆಟ್‌ನಲ್ಲಿ ಸಿಕ್ತು ಬಂಪರ್!
ಕಾಡಾನೆ ದಾಳಿ ತಡೆಗೆ ಮತ್ತಷ್ಟು ಯೋಜನೆ
ತಮ್ಮ ಬಜೆಟ್‌ನಲ್ಲಿ ಈ ಬಗ್ಗೆ ಯೋಜನೆ ಘೋಷಣೆ ಮಾಡಿರುವ ಬಸವರಾಜ ಬೊಮ್ಮಾಯಿ, 2022-23ನೇ ಸಾಲಿನಲ್ಲಿ ಮಾನವ-ಆನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯುವ ಸಂಬಂಧ ಕಾಮಗಾರಿಗಳಿಗೆ 150 ಕೋಟಿಗಳ ಅನುದಾನ ಒದಗಿಸಲಾಗಿತ್ತು. ಇದೀಗ ಇದರ ಮುಂದುವರಿದ ಭಾಗವಾಗಿ ಮಾನವ-ಆನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ 12 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುವುದರ ಜೊತೆಗೆ, 36 ಕಿ.ಮೀ. ಉದ್ದದ ಆನೆ ನಿರೋಧಕ ಕಂದಕವನ್ನೂ ನಿರ್ಮಿಸಲು ಯೋಜನೆ ಹಾಕಲಾಗಿದೆ. ಇದರ ಜೊತೆಗೆ 186 ಕಿ.ಮೀ ಉದ್ದದ ಸೌರಶಕ್ತಿ ಬೇಲಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಪ್ರಾಣಿ ದಾಳಿಯ ಪರಿಹಾರದ ಮೊತ್ತ ಏರಿಕೆ
ಇನ್ನು ಈ ವರೆಗೆ ಮಾನವ ಮತ್ತು ವನ್ಯ ಜೀವಿ ಸಂಘರ್ಷಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ 7.5 ಕೋಟಿ ಪರಿಹಾರ ನೀಡಲಾಗುತ್ತಿತ್ತು. ಇದೀಗ ಈ ಬಾರಿಯ ಬಜೆಟ್‌ನಲ್ಲಿ ಈ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಾನವ ಮತ್ತು ವನ್ಯ ಜೀವಿ ಸಂಘರ್ಷಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡವರಿಗೆ ನೀಡುವ ಪರಿಹಾರದ ಮೊತ್ತವನ್ನು 7.5 ಲಕ್ಷ ರೂಪಾಯಿನಿಂದ 15 ಲಕ್ಷಕ್ಕೆ ಏರಿಕೆ ಮಾಡಿದ್ದಾರೆ.
ಇದನ್ನೂ ಓದಿ: Karnataka Budget 2023: ಶೀಘ್ರದಲ್ಲೇ ಪ್ರತಿ ಬೀದಿ ನಾಯಿಗೂ ಸಿಗಲಿದೆ ಸೂರು, ಬಜೆಟ್‌ನಲ್ಲಿ ಇದಕ್ಕೆಂದೇ ಹೊಸ ಯೋಜನೆ ಘೋಷಣೆ!
ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ರೂ. ಅನುದಾನ
ಇನ್ನು ಪ್ರಾಣಿಗಳ ಮೇಲಿನ ಹಿಂಸೆ ತಡೆಯಲು ಮತ್ತು ಪ್ರಾಣಿ ಕಲ್ಯಾಣಕ್ಕಾಗಿ ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ರೂ. ಅನುದಾನ ನೀಡಲಾಗುವುದು. ಪ್ರಾಣಿ ಕಲ್ಯಾಣ ಮಂಡಳಿಯ ವತಿಯಿಂದ ಬೆಂಗಳೂರಿನಲ್ಲಿ ನಿರ್ಲಕ್ಷಿತ ಪ್ರಾಣಿಗಳ ಸೂಕ್ತ ಚಿಕಿತ್ಸೆಗಾಗಿ ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಅಲ್ಲದೇ ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲ ಬ್ಯೂರೋದಿಂದ ಭಾರತೀಯ ದೇಶಿ ಶ್ವಾನ ತಳಿ ಎಂದು ಮಾನ್ಯತೆ ಪಡೆದ ಮುಧೋಳ ಹೌಂಡ್ ಶ್ವಾನ ತಳಿಯ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ಬೀದಿ ನಾಯಿಗಳು ಮತ್ತು ಅವುಗಳ ಪೋಷಣೆಗಾಗಿ ಸಾರ್ವಜನಿಕರು ದತ್ತು ತೆಗೆದುಕೊಳ್ಳಲು ಒಂದು ಆನ್-ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ ಆಸಕ್ತ ಶ್ವಾನ ಪ್ರೇಮಿಗಳು ತಮ್ಮ ನೋಂದಾಯಿಸಿಕೊಂಡು ದತ್ತು ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಬಜೆಟ್‌ನಲ್ಲಿ ಸಿಎಂ ಘೋಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ