Karnataka Budget - ಪೆಟ್ರೋಲ್, ಡೀಸೆಲ್ ಮೇಲೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸೆಸ್ ಇಲ್ಲ
ಪೆಟ್ರೋಲ್, ಡೀಸೆಲ್ ಇತ್ಯಾದಿ ತೈಲೋತ್ಪನ್ನಗಳ ಮೇಲೆ ರಾಜ್ಯ ಸರ್ಕಾರ ವಿಧಿಸುವ ತೆರಿಗೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಇದರೊಂದಿಗೆ ಪೆಟ್ರೋಲ್ ಬೆಲೆ ಇನ್ನಷ್ಟು ಏರಿಕೆಯಾಗಬಹುದು ಎಂದು ಭೀತಿಯಲ್ಲಿದ್ದ ಜನಸಾಮಾನ್ಯರು ತುಸು ನಿರಾಳರಾಗಿದ್ಧಾರೆ.
ಬೆಂಗಳೂರು(ಮಾ. 08): ಆರ್ಥಿಕ ಸಂಕಷ್ಟದಿಂದ ಕಂಗೆಟ್ಟರುವ ರಾಜ್ಯಕ್ಕೆ ವರಮಾನ ಹೆಚ್ಚಿಸಲು ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ಸೆಸ್ ವಿಧಿಸಬಹುದು ಎಂಬ ಭಯವನ್ನು ಈ ಬಾರಿಯ ಬಜೆಟ್ ನಿವಾರಿಸಿದೆ. ಪೆಟ್ರೋಲ್, ಡೀಸೆಲ್ ಮೇಲೆ ಯಾವುದೇ ಹೆಚ್ಚುವರಿ ಸೆಸ್ ಇಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ತಮ್ಮ ಬಜೆಟ್ ಮಂಡನೆ ವೇಳೆ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ತೈಲೋತ್ಪನ್ನಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನಸಾಮಾನ್ಯರು ಹಾಗೂ ಕೈಗಾರಿಕೆಗಳು ತುಸು ನಿರಾಳವಾಗಿದ್ದಾರೆ. ಆದರೆ, ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಅದರ ಹೊರೆ ತಗ್ಗಿಸಲು ರಾಜ್ಯ ಸರ್ಕಾರ ತೈಲೋತ್ಪನ್ನದ ಮೇಲಿನ ಸೆಸ್ ಅನ್ನು ಕಡಿಮೆ ಮಾಡಬೇಕೆಂದು ಕೆಲವೆಡೆಯಿಂದ ಒತ್ತಾಯವೂ ಕೇಳಿಬಂದಿತ್ತು. ಆದರೆ, ಸರ್ಕಾರ ತನ್ನ ಸೆಸ್ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ದೆಹಲಿ, ಪಶ್ಚಿಮ ಬಂಗಾಳದಂಥ ಕೆಲ ರಾಜ್ಯಗಳು ಪೆಟ್ರೋಲ್, ಡೀಸೆಲ್ ಮೇಲೆ ತಾವು ವಿಧಿಸುತ್ತಿದ್ದ ತೆರಿಗೆಯನ್ನು ಕಡಿಮೆ ಮಾಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದಲೂ ಇಂಥದ್ದೇ ಕ್ರಮವನ್ನ ನಿರೀಕ್ಷಿಸಲಾಗಿತ್ತು.
ಇದೇ ವೇಳೆ, ಇವತ್ತಿನ ಬಜೆಟ್ ಮಂಡನೆಯು ಕಾಂಗ್ರೆಸ್ ಸದಸ್ಯರ ಅನುಪಸ್ಥಿತಿಯಲ್ಲಿ ನಡೆಯಿತು. ಇದು ನೈತಿಕ ಸರ್ಕಾರ ಅಲ್ಲ, ಯಡಿಯೂರಪ್ಪ ಅವರಿಗೆ ಬಜೆಟ್ ಮಂಡಿಸುವ ನೈತಿಕತೆ ಇಲ್ಲ ಎಂದು ಆರೋಪಿಸಿದ ಕಾಂಗ್ರೆಸ್ ಸದಸ್ಯರು ತಮ್ಮ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸದನಕ್ಕೆ ಆಗಮಿಸಿ ಬಜೆಟ್ ಭಾಷಣ ವೇಳೆ ಪ್ರತಿಭಟನೆ ನಡೆಸಿದರು. ಸ್ವಲ್ಪ ಹೊತ್ತು ಭಾಷಣಕ್ಕೆ ಅಡ್ಡಿ ಪಡಿಸಿ ನಂತರ ಸದನದಿಂದ ವಾಕೌಟ್ ಮಾಡಿದರು.
ಯಡಿಯೂರಪ್ಪ ಅವರ ವೃತ್ತಿಮಾನದ 8ನೇ ಬಜೆಟ್ 2,43,734 ಕೋಟಿ ರೂ ಗಾತ್ರದ್ದಾಗಿದೆ. ಮೇಕೆದಾಟು ಯೋಜನೆಗೆ 9 ಸಾವಿರ ಅನುದಾನ, ಮೆಟ್ರೋ ಯೋಜನೆಗಳಿಗೆ 30 ಸಾವಿರ ಕೋಟಿ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ 7,795 ಕೋಟಿ ರೂ ಇತ್ಯಾದಿ ಅನುದಾನಗಳು ಈ ಸಾಲಿನ ಬಜೆಟ್ ವಿಶೇಷತೆ ಆಗಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ