Karnataka Budget Updates: ಮಾತು ತಪ್ಪಿದ ಸಿಎಂ ಯಡಿಯೂರಪ್ಪ, ರೈತರ ಬೆಳೆ ಸಾಲಮನ್ನಾ ಮಾಡದ ಸರ್ಕಾರ

Karnataka Budget Highlights: ಇಂದಿನ ಬಜೆಟ್​ ಮೇಲಿನ ಭಾಷಣದಲ್ಲಿ ಸಿಎಂ ಯಡುಯೂರಪ್ಪ ಎಲ್ಲಿಯೂ ಸಹ ಸಾಲಮನ್ನಾ ಕುರಿತು ತುಟಿ ಬಿಚ್ಚದೆ ಇರುವುದು ನೆರೆ ಹಾಗೂ ಬರದಲ್ಲಿ ಸಿಲುಕಿ ನಲುಗುತ್ತಿರುವ ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ರಾಜ್ಯ ಬಜೆಟ್​ ಮಂಡಿಸುತ್ತಿರುವ ಸಿಎಂ ಯಡಿಯೂರಪ್ಪ.

ರಾಜ್ಯ ಬಜೆಟ್​ ಮಂಡಿಸುತ್ತಿರುವ ಸಿಎಂ ಯಡಿಯೂರಪ್ಪ.

  • Share this:
ಬೆಂಗಳೂರು (ಮಾರ್ಚ್​ 05); ಬಹು ನಿರೀಕ್ಷೆಯ ಕರ್ನಾಟಕ ರಾಜ್ಯ ಬಜೆಟ್​ನಲ್ಲಿ ಸಿಎಂ ಯಡಿಯೂರಪ್ಪ ರೈತರಿಗೆ ಈ  ಹಿಂದೆ ಇದ್ದ ಯೋಜನೆಗಳನ್ನೇ ಪುನರಾವರ್ತಿಸಿದರೇ ವಿನಃ ಸಾಲಮನ್ನಾ ಕುರಿತು ತುಟಿ ಬಿಚ್ಚಲಿಲ್ಲ. ಈ ಮೂಲಕ ರೈತರ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. 

ಕಳೆದ ವಾರ ಮಾಹಿತಿ ನೀಡಿದ್ದ ಆರ್ಥಿಕ ಇಲಾಖೆ ಅಧಿಕಾರಿಗಳು, "ರೈತರ ಸಾಲಮನ್ನಾ ಯೋಜನೆಯಿಂದ 1.10 ಲಕ್ಷ ರೈತರನ್ನು ಬಿಜೆಪಿ ಸರ್ಕಾರ ಹೊರಗಿಟ್ಟಿದೆ ಮತ್ತು 2019-20 ಅರ್ಥಿಕ ವರ್ಷದಲ್ಲಿ ಸಾಲಮನ್ನಾ ಯೋಜನೆಗೆ ಇತಿಶ್ರೀ ಹಾಡಲು ಮುಂದಾಗಿದೆ" ಎಂದು ಮಾಹಿತಿ ನೀಡಿದ್ದರು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅಲ್ಲದೆ, ಮಾಜಿ ಸಿಎಂ ಕುಮಾರಸ್ವಾಮಿ ಆಡಳಿತರೂಢ ಪಕ್ಷದ ವಿರುದ್ಧ ಹರಿಹಾಯ್ದಿದ್ದರು.

ಆದರೆ, ಈ ವೇಳೆ ಸ್ಪಷ್ಟನೆ ನೀಡಿದ್ದ ಸಿಎಂ ಯಡಿಯೂರಪ್ಪ, "ಯಾವುದೇ ಕಾರಣಕ್ಕೂ ರೈತರ ಬೆಳೆ ಸಾಲ ಮನ್ನಾ ಯೋಜನೆಗೆ ಇತಿಶ್ರೀ ಹಾಡುವುದಿಲ್ಲ. ಎಲ್ಲಾ ರೈತರ ಅಭಿವೃದ್ಧಿ ನಮ್ಮ ಸರ್ಕಾರದ ಹೊಣೆ ಎಂದಿದ್ದರು. ಅಲ್ಲದೆ, ಈ ಹಿಂದೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಾಗೂ ನಾಲ್ಕು ದಿನದ ಸಿಎಂ ಆಗಿದ್ದ ಸಂದರ್ಭದಲ್ಲೂ ಸಹ ರೈತರ ಸಂಪೂರ್ಣ ಸಾಲಮನ್ನಾಕ್ಕೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ದರು.

ಆದರೆ, ಇಂದಿನ ಬಜೆಟ್​ ಮೇಲಿನ ಭಾಷಣದಲ್ಲಿ ಸಿಎಂ ಯಡುಯೂರಪ್ಪ ಎಲ್ಲಿಯೂ ಸಹ ಸಾಲಮನ್ನಾ ಕುರಿತು ತುಟಿ ಬಿಚ್ಚದೆ ಇರುವುದು ನೆರೆ ಹಾಗೂ ಬರದಲ್ಲಿ ಸಿಲುಕಿ ನಲುಗುತ್ತಿರುವ ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಅಲ್ಲಿಗೆ ಕೊನೆಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ಸಾಲ ಮನ್ನಾ ಯೋಜನೆ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಏಪ್ರಿಲ್ 2009 ರಿಂದ ಡಿಸೆಂಬರ್ 2017ರ ವರೆಗೆ ಬೆಳೆ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡಲು ಅಂದಿನ ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದರು. ರಾಷ್ಟ್ರೀಕೃತ ಬ್ಯಾಂಕ್ ಗಳ ಒಂದು ಲಕ್ಷದ ವರೆಗಿನ ಬೆಳೆ ಸಾಲ, ಸಹಕಾರ ಬ್ಯಾಂಕಿನ 1 ಲಕ್ಷ ರೂ. ಸಾಲ ಮನ್ನಾ ಮಾಡಲು ಆದೇಶಿಸಿದ್ದರು. ಅಲ್ಲದೆ, ಚಾಲ್ತಿ ಬೆಳೆ ಸಾಲ ಮಾಡಿದ್ದ ರೈತರಿಗೆ 25,000 ರೂ. ಪ್ರೋತ್ಸಾಹ ಕೊಡುವುದಾಗಿ ಘೋಷಿಸಿದ್ದರು.

ಸುಮಾರು 42 ಲಕ್ಷ ರೈತರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡುವುದಾಗಿ ಘೋಷಿಸಲಾಗಿತ್ತು. ಅಂತಿಮವಾಗಿ ಸಾಲಮನ್ನಾ ಯೋಜನೆಯ ಲಾಭ ಪಡೆದ ರೈತರ ಸಂಖ್ಯೆ 25.17 ಲಕ್ಷ ಮಾತ್ರ. ಸುಮಾರು 46,000 ಕೋಟಿ ರೂ. ಬೆಳೆ ಸಾಲಮನ್ನಾ ಎಂದಿದ್ದ ಯೋಜನೆ ಇದೀಗ ಕೇವಲ 14,293 ಕೋಟಿ ರೂ.ಗೆ ಮಾತ್ರ. ಅಲ್ಲದೆ, ಈಗಾಗಲೇ 1.10 ಲಕ್ಷ ರೈತರನ್ನು ವಿವಿಧ ಕಾರಣದಿಂದಾಗಿ ಬಿಜೆಪಿ ಸರ್ಕಾರ ಸಾಲಮನ್ನಾ ಯೋಜನೆಯಿಂದ ಹೊರಗಿಡಲಾಗಿದೆ.


First published: