PU Exam: ರಾಜ್ಯದಲ್ಲೂ ಪಿಯು ಪರೀಕ್ಷೆ ರದ್ದು ಮಾಡಲು ಹೆಚ್ಚಿದ ಒತ್ತಡ; ಮೌನವಹಿಸಿದ ಶಿಕ್ಷಣ ಇಲಾಖೆ

ಈಗಾಗಲೇ ಒಂದು ಬಾರಿ ಪರೀಕ್ಷೆಯನ್ನು ಮುಂದೂಡಿರುವ ಪಿಯು ಬೋರ್ಡ್​ ಪರೀಕ್ಷೆಗೆ ಇನ್ನು ಸಮಯ ಇರುವ ಹಿನ್ನಲೆ ಯಾವುದೇ ನಿರ್ಧಾರ ಮಾಡದೇ, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ. 2): ಕೋವಿಡ್​ ಸಾಂಕ್ರಾಮಿಕತೆ ಹಿನ್ನಲೆ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ CBSE, ICSE 12 ನೇ ತರಗತಿ ಪರೀಕ್ಷೆ ರದ್ದು ಮಾಡಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಪಿಯುಸಿ ಪರೀಕ್ಷೆ ರದ್ದಾಗಲಿದೆಯಾ ಎಂಬ ಕುತೂಹಲ ಮೂಡಿದೆ. ಈಗಾಗಲೇ ಪೋಷಕರು ಕೂಡ ಕೇಂದ್ರದ ನೀತಿಯನ್ನೇ ಅನುಸರಿಸುವಂತೆ ಕೋರಿದ್ದಾರೆ. ಈಗಾಗಲೇ ಒಂದು ಬಾರಿ ಪರೀಕ್ಷೆಯನ್ನು ಮುಂದೂಡಿರುವ ಪಿಯು ಬೋರ್ಡ್​ ಪರೀಕ್ಷೆಗೆ ಇನ್ನು ಸಮಯ ಇರುವ ಹಿನ್ನಲೆ ಯಾವುದೇ ನಿರ್ಧಾರ ಮಾಡದೇ ಇಲಾಖೆ ಮಾತ್ರ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಸೂಚನೆ ನೀಡಿಲ್ಲ. 



ಕೇಂದ್ರ ಸರ್ಕಾರ ಬೋರ್ಡ್​ ಪರೀಕ್ಷೆ ರದ್ದು ಮಾಡಿದ ಬೆನ್ನಲ್ಲೇ  ರಾಜ್ಯ ಪಠ್ಯಕ್ರಮ 10 ಹಾಗೂ ದ್ವಿತೀಯ ಪಿಯು ಪರೀಕ್ಷೆಗಳು ರದ್ದಾಗುತ್ತಾ ಎನ್ನುವ ಪ್ರಶ್ನೆ ಕಾಡಿದೆ. ಆದರೆ, ಈ ಬಗ್ಗೆ ಶಿಕ್ಷಣ ಸಚಿವರು ಇನ್ನು ಸ್ಪಷ್ಟನೆ ನೀಡಿಲ್ಲ. ಅಷ್ಟೇ ಅಲ್ಲದೇ, ಕಳೆದ ಮೇ 23ಕ್ಕೆ ನಡೆದ ಕೇಂದ್ರ ಶಿಕ್ಷಣ ಸಚಿವರ ಸಭೆಯಲ್ಲೂ ಕೂಡ ಪರೀಕ್ಷೆ ನಡೆಸುವ ಕುರಿತು ಒಲವು ವ್ಯಕ್ತ ಪಡಿಸಿದ್ದರು. ಪರೀಕ್ಷೆಗೆ ಸಮಯ ಇರುವ ಹಿನ್ನಲೆ ಆ ವೇಳೆಗೆ ಸೋಂಕು ತಹಬದಿಗೆ ಬರಲಿದೆ ಎನ್ನುವ ಅಭಿಪ್ರಾಯವನ್ನು ಸಚಿವ ಸುರೇಶ್​ ಕುಮಾರ್​ ತಿಳಿಸಿದ್ದರು. ಅಲ್ಲದೇ ದ್ವಿತೀಯ ಪಿಯು ಪರೀಕ್ಷೆ ಅತ್ಯಗತ್ಯ. ಪರೀಕ್ಷೆ ಯಾವುದೇ ಮಾದರಿಯಲ್ಲಿದ್ದರೂ ಪರವಾಗಿಲ್ಲ, ಪರೀಕ್ಷೆ ನಡೆಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದರು.

ಪೋಷಕರದ್ದು ಪರೀಕ್ಷೆ ರದ್ದತಿಗೆ ಒತ್ತಾಯ.. ಪರೀಕ್ಷೆ ನಡೆಸುವಂತೆ ರುಪ್ಸಾ ಆಗ್ರಹ.!!

ಇದರ ಬೆನ್ನಲ್ಲೆ ರಾಜ್ಯ ಪಠ್ಯಕ್ರಮ ದ್ವಿತೀಯ ಪಿಯು ಪರೀಕ್ಷೆಗಳ ಬಗ್ಗೆ ಚರ್ಚೆ ತಾರಕಕ್ಕೇರಿದೆ. ಈ ನಡುವೆ ಪೋಷಕರು ಪರೀಕ್ಷೆ ನಡೆಸುವುದು ಬೇಡ ಎಂದು ಹೇಳಿದೆ. ಪೋಷಕರ ಸಮನ್ವಯ ಸಮಿತಿ ಸದಸ್ಯ ಯೋಗಾನಂದ್ ಮತನಾಡಿ, CBSE ಮತ್ತು ICSE ಹಾಗೂ ರಾಜ್ಯ ಪಠ್ಯಕ್ರಮ ವಿದ್ಯಾರ್ಥಿಗಳ ನಡುವೆ ತಾರತಮ್ಯ ಉಂಟು ಮಾಡಬಾರದು. ಮಕ್ಕಳ ಆರೋಗ್ಯ ಮುಖ್ಯ. ಸದ್ಯದ ಮಟ್ಟಿಗೆ ಪರೀಕ್ಷೆ ನಡೆಸದೆ ಇರುವುದು ಒಳ್ಳೆಯದು ಅಂತ ಹೇಳಿದ್ದಾರೆ.

ಪರೀಕ್ಷೆ ನಡೆಸುವ ಬಗ್ಗೆ ಖಾಸಗಿ ಶಾಲೆಗಳ‌ ಸಂಘಟನೆಗಳು ಒಲವು ವ್ಯಕ್ತಪಡಿಸಿದೆ. 2020ನೇ ಸಾಲಿನಲ್ಲೂ ಕೂಡ ಕೊರೋನಾ ನಡುವೆ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಅನುಭವ ರಾಜ್ಯ ಸರ್ಕಾರಕ್ಕಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಪ್ರಶ್ನೆ ಪತ್ರಿಕೆಯನ್ನು ಸರಳೀಕೃತಗೊಳಿಸಿ ಪರೀಕ್ಷೆ ನಡೆಸಬೇಕು. ಒಂದು ವೇಳೆ ಪರೀಕ್ಷೆ ರದ್ದಾದರೆ ಮಕ್ಕಳ‌ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡು ಸಾಧ್ಯವಿರುವ ರೀತಿಯಲ್ಲಿ ಪರೀಕ್ಷೆ ನಡೆಸುವುದು ಸೂಕ್ತ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

ಆದರೆ ಖಾಸಗಿ ಶಾಲೆಗಳ ಒಕ್ಕೂಟದ ಈ ಅಭಿಪ್ರಾಯಕ್ಕೆ ಸೆಡ್ಡು ಹೊಡೆಯುವಂತೆ ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಬೋರ್ಡ್ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕಾಲೇಜು ಮಟ್ಟದಲ್ಲಿ ಆಯಾ ಶಿಕ್ಷಣ ಸಂಸ್ಥೆಗಳು ಪರೀಕ್ಷೆ ನಡೆಸುವಂತೆ ಸಲಹೆಯನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಆದರೆ ಇಷ್ಟೆಲ್ಲಾ ಗೊಂದಲಗಳಿದ್ದರೂ  ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಈಗಾಗಲೇ ದ್ವೀತಿಯ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಅಧಿಕೃತ ದಿನಾಂಕವನ್ನು ಹೊರಡಿಸಿಲ್ಲ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
Published by:Seema R
First published: