ಬೆಂಗಳೂರು(ಡಿ.10): ಕರ್ನಾಟಕದ (Karnataka) ಆಡಳಿತಾರೂಢ ಬಿಜೆಪಿ ಸರ್ಕಾರ (BJP Govt) ಮೈಸೂರಿನ ರಾಜ ಟಿಪ್ಪು ಸುಲ್ತಾನ್ (Tipu Sulthan) ಜಾರಿಗೆ ತಂದಿದ್ದ ‘ಸಲಾಂ ಆರತಿ’ ಎಂಬ ಆಚರಣೆಯನ್ನು ಮರುನಾಮಕರಣ ಮಾಡಲು ನಿರ್ಧರಿಸಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ ಅಡಿಯಲ್ಲಿ ಬರುವ ಕರ್ನಾಟಕ ಧರ್ಮಾಮಿಕ ಪರಿಷತ್ತು ಅನಾದಿ ಕಾಲದ ಆಚರಣೆಯನ್ನು ಬದಲಾಯಿಸುವ ಘೋಷಣೆ ವಿವಾದವನ್ನು ಹುಟ್ಟುಹಾಕುವ ಸಾಧ್ಯತೆಯಿದೆ. ಮೈಸೂರಿನ ದೊರೆ ಟಿಪ್ಪು ಸುಲ್ತಾನನ ಕಾಲದಲ್ಲಿ ‘ಸಲಾಂ ಆರತಿ’ಯ (Salaam Aarti)ಆಚರಣೆ ಆರಂಭವಾಗಿತ್ತೆಂಬುವುದು ಉಲ್ಲೇಖನೀಯ.
ಮೈಸೂರು ಸಾಮ್ರಾಜ್ಯದ ಕಲ್ಯಾಣಕ್ಕಾಗಿ ಟಿಪ್ಪು ತನ್ನ ಪರವಾಗಿ ಪೂಜೆಯನ್ನು ಮಾಡಿದ್ದ. ಆದರೆ ಬ್ರಿಟಿಷರ ವಿರುದ್ಧ ಹೋರಾಡಿ ಟಿಪ್ಪು ಮೃತಪಟ್ಟ ಬಳಿಕವೂ ಈ ಆವರಣೆ ರಾಜ್ಯದ ವಿವಿಧ ಹಿಂದೂ ದೇವಾಲಯಗಳಲ್ಲಿ ಮುಂದುವರೆದಿವೆ. ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ಈ ಹಿಂದೆ ರಾಜ್ಯಾಡಳಿತದ ಶ್ರೇಯೋಭಿವೃದ್ಧಿಗಾಗಿ ನಡೆಸಲಾಗುತ್ತಿದ್ದ ಈ ಆಚರಣೆ ಇನ್ನು ಜನರ ಕಲ್ಯಾಣಕ್ಕಾಗಿ ನಡೆಯಲಿದೆ ಎಂದು ಹೇಳಿರುವುದಾಗಿ ಸಿಯಾಸತ್ ದಿನಪತ್ರಿಕೆ ವರದಿ ಮಾಡಿದೆ. ಇನ್ಮುಂದೆ ಈ ಆಚರಣೆಗೆ ‘ನಮಸ್ಕಾರ ಆರತಿ’ ಎಂದು ಗುರುತಿಸಿಕೊಳ್ಳಲಿದೆ.
ಹಿಂದಿನ ಮೈಸೂರು ಸಾಮ್ರಾಜ್ಯದ ಪುತ್ತೂರು, ಸುಬ್ರಹ್ಮಣ್ಯ, ಕೊಲ್ಲೂರು, ಮೇಲುಕೋಟೆ ಮತ್ತು ಇತರ ಪ್ರಸಿದ್ಧ ದೇವಾಲಯಗಳಲ್ಲಿ ಈ ಧಾರ್ಮಿಕ ವಿಧಿಗಳನ್ನು ನಡೆಸಲಾಗುತ್ತಿತ್ತು. ಹಿಂದೂ ಸಂಘಟನೆಗಳ ಪ್ರಕಾರ, 'ಸಲಾಂ ಆರತಿ' ಗುಲಾಮಗಿರಿಯ ಸಂಕೇತವಾಗಿದೆ. ಇದು ಪ್ರಾಬಲ್ಯವನ್ನು ಸ್ಥಾಪಿಸಲು ಆಚರಣೆಯಲ್ಲಿದೆ. ಹೀಗಾಗಿ ಈ ಆಚರಣೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದಾಗ್ಯೂ, ಈ ಸಂಪ್ರದಾಯವು ಹಿಂದೂ ಮತ್ತು ಮುಸ್ಲಿಮರ ನಡುವಿನ ಬಾಂಧವ್ಯ ಮತ್ತು ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಅದನ್ನು ಶ್ರೇಷ್ಠ ಸಂಪ್ರದಾಯವಾಗಿ ಮುಂದುವರಿಸಬೇಕು ಎಂದು ಬುದ್ಧಿಜೀವಿಗಳು ಪ್ರತಿಪಾದಿಸುತ್ತಾರೆ.
ಶಶಿಕಲಾ ಜೊಲ್ಲೆ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿಕಲಾ ಜೊಲ್ಲೆ ನಮ್ಮ ಸಂಪ್ರದಾಯದ ಹೆಸರನ್ನು ನೀಡುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವಿಸ್ತ್ರುತವಾಗಿ ಚರ್ಚಿಸಲಾಗಿದೆ. ಈ ಪೂಜಾಕಾರ್ಯಗಳ ಹೆಸರನ್ನ ನಮ್ಮ ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಸಂಧರ್ಭಗಳಲ್ಲಿ ದೀವಟಿಗೆ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ, ಸಲಾಂ ಮಂಗಳಾರತಿ ಮತ್ತು ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿದೆ. ಇದನ್ನ ಬದಲಾಯಿಸಬೇಕು ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಕ್ತಾದಿಗಳಿಂದ ಸಾಕಷ್ಟು ಒತ್ತಾಯ ಇರುವ ಬಗ್ಗೆ, ಧಾರ್ಮಿಕ ಪರಿಷತ್ತಿನ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದರ ಹಿನ್ನಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವಿಸ್ತ್ರುತ ಚರ್ಚೆಯನ್ನು ನಡೆಸಲಾಯಿತು.
ಇದನ್ನೂ ಓದಿ: Maharashtra Villages: ನಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ; ಜಿಲ್ಲಾಧಿಕಾರಿ ಪತ್ರ ಬರೆದ ಗ್ರಾಮಸ್ಥರು
ಈ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ದೇವಾಲಯಗಳಲ್ಲಿ ಇನ್ನು ಮುಂದೆ “ದೀವಟಿಗೆ ಸಲಾಂ” ಎಂಬ ಪದದ ಬದಲಾಗಿ “ದೀವಟಿಗೆ ನಮಸ್ಕಾರ” ಎಂದು, “ಸಲಾಂ ಆರತಿ” ಎಂಬ ಪದದ ಬದಲಾಗಿ “ಆರತಿ ನಮಸ್ಕಾರ” ಎಂದು ಹಾಗೂ ʼಸಲಾಂ ಮಂಗಳಾರತಿ” ಎಂಬ ಪದದ ಬದಲಾಗಿ “ಮಂಗಳಾರತಿ ನಮಸ್ಕಾರ” ಎಂದು ಹೆಸರನ್ನು ಬದಲಾಯಿಸಿಕೊಂಡು ಸೇವೆಗಳನ್ನು ಮತ್ತು ಸೇವಾಕಾರ್ಯಗಳನ್ನು ಮುಂದುವರೆಸಲು ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ